×
Ad

ಟೇಬಲ್ ಟೆನಿಸ್: ಮಂಗಳೂರು ಮಹಿಳೆಯರಿಗೆ ಡಬಲ್ಸ್‌ನಲ್ಲಿ ಚಿನ್ನ

Update: 2025-01-18 22:32 IST

ಉಡುಪಿ, ಜ.18: ಕರ್ನಾಟಕ ಕ್ರೀಡಾಕೂಟದ ಮಹಿಳೆಯರ ಟೇಬಲ್ ಟೆನಿಸ್ ಡಬಲ್ಸ್‌ನಲ್ಲಿ ಮಂಗಳೂರಿನ ಅರ್ನಾ ಸದೋತ್ರ ಹಾಗೂ ಪ್ರಶಾಂತಿ ಶೆಟ್ಟಿ ತಂಡ ಚಿನ್ನದ ಪದಕ ಗೆದ್ದುಕೊಂಡಿದೆ.

ಬೆಂಗಳೂರಿನ ದೃಷ್ಟಿ ಮೋರೆ ಹಾಗೂ ಅನನ್ಯಾ ಎಚ್.ಪಿ. ಅವರು ಬೆಳ್ಳಿ ಪದಕವನ್ನು ಪಡೆದರೆ, ಸೆಮಿಫೈನಲ್‌ನಲ್ಲಿ ಸೋತ ಧಾರವಾಡದ ಸಹನಾ ಕುಲಕರ್ಣಿ ಹಾಗೂ ವಿಜಯಲಕ್ಷ್ಮೀ ಪವಾರ್ ಮತ್ತು ಮೈಸೂರಿನ ನಿಹಾರಿಕಾ ಡಿ.ಮಲ್ಲೂರು ಹಾಗೂ ಕೌಸರ್ ಅವರು ಕಂಚಿನ ಪದಕಗಳನ್ನು ಪಡೆದರು.

ಉಡುಪಿ ಜೋಡಿಗೆ ಬೆಳ್ಳಿ: ಪುರುಷರದ ಡಬಲ್ಸ್‌ನಲ್ಲಿ ಉಡುಪಿಯ ಸನ್ಮಾನ್ ಶಶಿಧರ್ ಮಲ್ಪೆ ಅವರು ಆದಿತ್ಯ ಕೋಟ್ಯಾನ್ ಜೊತೆ ಸೇರಿ ಬೆಳ್ಳಿ ಪದಕವನ್ನು ಪಡೆದರು. ತಮ್ಮ ಸೆಮಿಫೈನಲ್ ಎದುರಾಳಿಯನ್ನು ಸೋಲಿಸಿ ಫೈನಲ್‌ಗೇರಿದ್ದ ಉಡುಪಿಯ ಜೋಡಿ, ಫೈನಲ್‌ನಲ್ಲಿ ಬೆಂಗಳೂರು ತಂಡದೆದುರು ಪರಾಭವಗೊಂಡಿತು.

ಬೆಂಗಳೂರಿನ ಅಶ್ವಿನ್ ಹನಗೋಡು ಹಾಗೂ ಸುದರ್ಶನ ಕುಮಾರ್ ಜೋಡಿಯು ಫೈನಲ್‌ನಲ್ಲಿ ಉಡುಪಿಯ ಜೋಡಿಯನ್ನು ಸೋಲಿಸುವ ಮೂಲಕ ಚಿನ್ನದ ಪದಕವನ್ನು ಗೆದ್ದುಕೊಂಡರು.

ಮಂಗಳೂರಿನ ರಾಯಸ್ಟನ್ ಜತ್ತನ್ನ ಹಾಗೂ ಮೆಲ್‌ರಾಯ್ ಮೊಂತೆರೊ ಅವರು ಕಂಚಿನ ಪದಕ ಪಡೆದರು. ಇವರೊಂದಿಗೆ ಸೆಮಿಫೈನಲ್‌ನಲ್ಲಿ ಸೋತ ಮತ್ತೊಂದು ಜೋಡಿ ಬೆಂಗಳೂರಿನ ಪ್ರೇಮ್‌ಸಾಗರ್ ಡಿ. ಹಾಗೂ ಪ್ರೇಮ್ ಚಂದ್ರ ಜಿ. ಅವರು ಸಹ ಕಂಚಿನ ಪದಕ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News