ಲೋಕೋಪಯೋಗಿ ಇಲಾಖೆಯಲ್ಲಿ ಎಲ್ಲವೂ ಸರಿಯಾಗಿದೆ, ಯಾವುದೇ ಸಮಸ್ಯೆಗಳಿಲ್ಲ: ಸಚಿವ ಸತೀಶ್ ಜಾರಕಿಹೊಳಿ
ಕುಂದಾಪುರ, ಜ.28: ಲೋಕೋಪಯೋಗಿ ಇಲಾಖೆಯಲ್ಲಿ ಮಾಡಿದ ಕೆಲಸಕ್ಕೆ ಗುತ್ತಿಗೆದಾರರಿಗೆ ಬಿಲ್ ನೀಡಲಾಗುತ್ತಿದ್ದು ಹೆಚ್ಚುವರಿಯಾಗಿ ಮಾಡಿರುವುದಕ್ಕೆ ಯಾವುದೇ ಬಿಲ್ ನೀಡುತ್ತಿಲ್ಲ. ಆದುದರಿಂದ ಇಲಾಖೆಯಲ್ಲಿ ಎಲ್ಲವೂ ಸರಿಯಾಗಿದ್ದು, ಯಾವುದೇ ರೀತಿಯ ಸಮಸ್ಯೆ ಇಲ್ಲ ಎಂದು ರಾಜ್ಯ ಲೋಕೋ ಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಕುಂದಾಪುರದಲ್ಲಿ ರವಿವಾರ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ವೇಳೆ ಅವರು ಪತ್ರಕರ್ತರ ಪ್ರಶ್ನೆ ಗಳಿಗೆ ಉತ್ತರಿಸಿದರು. ಸಕ್ಕರೆ ಕಾರ್ಖಾನೆಯಲ್ಲಿ ಪರಿಸರ ನಿಯಮಾವಳಿಗಳನ್ನು ಉಲ್ಲಂಘನೆ ಮಾಡಿರುವ ಬಗ್ಗೆ ಯತ್ನಾಳ್ ಅವರಿಗೆ ಹಸಿರು ನ್ಯಾಯಪೀಠ ಒಂದು ವರ್ಷಗಳ ಹಿಂದೆಯೇ ನೋಟೀಸ್ ಜಾರಿ ಮಾಡಿದೆ. ಆಗ ಅವರದ್ದೆ ಬಿಜೆಪಿ ಸರಕಾರ ಇತ್ತು. ಹಾಗಾಗಿ ಈ ಸಕ್ಕರೆ ಕಾರ್ಖಾನೆ ಮುಚ್ಚಲು ಆದೇಶ ನೀಡಿರುವುದು ರಾಜಕೀಯ ಪ್ರೇರಿತವಾಗುವುದು ಹೇಗೆ? ಎಂದು ಅವರು ಪ್ರಶ್ನಿಸಿದರು.
ಕೇಂದ್ರ ಸಚಿವ ರೂಪೇಂದ್ರ ಯಾದವ್ ಜಿಎಸ್‌ಟಿ ಹಣವನ್ನು ಕೇಂದ್ರದಿಂದ ವಾಪಾಸ್ ಕೊಡುವ ಪ್ರಶ್ನೆಯೇ ಇಲ್ಲ, ಅದು ಕೊಟ್ಟಾಗಿದೆ ಎಂದು ಹೇಳಿದ್ದಾರೆ. ಹಾಗಾದರೆ ಇವರು ಲೆಕ್ಕಪತ್ರ ತೋರಿಸಲಿ. ಕಾಗದಗಳು ದಾಖಲೆ ಹೇಳುತ್ತವೆ. ಕೇಂದ್ರ ಆದಷ್ಟು ಬೇಗ ನೀಡಿದಲ್ಲಿ ಅಭಿವೃದ್ಧಿ ಕಾರ್ಯ ಹೆಚ್ಚಿಸಲು ಸಾಧ್ಯವಿದೆ ಎಂದು ಅವರು ಹೇಳಿದರು.
ಬಿ.ವೈ.ರಾಘವೇಂದ್ರ ಬಗ್ಗೆ ಶ್ಯಾಮನೂರು ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಶ್ಯಾಮನೂರು ಜಾತಿ ಕಾರ್ಯಕ್ರಮದಲ್ಲಿ ಈ ಹೇಳಿಕೆ ನೀಡಿದ್ದು ಅದು ಸ್ವಾಭಾವಿಕವಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸ ಬೇಕಾಗಿಲ್ಲ. ರಾಜಕೀಯ ಕಾರ್ಯ ಕ್ರಮದಲ್ಲಿ ಇದನ್ನು ಹೇಳಲು ಆಗಲ್ಲ. ಜಾತಿ-ಧರ್ಮ ಎಂದು ಬಂದಾಗ ಇದೆಲ್ಲವೂ ಸ್ವಾಭಾವಿಕವಾಗಿರುತ್ತದೆ ಎಂದರು.
ಕುಂದಾಪುರ ಲೋಕೋಪಯೋಗಿ ಪ್ರವಾಸಿ ಮಂದಿರವನ್ನು ತಕ್ಷಣದಲ್ಲಿ ನಿರ್ಮಾಣ ಮಾಡಲು ಆಗಲ್ಲ. ಅದು ಐದು ವರ್ಷಗಳ ಕಾರ್ಯಕ್ರಮ ವಾಗಲಿದೆ. ಇದಕ್ಕೆ ಜಿಲ್ಲೆಯ ಶಾಸಕರು, ಸಚಿವರು, ವಿವಿಧ ಇಲಾಖೆಯವರು ಕೂಡಿ ಸಮಗ್ರ ಯೋಜನೆ ತಯಾರು ಮಾಡಬೇಕಾಗಿದೆ ಎಂದು ಅವರು ತಿಳಿಸಿದರು.
ಕುಂದಾಪುರ-ಗಂಗೊಳ್ಳಿ ಸಂಪರ್ಕ ಸೇತುವೆ ವಿಚಾರದಲ್ಲಿ ಸ್ಥಳ ವೀಕ್ಷಣೆ ಮಾಡಲಾಗಿದೆ. ಬಹಳಷ್ಟು ಮಾಹಿತಿ ಪಡೆದು ಈ ಬಗ್ಗೆ ಚರ್ಚೆ ಮಾಡ ಲಾಗುತ್ತದೆ. ಕುಂದಾಪುರ ರಿಂಗ್ ರಸ್ತೆ ನಿರ್ಮಾಣ ನೆನೆಗುದಿಗೆ ಬಗ್ಗೆ ಈಗಾಗಾಲೇ ಕೇಂದ್ರ ಸಚಿವ ಗಡ್ಕರಿ ಅವರ ಬಳಿ ಮಾತುಕತೆ ನಡೆಸಿದ್ದು ಕೂಡಲೇ ಕಾಮಗಾರಿ ಪೂರ್ಣಗೊಳಿಸಲು ಮನವಿ ಸಲ್ಲಿಸಲಾಗಿದೆ ಎಂದು ಸಚಿವ ಜಾರಕಿಹೊಳಿ ಹೇಳಿದರು.