×
Ad

ಕನ್ನಡ ಶಾಲೆಯನ್ನು ಉಳಿಸುವುದೇ ಒಂದು ಸಾಧನೆ: ಸುಬ್ರಹ್ಮಣ್ಯ ತಂತ್ರಿ

Update: 2024-01-02 21:36 IST

ಉದ್ಯಾವರ, ಜ.2: ಆಂಗ್ಲ ಮಾಧ್ಯಮ ಶಾಲೆಗಳ ಸವಾಲುಗಳನ್ನು ಎದುರಿಸಿ ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸುವುದೇ ಈಗ ಒಂದು ಸಾಧನೆ ಎನ್ನುವಂತಾಗಿದೆ. ಈಗಿನ ಕಾಲದಲ್ಲಿ 300-350 ವಿದ್ಯಾರ್ಥಿಗಳನ್ನು ಶಾಲೆ ಯೊಂದು ಹೊಂದಿರುವುದೆಂದರೆ ಸಣ್ಣ ಸಾಧನೆಯಲ್ಲ. ಇದರ ಹಿಂದೆ ಎಲ್ಲರ ಪರಿಶ್ರಮ ಇದೆ ಎಂದು ಕಟಪಾಡಿ ಎಸ್.ವಿ.ಎಸ್ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಮುಖ್ಯೋಪಾಧ್ಯಾಯರಾದ ಸುಬ್ರಹ್ಮಣ್ಯ ತಂತ್ರಿ ಹೇಳಿದ್ದಾರೆ.

ಉದ್ಯಾವರದ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯ ವರ್ಷದ ಹರ್ಷ ನೂರರ್ವತ್ತಮೂರು ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡುತಿದ್ದರು.

ಕನ್ನಡ ಶಾಲೆಯನ್ನು ಉಳಿಸುವ ನಿಟ್ಟಿನಲ್ಲಿ ನೀವು ಯಶಸ್ವಿಯಾಗಿದ್ದೀರಿ. ಶಾಲೆಯ ಶಿಕ್ಷಕರು, ಆಡಳಿತ ಮಂಡಳಿ ಮತ್ತು ಊರವರ ಫಲಾಪೇಕ್ಷೆ ಇಲ್ಲದ ಶ್ರಮವೇ ಇದಕ್ಕೆ ಕಾರಣ. ನಾವೆಲ್ಲಾ ಕನ್ನಡ ಶಾಲೆಗಳನ್ನು ಉಳಿಸುವ ಕಾಯಕದಲ್ಲಿ ತೊಡಗಿಕೊಳ್ಳೋಣ ಎಂದು ಅವರು ಶುಭ ಹಾರೈಸಿದರು.

ಮತ್ತೊಬ್ಬ ಮುಖ್ಯ ಅತಿಥಿ ಕಡೆಕಾರು ಕ್ಲಸ್ಟರ್‌ನ ಸಂಪನ್ಮೂಲ ವ್ಯಕ್ತಿ ಸುಧೀರ್ ಮಾತನಾಡಿ, ಇಂದಿನ ವಿದ್ಯಾರ್ಥಿಗಳಿಗೆ ಪಾಠದೊಂದಿಗೆ ಪಾಠ್ಯೇತರ ಚಟುವಟಿಕೆಗಳೂ ಅತಿ ಮುಖ್ಯ. ಇದು ಅವರ ಸರ್ವಾಂಗಿಣ ಬೆಳೆವಣಿಗೆಗೆ ಪೂರಕವಾಗುತ್ತದೆ. ಇಂದಿನ ವಿದ್ಯಾರ್ಥಿಗಳು ಮೊಬೈಲ್ ಅನ್ನು ಧನಾತ್ಮಕವಾಗಿ ಉಪಯೋಗಿಸಿ ಕ್ರಿಯಶೀಲವಾದ ಬೆಳವಣಿಗೆಯನ್ನು ಕಾಣಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಲಾ ಸಂಚಾಲಕ ಸುರೇಶ್ ಶೆಣೈ ಮಾತನಾಡಿ, ಕನ್ನಡ ಶಾಲೆಯ ಅಸ್ತಿತ್ವವನ್ನು ಉಳಿಸಿಕೊಳ್ಳುವ ಹೋರಾಟದ ಪರಿಯನ್ನು ಜನತೆ ಮುಂದೆ ಇಟ್ಟು ಶಾಲಾ ಉಳಿವಿಗಾಗಿ ತಾವೆಲ್ಲರೂ ಸಹಕರಿಸಬೇಕು ಎಂದು ಮನವಿಯನ್ನು ಮಾಡಿದರು.

ವೇದಿಕೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಹೇಮಲತಾ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಸಂಧ್ಯಾ ವಿ. ಅಮೀನ್, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಉಮೇಶ ಕರ್ಕೇರ, ಶಾಲಾ ವಿದ್ಯಾರ್ಥಿ ನಾಯಕ ಸಾಹಿಲ್ ಮನಿಯಾರ್ ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ಶಾಲಾಡಳಿತ ಮಂಡಳಿ ಅಧ್ಯಕ್ಷ ಗಣಪತಿ ಕಾರಂತ್ ಸ್ವಾಗತಿಸಿದರು. ಶಿಕ್ಷಕಿ ಅಕ್ಷತಾ ವಂದಿಸಿ, ಶಿಕ್ಷಕಿ ನಾಸಿರ ಕಾರ್ಯಕ್ರಮ ನಿರ್ವಹಿಸಿದರು. ಇದಕ್ಕೆ ಮೊದಲು ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಯಲ್ಲಮ್ಮ ಮರಿಸ್ವಾಮಿ ಧ್ವಜಾರೋಹಣ ನೆರವೇರಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ದೇವದಾಸ್ ರಾವ್ ಕೂಡ್ಲಿಯವರ ನಿರ್ದೇಶನದಲ್ಲಿ ಪ್ರಮೀಳಾರ್ಜುನ - ಘೋರ ಭೀಷಣ ಯಕ್ಷಗಾನ ಪ್ರದರ್ಶನಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News