×
Ad

ಯುವಶಕ್ತಿ ದೇಶದ ಭವಿಷ್ಯದ ಸಮೃದ್ಧಿಯ ಸಂಕೇತ: ಆನಂದ ಅಡಿಗ

Update: 2024-01-12 20:01 IST

ಉಡುಪಿ : ಯುವಶಕ್ತಿ ಈ ದೇಶದ ಭವಿಷ್ಯದ ಸಮೃದ್ಧಿಯ ಸಂಕೇತ. ಈ ಸಂಪತ್ತನ್ನು ಸರಿಯಾದ ಮಾರ್ಗದಲ್ಲಿ ತೊಡಗಿಸಿ ಕೊಳ್ಳುವ ಎಲ್ಲರ ಜವಾಬ್ದಾರಿ. ಈ ಮೂಲಕ ಯುವ ಶಕ್ತಿಯನ್ನು ದೇಶದ ಭವಿಷ್ಯದ ಆಸ್ತಿಯನ್ನಾಗಿಸಬೇಕು ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಜಿಲ್ಲಾ ಕಾರ್ಯದರ್ಶಿ ಆನಂದ್ ಬಿ. ಅಡಿಗ ಹೇಳಿದ್ದಾರೆ.

ನಗರದ ಪೂರ್ಣಪ್ರಜ್ಞಾ ಕಾಲೇಜಿನ ಪ್ರಜ್ಞಾ ಸಭಾಂಗಣದಲ್ಲಿ ನೆಹರು ಯುವ ಕೇಂದ್ರ ಉಡುಪಿ, ಪೂರ್ಣಪ್ರಜ್ಞಾ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಹಾಗೂ ಪೂರ್ಣಪ್ರಜ್ಞಾ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ಗಳ ಸಂಯುಕತ್ತ ಆಶ್ರಯದಲ್ಲಿ ಸ್ವಾಮಿ ವೇಕಾನಂದರ ಜನ್ಮದಿನದ ಪ್ರಯುಕ್ತ ಇಂದು ನಡೆದ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇಶ ಕಟ್ಟುವಲ್ಲಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಆದರ್ಶ ವ್ಯಕ್ತಿ ಸ್ವಾಮೀ ವಿವೇಕಾನಂದರು. ಅವರ ವಿಚಾರ ಧಾರೆ ಗಳನ್ನು ಯುವಜನತೆ ಜೀವನದಲ್ಲಿ ಅಳವಡಿಸಿಕೊಳ್ಳುವುದರೊಂದಿಗೆ ಸಮೃದ್ಧ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಬೇಕು. ಪ್ರತಿಯೊಬ್ಬರು ಸ್ವಾರ್ಥ ಮನೋಭಾವನೆ ಬಿಟ್ಟು ನಿಸ್ವಾರ್ಥದಿಂದ ಸಮಾಜಕ್ಕೆ ಸೇವೆ ಸಲ್ಲಿಸಬೇಕು. ಯುವ ಜನತೆಗೆ ಮಾರ್ಗದರ್ಶನ ನೀಡಿ, ಅವರ ಮನಸ್ಸನ್ನು ಅರಿತು ಸಮಾನ ಅವಕಾಶ ನೀಡಿದ್ದಲ್ಲಿ ದೇಶದ ಅಭಿವೃದ್ದಿ ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ವಸುದೇವ ತಿಲಕ್ ಸ್ವಾಮೀ ವೇಕಾನಂದರ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ರಸ್ತೆ ಸುರ ಕ್ಷತಾ ಸಪ್ತಾಹದ ಅಂಗವಾಗಿ ಭಾಗವಹಿಸಲಿರುವ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಲಾಯಿತು.

ಅಧ್ಯಕ್ಷತೆಯನ್ನು ಪೂರ್ಣಪ್ರಜ್ಞ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ನಿರ್ದೇಶಕ ಡಾ.ಭರತ್ ವಹಿಸಿದ್ದರು. ನೆಹರು ಯುವ ಕೇಂದ್ರದ ಸುಸೈಮನಿ, ಕಾರ್ಯಕ್ರಮ ಸಂಯೋಜಕಿ ಶ್ರೀರಕ್ಷಾ ಹಾಗೂ ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಯೋಜಕ ಮುರುಳಿ ಸ್ವಾಗತಿಸಿದರೆ, ವಿದ್ಯಾರ್ಥಿನಿ ಪ್ರೀತಿ ಕಾರ್ಯಕ್ರಮ ನಿರೂಪಿಸಿದರು.




Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News