ಭರತನಾಟ್ಯ ನೆಲದ ಸಾಂಸ್ಕೃತಿಕ ಶ್ರೀಮಂತಿಕೆ ಬಿಂಬಿಸುವ ಕಲೆ: ಡಾ.ವಿಜಯ ಬಲ್ಲಾಳ್
ಉಡುಪಿ, ಡಿ.24: ಭರತನಾಟ್ಯ ಈ ನೆಲದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಬಿಂಬಿಸುವ ವಿಶಿಷ್ಟ ಕಲೆಯಾಗಿದೆ. ನಾಟ್ಯ ಮತ್ತು ಸಂಗೀತದ ಸೇವೆಯಿಂದ ದೇವರು ಸಂತುಷ್ಟರಾಗುತ್ತಾರೆ ಎಂದು ಅಂಬಲಪಾಡಿ ಶ್ರೀಜನಾರ್ದನ ಮಹಾ ಕಾಳಿ ದೇವಸ್ಥಾನದ ಧರ್ಮದರ್ಶಿ ಡಾ.ನಿ.ಬೀ.ವಿಜಯ ಬಲ್ಲಾಳ್ ಹೇಳಿದ್ದಾರೆ.
ಅಂಬಲಪಾಡಿ ಶ್ರೀಜನಾರ್ದನ ಮಹಾಕಾಳಿ ದೇವಸ್ಥಾನದ ಆಶ್ರಯದಲ್ಲಿ ಕರ್ನಾಟಕ ಕರಾವಳಿ ನೃತ್ಯ ಪರಿಷತ್, ಕರಾವಳಿ ನೃತ್ಯ ಕಲಾವಿದರ ನೃತ್ಯ ಸಮ್ಮೇಳನ ಸಮಿತಿ ಸಹಯೋಗದೊಂದಿಗೆ ಅಂಬಲಪಾಡಿ ದೇವಳದ ಆವರಣದಲ್ಲಿ ರವಿವಾರ ಆಯೋಜಿಸಲಾದ ಕರಾವಳಿ ಭರತನಾಟ್ಯ ಕಲಾವಿದರ ನೃತ್ಯ ಸಮ್ಮೇಳನ ‘ನೃತ್ಯೋತ್ಕರ್ಷ’ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಭರತನಾಟ್ಯ ಕ್ಷೇತ್ರಕ್ಕೆ ಇನ್ನಷ್ಟು ಕೊಡುಗೆ ನೀಡುವ ಪ್ರಯತ್ನವಾಗಿದ್ದು, ಜನರ ಮಾನಸಿಕ ಒತ್ತಡ ನಿವಾರಣೆಗೆ ನೆಮ್ಮದಿ ಲಭಿಸಲು ಭರತನಾಟ್ಯ ಶಾಸ್ತ್ರ ಕಲೆ ಉಪಯುಕ್ತವಾಗಿದೆ. ಇದರಿಂದ ಜ್ಞಾನವು ವೃದ್ಧಿಯಾಗುತ್ತದೆ ಎಂದರು.
ಸಮ್ಮೇಳನಾಧ್ಯಕ್ಷ, ನಾಟ್ಯಾಚಾರ್ಯ ಪ್ರೊ.ಕೆ.ರಾಮಮೂರ್ತಿ ರಾವ್ ಮಾತನಾಡಿ, ವರ್ಷದಿಂದ ವರ್ಷಕ್ಕೆ ಭರತನಾಟ್ಯ ಕಲೆಯುತ್ತ ಆಕರ್ಷಿತರಾಗು ವರ ಸಂಖ್ಯೆ ಹೆಚ್ಚುತ್ತಿದೆ. ಭರತನಾಟ್ಯದ ಎಲ್ಲ ಕಲಾವಿದರು ಭರತಮುನಿಯ ಅನುಯಾಯಿ ಗಳಾಗಿದ್ದಾರೆ. ಭರತನಾಟ್ಯ ಕ್ಲಾಸ್‌ನಿಂದ ಮಾಸ್‌ನತ್ತ ಕೊಂಡೊಯ್ಯುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ತಿಳಿಸಿದರು.
ಕಸಾಪ ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ಸಮ್ಮೇಳನ ಸಮಿತಿ ಅಧ್ಯಕ್ಷ ಕಮಲಾಕ್ಷ ಆಚಾರ್, ಕಾರ್ಯಾಧ್ಯಕ್ಷ ಯು.ಕೆ.ಪ್ರವೀಣ್, ಪರಿಷತ್ತಿನ ಪ್ರಮುಖರಾದ ನಯನಾ ರೈ, ಸುರೇಶ್ ಅತ್ತಾವರ, ರಾಜಶ್ರೀ ಉಲ್ಲಾಳ, ಶಾರಧಾ ಮಣಿ ಶೇಖರ್, ಶ್ರೀಧರ್ ಹೊಳ್ಳ ಮೊದಲಾದವರು ಉಪಸ್ಥಿತರಿದ್ದರು.
ಸುಮಂಗಲಾ ರತ್ನಾಕರ ರಾವ್ ನಿರೂಪಿಸಿದರು. ಬಳಿಕ ಭರತನಾಟ್ಯ ವಿಚಾರ ಗೋಷ್ಠಿ, ಸಂವಾದ ನಡೆಯಿತು. ಸಮ್ಮೇಳನದಲ್ಲಿ 250ಕ್ಕೂ ಅಧಿಕ ನೃತ್ಯ ಗುರು ಗಳು, 750ಕ್ಕೂ ಅಧಿಕ ನೃತ್ಯ ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಮಂದಿ ಭಾಗವಹಿಸಿದ್ದರು.