×
Ad

ಸಮುದಾಯ ಅಭಿವೃದ್ಧಿಗೆ ಸವಿತಾ ಮಹರ್ಷಿಗಳ ಕೊಡುಗೆ ಅಪಾರ: ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ

Update: 2024-02-16 21:37 IST

ಉಡುಪಿ: ಪುರಾಣ ಪುರುಷರಾದ ಸವಿತಾ ಮಹರ್ಷಿಗಳು ಸವಿತಾ ಸಮಾಜದ ಅಭಿವೃದ್ಧಿಗೆ ನೀಡಿದ ಕೊಡುಗೆ ಅಪಾರ. ಮಹನೀಯರ ಜಯಂತಿಗಳ ಆಚರಣೆಯ ಸಂದರ್ಭದಲ್ಲಿ ಅವರುಗಳ ಜೀವನ ಶೈಲಿ, ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಇವುಗಳ ಆಚರಣೆ ಅರ್ಥಪೂರ್ಣವಾಗುತ್ತವೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ತಿಳಿಸಿದ್ದಾರೆ.

ಮಣಿಪಾಲದ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಸವಿತಾ ಸಮಾಜ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಮಹರ್ಷಿಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡುತಿದ್ದರು.

ಸಮಸಾಮವೇದ ರಚಿಸಿದ ಮಹಾಪುರುಷ ಸವಿತಾ ಮಹರ್ಷಿಗಳು ಶಿವನ ಬಲಗಣ್ಣಿನಿಂದ ಹುಟ್ಟಿದವರು ಎಂಬ ಪ್ರತೀತಿ ಇದೆ. ಸವಿತಾ ಸಮಾಜ ಸಾಂಸ್ಕೃತಿಕವಾಗಿ ಶ್ರೀಮಂತ ಸಮುದಾಯವಾಗಿದ್ದು, ಹಿಂದುಳಿದ ಸಮುದಾಯ ಗಳು ಆತ್ಮಶ್ವಾಸದಿಂದ ಜೀವನ ನಡೆಸುವುದರೊಂದಿಗೆ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಮುಂದೆ ಬರಬೇಕು ಎಂದರು.

ಹಿಂದುಳಿದ ಸಮುದಾಯಗಳಿಗೆ ಶಿಕ್ಷಣ ಹಾಗೂ ಜ್ಞಾನದ ಅವಶ್ಯಕತೆ ಇದ್ದು, ಸಮುದಾಯದ ಮುಖಂಡರು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡುವ ಜೊತೆಗೆ ಮೂಲವೃತ್ತಿಯೊಂದಿಗೆ ಶೈಕ್ಷಣಿಕವಾಗಿಯೂ ಸಹ ಮುಖ್ಯ ವಾಹಿನಿಗೆ ಬರಬೇಕು. ಇವರಿಗೂ ಸಮಾನ ಅವಕಾಶಗಳು ಸಿಗುವಂತಾಗಬೇಕು ಎಂದರು.

ಸವಿತಾ ಸಮಾಜದ ಜಿಲ್ಲಾ ಕಾರ್ಯದರ್ಶಿ ಸದಾಶಿವ ಬಂಗೇರ ಕುರ್ಕಾಲ್ ವಿಶೇಷ ಉಪನ್ಯಾಸ ನೀಡಿ, ಕ್ಷೌರಿಕ ಸಮಾಜದ ಮೂಲ ಪುರುಷರಾದ ಸವಿತಾ ಮಹರ್ಷಿಗಳು ಶಿವನ ದಿವ್ಯದೃಷ್ಟಿಯಿಂದ ಜನ್ಮ ತಾಳಿದರೆಂಬ ಪ್ರತೀತಿ ಇದ್ದು, ಚತುರ್ವೇದಗಳಲ್ಲಿ ಒಂದಾದ ಸಾಮವೇದವನ್ನು ಇವರು ರಚಿಸಿದ್ದಾರೆ. ಸವಿತಾ ಸಮುದಾಯ ಅನಾದಿಕಾಲದಿಂದಲೂ ಧಾರ್ಮಿಕ ಹಾಗೂ ಸಾಂಪ್ರದಾಯಿಕ ವಾಗಿ 12 ಪ್ರಮುಖ ವೃತ್ತಿಗಳನ್ನು ಮುಂದುವರೆಸಿಕೊಂಡು ಬಂದಿದ್ದು, ರಾಜ್ಯದಲ್ಲಿ ಇಂದು ಕ್ಷೌರಿಕ ಜನಾಂಗವನ್ನು ಸವಿತಾ ಸಮಾಜ, ಹಡಪದ, ಭಂಡಾರಿ ಸೇರಿದಂತೆ ಸುಮಾರು 27 ಹೆಸರಿನಿಂದ ಪ್ರಾದೇಶಿಕವಾಗಿ ಗುರುತಿಸಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಅಧ್ಯಕ್ಷ ನೀಲಾವರ ಸುರೇಶ್ ಅಡಿಗ, ಸವಿತಾ ಸಮಾಜದ ಜಿಲ್ಲಾಧ್ಯಕ್ಷ ನಿಂಜೂರು ವಿಶ್ವನಾಥ ಭಂಡಾರಿ, ಸಮುದಾಯದ ತಾಲೂಕು ಅಧ್ಯಕ್ಷರು, ಪದಾಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ವೀಕ್ಷಿತ್ ಕಾರ್ಯಕ್ರಮ ನಿರೂಪಿಸಿ, ರಾಜು ಭಂಡಾರಿ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News