×
Ad

ಮೌನೇಶ್ ಬಡಿಗೇರರ ಕೃತಿಗೆ ರಂಗಭೂಮಿಯ ಅಂಬಾತನಯ ಮುದ್ರಾಡಿ ಸಂಸ್ಮರಣಾ ಪ್ರಶಸ್ತಿ

Update: 2024-01-09 20:56 IST

ಉಡುಪಿ: ಅಧ್ಯಾಪಕ, ಕವಿ, ಲೇಖಕ, ಯಕ್ಷಗಾನ ಕಲಾವಿದ, ಅರ್ಥಧಾರಿ ಅಂಬಾತನಯ ಮುದ್ರಾಡಿ ಅವರ ಸಂಸ್ಮರಣೆ ಯಲ್ಲಿ ಉಡುಪಿ ರಂಗಭೂಮಿಯು ತಲ್ಲೂರು ಫ್ಯಾಮಿಲಿ ಟ್ರಸ್ಟ್‌ನ ಸಹಯೋಗದಲ್ಲಿ ನೀಡುವ ಪುಸ್ತಕ ಪ್ರಶಸ್ತಿಯ ಮೊದಲ ವರ್ಷದ ಪುರಸ್ಕಾರಕ್ಕೆ ಮೌನೇಶ್ ಬಡಿಗೇರ ಅವ ‘ಅಭಿನಯ ಕಲಿಸಲು ಸಾಧ್ಯವಿಲ್ಲ’ ಕೃತಿ ಆಯ್ಕೆಯಾಗಿದೆ ಎಂದು ರಂಗಭೂಮಿ ಉಡುಪಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಂಬಾತನಯ ಮುದ್ರಾಡಿ ಅವರ ಸಂಸ್ಮರಣೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ ಪ್ರಕಟವಾದ ರಂಗಭೂಮಿಗೆ ಪ್ರಸ್ತುತವಾದ ಗಂಭೀರ ಚಿಂತನೆಯ ನಾಟಕೇತರ ಸಾಹಿತ್ಯ ಕೃತಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಮೊದಲ ವರ್ಷದ ಈ ಪ್ರಶಸ್ತಿಯು ಪ್ರಶಸ್ತಿ ಪತ್ರ, ಸ್ಮರಣಿಕೆ ಹಾಗೂ 15000ರೂ. ಬಹುಮಾನವನ್ನು ಒಳಗೊಂಡಿರುತ್ತದೆ.

ಇದೇ ಜ.28ರಂದು ಉಡುಪಿಯ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ರಂಗಕರ್ಮಿಗಳಾದ ಡಾ.ಹೇಮಾ ಪಟ್ಟಣಶೆಟ್ಟಿ, ಮೂರ್ತಿ ದೇರಾಜೆ ಹಾಗೂ ಪ್ರೊ.ಉಪೇಂದ್ರ ಸೋಮಯಾಜಿ ಅವರು ತೀರ್ಪುಗಾರರಾಗಿ ಸಹಕರಿಸಿದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರಥಮ ವರ್ಷದ ಪ್ರಶಸ್ತಿಗೆ ಆಯ್ಕೆಯಾದ ಮೌನೇಶ ಬಡಿಗೇರರ ‘ಅಭಿನಯ ಕಲಿಸಲು ಸಾಧ್ಯವಿಲ್ಲ’ ಕೃತಿಯು ಅಭಿನಯದ ವಿಭಿನ್ನ ತರಬೇತಿ ಳಿಗೆ ಪೂರ್ವಭಾವಿಯಾಗಿ ಆರಂಭಿಕ ನಟರೊಬ್ಬರು ಮಾಡಿಕೊಳ್ಳಬೇಕಾದ ಪ್ರಾಥಮಿಕ ಸಿದ್ಧತೆಗಳನ್ನು ರಂಗಭೂಮಿ ಮತ್ತು ಇತರ ಮಾಧ್ಯಮಗಳಲ್ಲಿ ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿರುವ ಸವ್ಯಸಾಚಿಯೊಬ್ಬರ ಚಿಂತನಾರ್ಹ ವಿಶ್ಲೇಷಣೆಯಂತಿದೆ.

ಕೆಲ ವರ್ಷಗಳ ಹಿಂದೆ ರಂಗಭೂಮಿ ಉಡುಪಿ ಏರ್ಪಡಿಸಿದ್ದ ವಿಶ್ವ ಕನ್ನಡ ನಾಟಕ ರಚನಾ ಸ್ಪರ್ಧೆಯಲ್ಲಿಯೂ ಮೌನೇಶ ಬಡಿಗೇರರ ‘ವಿಶಾಂಕೇ’ ಎಂಬ ನಾಟಕವು ಪ್ರಥಮ ಬಹುಮಾನ ಪಡೆದಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ಅಂಬಾತನಯ ಮುದ್ರಾಡಿ ಅವರ ಸಂಸ್ಮರಣೆಯಲ್ಲಿ ತಲ್ಲೂರು ಫ್ಯಾಮಿಲಿ ಟ್ರಸ್ಟ್‌ನ ಸಹಯೋಗದಲ್ಲಿ ರಂಗಭೂಮಿ ನೀಡುವ ಎರಡನೇ ವರ್ಷದ ಪುರಸ್ಕಾರಕ್ಕೆ 2022 ಹಾಗೂ 2023ನೇ ಸಾಲಿನಲ್ಲಿ ಪ್ರಥಮ ಮುದ್ರಣವನ್ನು ಕಂಡ ಸ್ವತಂತ್ರ ಕೃತಿಗಳನ್ನು ಪರಿಗಣಿಸಲಾಗುತ್ತದೆ ಎಂದು ತಲ್ಲೂರು ಶಿವರಾಮ ಶೆಟ್ಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News