×
Ad

ಪರ್ಯಾಯ ಮಹೋತ್ಸವ: ಕಂಗೊಳಿಸುತ್ತಿರುವ ಕೊರಗ ಸಮುದಾಯದ ಸಾಂಪ್ರದಾಯಿಕ ಶೈಲಿಯ ಕಮಾನು

Update: 2024-01-16 22:44 IST

ಕುಂದಾಪುರ: ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥರ ಪರ್ಯಾಯಕ್ಕೆ ಕ್ಷಣಗಣನೆ ಆರಂಭವಾಗಿದೆ.ಉಡುಪಿಯ ಕಲ್ಸಂಕದಿಂದ ಬಡಗುಪೇಟೆ ಮಾರ್ಗವಾಗಿ ರಥಬೀದಿ ಪ್ರವೇಶಿಸುವ ಸ್ಥಳದಲ್ಲಿ ನಿರ್ಮಸಿದ ಸ್ವಾಗತ ಕಮಾನು ಬುಡಕಟ್ಟು, ಕೊರಗ ಸಮುದಾಯದ ಸಾಂಪ್ರದಾಯಿಕ ಶೈಲಿಯಲ್ಲಿ ಕಂಗೊಳಿಸುತ್ತಿದೆ.

ಮಠಕ್ಕೆ ಹೋಗುವವರು ರಸ್ತೆಯಲ್ಲಿ ಸಾಗುವರರು ಕೊರಗ ಸಮುದಾಯದ ಸಾಂಪ್ರದಾಯಿಕ ಕಲೆ, ಕುಲಕಸುಬಿನ ಕೌಶಲ್ಯ ನೋಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಪರಿಸರದಲ್ಲಿ ಸಿಗುವ ಉತ್ಪನ್ನಗಳಾದ ಬಿದಿರು, ತೆಮೆ, ಬೀಳು ಮೊದಲಾದವುಗಳನ್ನು ಬಳಸಿಕೊಂಡು ಕಮಾನು ಸಿದ್ದಮಾಡಲಾಗಿದೆ. ಸ್ವಾಗತ ಕಮಾನಿನ ನಡುವೆ ಕೊರಗ ಸಮುದಾಯದ ಕರಕುಶಲ ವಸ್ತುಗಳಾದ ಬುಟ್ಟಿ, ಸಿಬ್ಲು, ಎರಡು ಕಡೆಗಳಲ್ಲಿ ಪತಾಕೆ, ಮದ್ಯೆ ಕಿರೀಟದ ಮಾದರಿ ರಚಿಸಲಾಗಿದೆ. ಅಲ್ಲದೆ ಒಂದಷ್ಟು ಸಣ್ಣ ಗಾತ್ರದ ನೇತಾಡುವ ಬುಟ್ಟಿಗಳಿದೆ. ಎಲ್ಲವೂ ಪರಿಸರ ಸ್ನೇಹಿ ವಸ್ತುಗಳಿಂದ ರಚಿತವಾಗಿದೆ.

ಈ ಸುಂದರ ಕಮಾನು ನಿರ್ಮಾಣಕ್ಕೆ 5 ದಿನಗಳನ್ನು ತೆಗೆದುಕೊಂಡಿದ್ದು, ಕೊರಗ ಸಂಘಟನೆಯ ಮುಖಂಡರಾದ ಗಣೇಶ ಕುಂದಾಪುರ ನೇತೃತ್ವದಲ್ಲಿ ಸುದರ್ಶನ್‌ ಕೋಟ, ಶರತ್‌ ಕುಂಭಾಶಿ, ಸುಧೀರ್ ಬಲ್ಜಿ, ಶೇಖರ್ ಮರವಂತೆ ತಂಡದಿಂದ ಈ ಸುಂದರ ಕಲಾತ್ಮಕ ಕಮಾನು ನಿರ್ಮಾಣವಾಗಿದ್ದು, ಜನರ ಗಮನ ಸೆಳೆಯುತ್ತಿದೆ.

ನಾಲ್ಕು ವರ್ಷದ ಹಿಂದೆ ಅದಮಾರು ಮಠದ ಪರ್ಯಾಯ ವೇಳೆ ತೆಂಕಪೇಟೆ ಮಾರ್ಗದಲ್ಲಿ ಗಣೇಶ್ ಕೊರಗ ಅವರ ನೇತೃತ್ವ ದಲ್ಲಿ ತೆಂಗಿನ ಚಿಪ್ಪುಗಳಿಂದ ಶೃಂಗಾರಗೊಂಡ ಬೃಹತ್‌ ಸ್ವಾಗತ ಕಮಾನನ್ನು ನಿರ್ಮಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News