ಆದಿವಾಸಿಗಳನ್ನು ಮುಖ್ಯ ವಾಹಿನಿಗೆ ತನ್ನಿ: ಶಾಸಕ ಗುರ್ಮೆ ಸುರೇಶ್ ಶೆಟ್ಟಿ
ಉಡುಪಿ, ಜ.15: ಸರಕಾರ ನೀಡುವ ವಿವಿಧ ಸವಲತ್ತುಗಳನ್ನು ಆದಿವಾಸಿ ಗಳಿಗೆ ತಲುಪಿಸಿ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಪ್ರಯತ್ನವನ್ನು ಎಲ್ಲರೂ ಮಾಡುವಂತೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದ್ದಾರೆ.
ಕಾಪು ತಾಲೂಕಿನ ಮಜೂರು ಗ್ರಾಪಂ ವ್ಯಾಪ್ತಿಯ ಪಾದೂರು ವಿಶ್ವನಾಥ ಲಚ್ಚಿಲ್‌ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯ ಅಧಿಕಾರಿಗಳ ಕಛೇರಿ, ಗ್ರಾಮ ಪಂಚಾಯತ್ ಮಜೂರು, ಐಟಿಡಿಪಿ ಇಲಾಖೆ ಉಡುಪಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಕಾಪು ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಅಯುಷ್ಮಾನ್ ಭಾರತ್, ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನಾ ಹಾಗೂ ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ ಯೋಜನೆಗಳನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಹುಟ್ಟಿನಿಂದ ಯಾರು ಶ್ರೇಷ್ಠರಾಗುವುದಿಲ್ಲ. ನಾವು ಮಾಡುವ ಸಾಧನೆ ಯಿಂದ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಅದಿವಾಸಿ ಕೊರಗ ಸಮುದಾಯದವರಿಗೆ ಸರಕಾರದಿಂದ ಲಭ್ಯವಿರುವ ಸವಲತ್ತುಗಳನ್ನುತಲುಪಿಸುವ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಪ್ರೋತ್ಸಾಹ ನೀಡಬೇಕು ಎಂದು ಗುರ್ಮೆ ತಿಳಿಸಿದರು.
ಕೊರಗ ಸಮುದಾಯದ ಯುವಜನತೆ ಆಸಕ್ತಿ ವಹಿಸಿ ಉನ್ನತ ಶಿಕ್ಷಣ ಪಡೆದು ಸಮಾಜದಲ್ಲಿ ಉತ್ತಮ ಸ್ಥಾನದಲ್ಲಿ ಕಾರ್ಯ ನಿರ್ವಹಿಸಬೇಕು ಎಂದರಲ್ಲದೇ, ಸಮಾಜದಲ್ಲಿರುವ ಎಲ್ಲಾ ಸಮುದಾಯಗಳ ಜನರ ಸಮಸ್ಯೆ ಗಳಿಗೆ ಪರಿಹಾರ ಒದಗಿಸು ವಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದರು.
ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜಿಲ್ಲೆಯಲ್ಲಿರುವ ಕೊರಗ ಸಮುದಾಯಗಳಿಗೆ ಆರೋಗ್ಯ, ವಸತಿ ಹಾಗೂ ಶಿಕ್ಷಣಕ್ಕೆ ಪೂರಕವಾಗಿ ಅವರ ಅವಶ್ಯಕತೆಗಳ ಬಗ್ಗೆ ಸರ್ವೇ ನಡೆಸಿ ಅದನ್ನು ಒದಗಿಸಲು ಈ ಕಾರ್ಯಕ್ರಮದಡಿ ಸೂಕ್ತಕ್ರಮ ಕೈಗೊಳ್ಳಲಾಗುವುದು ಎಂದರು.
ಆದಿವಾಸಿ ಸಮುದಾಯದಲ್ಲಿ ಅಪೌಷ್ಠಿಕತೆಯ ಕಾರಣದಿಂದ ಸಿಕಲ್‌ಸೆಲ್ ಅನೀಮಿಯಾ ಎಂಬ ಸಮಸ್ಯೆ ಕಂಡುಬಂದಿದೆ. ಇದರಿಂದ ಈ ಸಮುದಾಯ ದಲ್ಲಿ ಕೆಲವರು ಅಸಹಜ ಸಾವಿಗೆ ಬಲಿಯಾಗುತ್ತಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲ ರಿಗೂ ಆರೋಗ್ಯ ತಪಾಸಣೆ ನಡೆಸಿ, ಸೂಕ್ತ ಚಿಕಿತ್ಸೆ ನೀಡಲು ಕ್ರಮ ವಹಿಸಲಾಗುವುದು ಎಂದು ನುಡಿದರು.
ಕೊರಗ ಸಮುದಾಯಗಳಿಗೆ ಶಾಲೆ ಹಾಗೂ ಅಂಗನವಾಡಿಗಳ ಅವಶ್ಯಕತೆ ಇದ್ದಲ್ಲಿ ಆ ವ್ಯಾಪ್ತಿಯಲ್ಲಿ ಶಿಕ್ಷಣಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು, ಅವರ ಆರೋಗ್ಯ ತಪಾಸಣೆಗೆ ಮನೆಮನೆಗೆ ಭೇಟಿ ನೀಡುವ ಆರೋಗ್ಯ ಅಧಿಕಾರಿ ಗಳಿಗೆ ಸಮುದಾಯದ ಮುಖಂಡರು ಹಾಗೂ ಪ್ರತಿಯೊಬ್ಬರೂ ಸೂಕ್ತ ಮಾಹಿತಿ ನೀಡುವುದರೊಂದಿಗೆ ಸಹಕರಿಸಬೇಕು. ಕೊರಗ ಜನಾಂಗದ ಜನರು ತಮ್ಮ ಸಮಸ್ಯೆಯನ್ನು ಮುಕ್ತವಾಗಿ ತಿಳಿಸಬೇಕು. ಮೂಲಭೂತ ವ್ಯವಸ್ಥೆ ಹಾಗೂ ತಮಗಿರುವ ಯೋಜನೆಗಳ ಪ್ರಯೋಜನವನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಐ.ಪಿ ಗಡಾಧ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಕೊರಗ ಜನಾಂಗದವರಿಗೆ ಸಾಂಕೇತಿಕವಾಗಿ ಆಯುಷ್ಮಾನ್ ಭಾರತ್ ಮುಖ್ಯಮಂತ್ರಿ ಕರ್ನಾಟಕ ಜನಾ ರೋಗ್ಯ ಕಾರ್ಡ್‌ಗಳನ್ನು ಜನರಿಗೆ ವಿತರಿಸಲಾಯಿತು. ಅಲ್ಲದೇ ಇವರ ಬಳಕೆಗಾಗಿರುವ ಆರೋಗ್ಯ ತಪಾಸಣಾ ವಾಹನಕ್ಕೆ ಹಸಿರು ನಿಶಾನೆ ತೋರಿಸಲಾಯಿತು.
ಕಾಪು ತಾಲೂಕು ತಹಶೀಲ್ದಾರ್ ಪ್ರತಿಭಾ, ಕಾಪು ತಾಲೂಕು ಕಾರ್ಯ ನಿರ್ವಹಣಾಧಿಕಾರಿ ಜೇಮ್ಸ್ ಡಿಸಿಲ್ವ, ಮಜೂರು ಗ್ರಾಪಂ ಅಧ್ಯಕ್ಷ ಪ್ರಸಾದ್ ಶೆಟ್ಟಿ, ಉಪಾಧ್ಯಕ್ಷೆ ಮಂಜುಳಾ ಆಚಾರ್ಯ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮ ರಾವ್, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಚಿದಾನಂದ ಸಂಜು, ತಾಲೂಕು ಆರೋಗ್ಯ ಅಧಿಕಾರಿ ಡಾ. ವಾಸುದೇವ ಉಪಾಧ್ಯಾಯ, ಕಾಪು ವೈದ್ಯಾಧಿಕಾರಿ ಡಾ.ರೋಶನಿ ಪುಂಜ, ಕೊರಗ ಸಮುದಾಯದವರು ಉಪಸ್ಥಿತರಿದ್ದರು.
ಜಿಲ್ಲಾ ಕುಷ್ಠರೋಗ ನಿವಾರಣಾ ಅಧಿಕಾರಿ ಡಾ.ಲತಾ ನಾಯಕ್ ಸ್ವಾಗತಿಸಿದರೆ, ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿ ಶಶಿಧರ್ ಹೆಚ್. ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಉಪ ಆರೋಗ್ಯ ಶಿಕ್ಷಣ ಅಧಿಕಾರಿ ಚಂದ್ರಕಲಾ ವಂದಿಸಿದರು.
ಕೊರಗರ ಆರೋಗ್ಯ ತಪಾಸಣೆಗೆ ವಿಶೇಷ ಕ್ರಮ
ಇಂದು ಮಜೂರಿನಲ್ಲಿ ಉದ್ಘಾಟನೆಗೊಂಡ ಪ್ರಧಾನಮಂತ್ರಿ ಜನ್‌ಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನ ಯೋಜನೆ (ಪಿಎಂ ಜನ್‌ಮನ್) ಅಡಿ ಯಲ್ಲಿ ವಿಶೇಷ ದುರ್ಬಲ ಬುಡಕಟ್ಟು ಗುಂಪಿಗೆ ಸೇರಿದ ಕೊರಗ ಜನಾಂಗದವರು ಹೆಚ್ಚಾಗಿ ವಾಸಿಸುವ ಹಳ್ಳಿಗಳಿಗೆ ಭೇಟಿ ನೀಡಿ ಅವಶ್ಯಕ ಆರೋಗ್ಯ ಸೇವೆಗಳಾದ ಕ್ಷಯರೋಗ ತಪಾಸಣೆ, ಸಿಕಲ್ ಸೆಲ್ ಅನಿಮಿಯ ತಪಾಸಣೆ, ಡಯಾಲಿಸಿಸ್ ಸೇವೆ, ಮಧುಮೇಹ ಮತ್ತು ರಕ್ತದೊತ್ತಡ ಪರೀಕ್ಷೆ, ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ- ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ ಯೋಜನೆ ಅಡಿ ಆಯುಷ್ಮಾನ್ ಕಾರ್ಡ್ ವಿತರಣೆ, ಗರ್ಭಿಣಿಯರ ಆರೋಗ್ಯ ತಪಾಸಣೆ ಮತ್ತು ಲಸಿಕಾಕರಣ ಮುಂತಾದ ಸೇವೆಗಳನ್ನು ಸಂಚಾರಿ ವೈದ್ಯಕೀಯ ಘಟಕದ ಮೂಲಕ ನೀಡಲು ಉದ್ದೇಶಿಸಲಾಗಿದೆ.