ಶಾರದಾ ಪ.ಪೂ.ಕಾಲೇಜಿನ ಕೃತಿ ಕುಲಾಲ್‌ಗೆ ಯಂಗ್ ಲೀಡರ್ ಅವಾರ್ಡ್
ಕುಂದಾಪುರ, ಜ.13: ಮೂಡ್ಲಕಟ್ಟೆಯ ಐಎಂಜೆ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಆ್ಯಂಡ್ ಕಾಮರ್ಸ್‌ನ ಆಶ್ರಯದಲ್ಲಿ ವಿವೇಕಾ ನಂದ ಜಯಂತಿಯ ಪ್ರಯಕ್ತ ಶುಕ್ರವಾರ ಕಾಲೇಜು ಸಭಾಭವನದಲ್ಲಿ ಉಡುಪಿ ಹಾಗೂ ಉತ್ತರಕನ್ನಡ ಜಿಲ್ಲೆಗಳ ವಿವಿಧ ಕಾಲೇಜು ವಿದ್ಯಾಥಿಗಳಿಗಾಗಿ ಆಯೋಜಿಸಲಾದ ಐಎಂಜೆಐಎಸ್‌ಸಿ ಯಂಗ್ ಲೀಡರ್ ಅವಾರ್ಡ್-2024 ಸ್ಪರ್ಧೆಯನ್ನು ಉಡುಪಿ ಕುಂಜಿಬೆಟ್ಟಿನ ಶಾರದಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಕೃತಿ ಎಸ್.ಕುಲಾಲ್ ಗೆದ್ದುಕೊಂಡರು.
ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಆಯ್ದ 22 ಕಾಲೇಜುಗಳಲ್ಲಿ ನಡೆದ ಎರಡು ಹಂತದ ಸ್ಪರ್ಧೆಯಲಿಲ 200ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, 15 ಪದವಿ ಪೂರ್ವ ಕಾಲೇಜುಗಳ 45 ವಿದ್ಯಾರ್ಥಿಗಳು ಇಲ್ಲಿ ಶುಕ್ರವಾರ ನಡೆದ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಕೃತಿ ಕುಲಾಲ್ ಅವರು ಅಗ್ರಸ್ಥಾನಿಯಾಗುವ ಮೂಲಕ ಯಂಗ್ ಲೀಡರ್ ಅವಾರ್ಡ್‌ನೊಂದಿಗೆ 5,000ರೂ ನಗದು ಹಾಗೂ ಶಾಶ್ವತ ಫಲಕವನ್ನು ಪಡೆದರು. 2000ರೂ. ನಗದು ಮತ್ತು ಶಾಶ್ವತ ಫಲಕದೊಂದಿಗೆ ದ್ವಿತೀಯ ಸ್ಥಾನವನ್ನು ಅದೇ ಕಾಲೇಜಿನ ಕೈತಲಿನ್ ಪಡೆದರೆ ತೃತೀಯ ಸ್ಥಾನವನ್ನು ಭಟ್ಕಳದ ಸಿದ್ಧಾರ್ಥ ಪ.ಪೂ.ಕಾಲೇಜಿನ ರಚನಾ ಆಚಾರ್ಯ, ಚತುರ್ಥ ಸ್ಥಾನವನ್ನು ಕೋಟ ವಿವೇಕ ಪಿಯು ಕಾಲೇಜಿನ ಸಹನಾ ಕಾಮತ್ ಹಾಗೂ ಐದನೇ ಸ್ಥಾನವನ್ನು ಶಾರದಾ ಪ.ಪೂ.ಕಾಲೇಜಿನ ಪ್ರಫುಲ್ ಪಡೆದರು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಕುಂದಾಪುರದ ಭಂಡಾರ್‌ಕಾರ್ಸ್ ಕಾಲೇಜಿನ ನಿವೃತ್ತ ಪ್ರಾಂಶು ಪಾಲ್ ಡಾ.ಎನ್.ಪಿ. ನಾರಾಯಣ ಶೆಟ್ಟಿ ಭಾಗವಹಿಸಿದ್ದರು. ಅಧ್ಯಕ್ಷತೆಯನ್ನು ಸಂಸ್ಥೆಯ ನಿರ್ದೇಶಕ ಡಾ.ರಾಮಕೃಷ್ಣ ಹೆಗ್ಡೆ ವಹಿಸಿದ್ದರು.
ಕಾಲೇಜಿನ ಉಪ ಪ್ರಾಂಶುಪಾಲರಾದ ಪ್ರೊ.ಜಯಶೀಲ ಕುಮಾರ್ ಸ್ಪರ್ಧೆಯ ವಿವರ ನೀಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲೆ ಡಾ. ಪ್ರತಿಭಾ ಎಂ ಪಟೇಲ್ ಹಾಗೂ ತೀರ್ಪುಗಾರರು ಉಪಸ್ಥಿತರಿದ್ದರು. ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪ್ರೊ. ಸುಮನ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರೆ, ಆಂಗ್ಲ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪ್ರೊ.ಪಾವನ ಅತಿಥಿಗಳನ್ನು ಪರಿಚಯಿಸಿದರು. ಬಿಸಿಎ ವಿಭಾಗದ ಮುಖ್ಯಸ್ಥೆ ಸ್ವರ್ಣರಾಣಿ ವಂದಿಸಿದರು.