×
Ad

ನ್ಯಾನೋ ತಂತ್ರಜ್ಞಾನದ ಮೂಲಕ ಪ್ರಪಂಚದ ಸವಾಲುಗಳಿಗೆ ಉತ್ತರ : ಡಾ.ವೆಂಕಟೇಶ್ ಸಲಹೆ

Update: 2024-02-29 21:22 IST

ಉಡುಪಿ: ನ್ಯಾನೋ ವಿಜ್ಞಾನ ಹಾಗೂ ನ್ಯಾನೋ ತಂತ್ರಜ್ಞಾನದ ಸಾಮರ್ಥ್ಯಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ಮೂಲಕ ನಿಜ ಪ್ರಪಂಚದ ಸವಾಲುಗಳಿಗೆ ಉತ್ತರಗಳನ್ನು ಕಂಡುಕೊಳ್ಳುವಂತೆ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ) ಕುಲಪತಿ ಲೆ.ಜ. (ಡಾ) ಎಂ.ಡಿ.ವೆಂಕಟೇಶ್ ನ್ಯಾನೋ ಸಂಶೋಧಕರಿಗೆ ಸಲಹೆ ನೀಡಿದ್ದಾರೆ.

ಮಣಿಪಾಲದ ಮಾಹೆ ಆಶ್ರಯದಲ್ಲಿ ಕೆಎಂಸಿಯ ಡಾ.ಟಿಎಂಎ ಪೈ ಹಾಲ್ ನಲ್ಲಿ ಗುರುವಾರ ಪ್ರಾರಂಭಗೊಂಡ ಎರಡು ದಿನಗಳ ನ್ಯಾನೊಸೈನ್ಸ್ ಮತ್ತು ನ್ಯಾನೊ ತಂತ್ರಜ್ಞಾನದ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅಮೃತ ವಿಶ್ವ ವಿದ್ಯಾಪೀಠಂನ ಸಂಶೋಧನಾ ವಿಭಾಗದ ಡೀನ್ ಡಾ.ಶಾಂತಿಕುಮಾರ್ ನಾಯರ್ ಅವರು ಮಾತನಾಡಿ, ನ್ಯಾನೋ ಸಂಶೋಧಕರು ಸಂಶೋಧನೆಯ ಪ್ರಕಟಣೆಯ ಜೊತೆಜೊತೆಗೆ ಅವುಗಳ ಪ್ರಾಯೋಗಿಕ ಬಳಕೆಯ ಕುರಿತು ಹೆಚ್ಚಿನ ಗಮನ ಹರಿಸಬೇಕಾಗಿದೆ ಎಂದರು.

ಮಾಹೆಯ ಸಹಕುಲಪತಿ (ಆರೋಗ್ಯ ವಿಜ್ಞಾನ) ಡಾ.ಶರತ್ ಕೆ.ಕುಮಾರ್ ಅವರು ಸಮ್ಮೇಳನದ ಕುರಿತು ಪಕ್ಷಿನೋಟ ನೀಡಿ, ನ್ಯಾನೋ ವಿಜ್ಞಾನ ಮತ್ತು ನ್ಯಾನೋ ತಂತ್ರಜ್ಞಾನದ ಸಂಶೋಧನೆ ಹಾಗೂ ಬೋಧನೆಯಲ್ಲಿ ಶ್ರೇಷ್ಠತೆ ಯನ್ನು ಅನ್ವೇಷಿಸ ಬೇಕು. ಈ ಮೂಲಕ ಸಮಾಜಕ್ಕೆ ಅರ್ಥಪೂರ್ಣವಾದ ಕೊಡುಗೆ ನೀಡಲು ನಮ್ಮ ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಬೇಕು. ಸಮ್ಮೇಳನ ಈ ಗುರಿಯಲ್ಲಿ ಯಶಸ್ವಿಯಾಗಲಿ ಎಂದು ಹಾರೈಸಿದರು.

ಸಮ್ಮೇಳನದಲ್ಲಿ ಖ್ಯಾತನಾಮ ಸಂಶೋಧಕರಾದ ಆಸ್ಟ್ರೇಲಿಯಾದ ವೊಲೊಂಗೊಂಗ್ ವಿವಿಯ ಡಾ.ವೈಹುವಾ ಲಿ, ಭಾರತೀಯ ವಿಜ್ಞಾನ ಸಂಸ್ಥೆ ಯ ಡಾ.ನವಕಾಂತ ಭಟ್, ಭಾರತದ ವಿಜ್ಞಾನಿ ಡಾ. ಸಿ.ವಿ. ಯಲಮಗ್ಗಡ್, ಪ್ಯಾರಿಸ್‌ನ ಡಾ. ಸೆರ್ಗಿ ರುಡಿಯುಕ್, ಭಾರತ ವಿಐಟಿ ವಿವಿಯ ಡಾ. ಅಮಿತಾವ್ ಮುಖರ್ಜಿ ಮತ್ತು ಚಿತ್ರ ತಿರುನಾಳ್ ವೈದ್ಯಕೀಯ ಸಂಸ್ಥೆಯ ಡಾ.ಆರ್.ಎಸ್.ಜಯಶ್ರೀ ಅವರು ನ್ಯಾನೋ ಸಾಯನ್ಸ್ ಹಾಗೂ ನ್ಯಾನೊ ಟೆಕ್ನಾಲಜಿ ಕ್ಷೇತ್ರದಲ್ಲಿ ವಿವಿಧ ವಿಷಯಗಳ ಕುರಿತು ಮಾತನಾಡಲಿದ್ದಾರೆ.

ಸಮ್ಮೇಳನದಲ್ಲಿ 180ಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸಿದ್ದಾರೆ. ಮಾಹೆ ಸಹಕುಲಪತಿ (ತಾಂತ್ರಿಕ ವಿಜ್ಞಾನ) ಡಾ. ನಾರಾಯಣ ಸಭಾಹಿತ್ ಸ್ವಾಗತಿಸಿ, ಸಂಶೋಧನಾ ನಿರ್ದೇಶಕ ಡಾ.ಸತೀಶ್ ರಾವ್ ವಂದಿಸಿದರು.




Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News