×
Ad

ಹತ್ತು ಹಲವು ನೆಲೆಗಳಲ್ಲಿ ಪ್ರತಿಭೆ ತೋರಿದ ಅಮೃತ ಸೋಮೇಶ್ವರ: ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದಲ್ಲಿ ಶೃದ್ದಾಂಜಲಿ ಸಭೆ

Update: 2024-01-09 20:58 IST

ಉಡುಪಿ: ತುಳುನಾಡಿನ ಹಿರಿಯ ಸಾಹಿತಿ, ವಿದ್ವಾಂಸ ಡಾ.ಅಮೃತ ಸೋಮೇಶ್ವರ ಅವರ ನಿಧನ ನಿಜವಾದ ಅರ್ಥದಲ್ಲಿ ಸಾಹಿತ್ಯ ಲೋಕಕ್ಕೆ ಅಪಾರ ನಷ್ಟವನ್ನುಂಟು ಮಾಡಿದೆ ಅವರ ವಿದ್ಯಾರ್ಥಿಯಾಗಿದ್ದ ಹಿರಿಯ ವಿದ್ವಾಂಸ, ನಿವೃತ್ತ ಪ್ರಾಂಶು ಪಾಲ ಡಾ.ಪಾದೇಕಲ್ಲು ವಿಷ್ಣು ಭಟ್ಟ ಹೇಳಿದ್ದಾರೆ.

ಇತ್ತೀಚೆಗೆ ನಿಧನರಾದ ಅಮೃತ ಸೋಮೇಶ್ವರರಿಗೆ ಶೃದ್ದಾಂಜಲಿ ಅರ್ಪಿಸಲು ವಿವಿಧ ಸಂಘಟನೆಗಳ ವತಿಯಿಂದ ಉಡುಪಿ ಎಂಜಿಎಂ ಕಾಲೇಜಿನ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದಲ್ಲಿ ಸೋಮವಾರ ಸಂಜೆ ನಡೆದ ಸಂತಾಪ ಸೂಚಕ ಸಭೆಯಲ್ಲಿ ಅವರು ಮಾತನಾಡುತಿದ್ದರು.

ಸೋಮೇಶ್ವರ ಅವರು ಕಾದಂಬರಿಕಾರರಾಗಿ, ಅನುವಾದಕರಾಗಿ, ಕಥಾಸಂಕಲನ, ಕವನ ಸಂಕಲನ, ರೇಡಿಯೋ ರೂಪಕ, ಧ್ವನಿಸುರುಳಿಗೆ ಸಾಹಿತ್ಯ, ನಾಟಕ, ಯಕ್ಷಗಾನ ಪ್ರಸಂಗಗಳು, ಯಕ್ಷಗಾನ ಕೃತಿಗಳು, ಗಾದೆಗಳು, ಶಬ್ದಕೋಶ, ವಚನ ಸಾಹಿತ್ಯ, ಪಾಡ್ದನ ಸಂಗ್ರಹ ಹೀಗೆ ಹತ್ತು ಹಲವು ನೆಲೆಗಳಲ್ಲಿ ತಮ್ಮ ಪ್ರತಿಭೆಯನ್ನು ತೋರ್ಪಡಿಸಿದವರು. ಅವರು ಕೈಯಾಡಿಸದ ಕ್ಷೇತ್ರವೇ ಇಲ್ಲವೆಂದು ಹೇಳಬಹುದಾದಷ್ಟು ವಿಶಾಲವಾದ ಕಾರ್ಯಕ್ಷೇತ್ರ ಅವರದ್ದಾಗಿತ್ತು ಎಂದರು.

ಹಿರಿಯ ವಿಮರ್ಶಕ ಪ್ರೊ.ಮುರಳೀಧರ ಉಪಾಧ್ಯಾಯರು ಮಾತನಾಡಿ ಸೋಮೇಶ್ವರ ಅವರು ಪ್ರಾಧ್ಯಾಪಕರಾಗಿದ್ದಾಗ ಹೇಗೆ ವಿದ್ಯಾರ್ಥಿಗಳನ್ನು ಹುರಿದುಂಬಿಸುತ್ತಿದ್ದರು ಮತ್ತು ಅವರ ಪುಸ್ತಕಗಳಲ್ಲಿ ಬರೆಯಲ್ಪಟ್ಟ ಹಾಗೂ ಸಂದರ್ಶನಗಳಲ್ಲಿ ಉಲ್ಲೇಖಗೊಂಡಿರುವ ಕೆಲವು ಘಟನೆಗಳನ್ನು ಪ್ರಸ್ತಾಪಿಸುವುದರ ಮೂಲಕ ಅವರ ಆತ್ಮಕ್ಕೆ ಸದ್ಗತಿಯನ್ನು ಕೋರಿದರು.

ಡಾ.ಸುಬ್ಬಣ್ಣಯ್ಯ ಕೋಟಿಗದ್ದೆ ಅವರು ಅಮೃತರ ವಿದ್ಯಾರ್ಥಿಯಾಗಿ ಜೀವನದ ತಮ್ಮ ಅನುಭವಗಳನ್ನು ಹಂಚಿಕೊಂಡರು.

ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ. ಜಗದೀಶ್ ಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಬೃಹತ್ ಕೋಶ ತುಳು ನಿಘಂಟು ರಚನಾ ಸಮಿತಿಯ ಸದಸ್ಯರೂ ಆಗಿದ್ದ ಅವರಿಗೆ ಕೇಂದ್ರದ ಮೂಲಕ ಕೊಡ ಮಾಡುವ ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿ ಯೂ ಲಭಿಸಿದೆ. ಅವರ ಅಗಲುವಿಕೆ ತುಂಬಾ ನೋವನ್ನುಂಟುಮಾಡಿದೆ ಎಂದರು.

ವೇದಿಕೆಯಲ್ಲಿ ಎಂ.ಜಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಲಕ್ಷ್ಮೀನಾರಾಯಣ ಕಾರಂತ, ಸಂಧ್ಯಾಕಾಲೇಜಿನ ಪ್ರಾಂಶುಪಾಲರಾದ ಡಾ. ದೇವಿದಾಸ್ ಎಸ್. ನಾಯಕ್ ಉಪಸ್ಥಿತರಿದ್ದರು. ಸಭೆಯಲ್ಲಿ ಫಣಿರಾಜ್, ಗಂಗಾಧರ ಕಿದಿಯೂರು, ನಾಗೇಶ್ ಉದ್ಯಾವರ ಮುಂತಾದವರು ಉಪಸ್ಥಿತರಿದ್ದರು.




Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News