ಕರ್ನಾಟಕ ಕ್ರೀಡಾಕೂಟದ ಪುರುಷರ ಹಾಕಿ ಸ್ಪರ್ಧೆ: ಬೆಂಗಳೂರು, ಹಾವೇರಿ ತಂಡಗಳಿಗೆ ಜಯ
ಮಣಿಪಾಲ, ಜ.19: ಮಾಹೆಯ ಹಾಕಿ ಸ್ಟೇಡಿಯಂನಲ್ಲಿ ಇಂದು ನಡೆದ ಕರ್ನಾಟಕ ಕ್ರೀಡಾಕೂಟದ ಪುರುಷರ ಹಾಕಿ ಸ್ಪರ್ಧೆ ಯಲ್ಲಿ ಬೆಂಗಳೂರು ನಗರ ಹಾಗೂ ಹಾವೇರಿ ತಂಡಗಳು ಜಯ ದಾಖಲಿಸಿವೆ.
ಹಾವೇರಿ ಜಿಲ್ಲಾ ತಂಡ, ಹಾಸನದ ತಂಡವನ್ನು 1-0 ಗೋಲಿನಿಂದ ಸೋಲಿಸಿದರೆ, ಏಕಪಕ್ಷೀಯವಾಗಿ ನಡೆದ ಎರಡನೇ ಪಂದ್ಯದಲ್ಲಿ ಬೆಂಗಳೂರು ನಗರ ತಂಡ, ಬಳ್ಳಾರಿ ಜಿಲ್ಲಾ ತಂಡವನ್ನು 8-0 ಅಂಕಗಳ ಅಂತರದಿಂದ ಪರಾಭವಗೊಳಿಸಿತು.
ಹಾವೇರಿ ತಂಡದ ಪರವಾಗಿ ಮಹಮ್ಮದ್ ಹಮೀದ್ ಏಕೈಕ ಗೋಲು ಬಾರಿಸಿದರು. ಬೆಂಗಳೂರು ತಂಡದ ಪರವಾಗಿ ರಾಹುಲ್ ಸಿ.ಜೆ ಹಾಗೂ ಆರ್ಯನ್ ಉತ್ತಪ್ಪ ಎಂ.ಟಿ. ಅವರು ಹ್ಯಾಟ್ರಿಕ್ ಗೋಲುಗಳನ್ನು ಸಂಪಾದಿಸಿದರು. ಉಳಿದೆರಡು ಗೋಲುಗಳನ್ನು ಗೌರವ್ ಗಣಪತಿ ಹಾಗೂ ವಚನ ಎಚ್.ಎ. ಹೊಡೆದರು.
ಕಬಡ್ಡಿ: ದ.ಕ., ಉಡುಪಿ ಮಹಿಳೆಯರಿಗೆ ಭರ್ಜರಿ ಜಯ
ಉಡುಪಿ: ಕರ್ನಾಟಕ ಕ್ರೀಡಾಕೂಟದ ಕಬಡ್ಡಿ ಸ್ಪರ್ಧೆಗಳು ಇಂದು ಪ್ರಾರಂಭಗೊಂಡಿದ್ದು, ಮಹಿಳೆಯರ ವಿಭಾಗದಲ್ಲಿ ಆತಿಥೇಯ ದಕ್ಷಿಣ ಕನ್ನಡ ಹಾಗೂ ಉಡುಪಿ ತಂಡಗಳು ಭರ್ಜರಿ ಜಯ ಗಳಿಸಿವೆ.
ದಕ್ಷಿಣ ಕನ್ನಡದ ಮಹಿಳೆಯರು ತಮ್ಮ ಮೊದಲ ಪಂದ್ಯದಲ್ಲಿ ಹಾವೇರಿ ಜಿಲ್ಲಾ ತಂಡವನ್ನು 45-6 ಅಂಕಗಳ ಅಂತರದಿಂದ ಹಿಮ್ಮೆಟ್ಟಿಸಿದರು. ಮಧ್ಯಂತರದ ವೇಳೆಗೆ 22-3 ಅಂಕಗಳ ಮುನ್ನಡೆ ಸಾದಿಸಿದ್ದ ದಕ್ಷಿಣ ಕನ್ನಡ ಬಳಿಕ ಇನ್ನೂ 23 ಅಂಕಗಳನ್ನು ಸಂಪಾದಿಸಿ ಕೇವಲ ಮೂರನ್ನು ಎದುರಾಳಿ ಬಿಟ್ಟುಕೊಟ್ಟಿತು.
ಮತ್ತೊಂದು ಆತಿಥೇಯ ತಂಡವಾದ ಉಡುಪಿ ಸಹ ತನ್ನ ಆರಂಭಿಕ ಪಂದ್ಯದಲ್ಲಿ ಮೈಸೂರು ತಂಡವನ್ನು 34-8 ಅಂಕಗಳ ಅಂತರಿಂದ ಬಗ್ಗುಬಡಿಯಿತು. ವಿರಾಮದ ವೇಳೆಗೆ ಉಡುಪಿ ತಂಡ 15-3 ಅಂಕಗಳಿಂದ ಮುಂದಿದ್ದು, ಬಳಿಕ ತನ್ನ ಆಟ ವನ್ನು ಇನನಷ್ಟು ಬಿರುಸುಗೊಳಿಸಿ ಅಂತಿಮವಾಗಿ 26 ಅಂಕಗಳ ಅಂತರದಿಂದ ಎದುರಾಳಿಯನ್ನು ಹಿಮ್ಮೆಟ್ಟಿಸಿತು.
ದಿನದ ಇನ್ನೊಂದು ಪಂದ್ಯದಲ್ಲಿ ಚಿಕ್ಕಮಗಳೂರು ತಂಡ, ವಿಜಯಪುರ ಜಿಲ್ಲಾ ತಂಡವನ್ನು 29-14 ಅಂಕಗಳ ಅಂತರದಿಂದ ಸೋಲಿಸಿತು. ಮದ್ಯಂತರದ ವೇಳೆಗೆ ಅದು 11-7ರ ಮುನ್ನಡೆಯಲ್ಲಿತ್ತು. ದಿನದ ನಾಲ್ಕನೇ ಪಂದ್ಯದಲ್ಲಿ ಬೆಂಗಳೂರು ನಗರ ತಂಡ, ಬೆಳಗಾವಿ ತಂಡವನ್ನು 25-21ರಿಂದ ರೋಚಕವಾಗಿ ಸೋಲಿಸಿತು. ವಿರಾಮದ ವೇಳೆಗೆ ಬೆಳಗಾವಿ ತಂಡ 12-10ರ ಮುನ್ನಡೆಯಲ್ಲಿತ್ತು.
ಪುರುಷರಿಗೂ ಜಯ: ಪುರುಷರ ವಿಭಾಗದ ತನ್ನ ಮೊದಲ ಪಂದ್ಯದಲ್ಲಿ ದಕ್ಷಿಣ ಕನ್ನಡ ತಂಡ, ಬಾಗಲಕೋಟೆ ತಂಡವನ್ನು 30-29ರಿಂದ ಕೇವಲ ಒಂದು ಅಂಕದಿಂದ ಸೋಲಿಸಿತು. ವಿರಾಮದ ವೇಳೆಗೆ 12-18ರ ಹಿನ್ನಡೆಯಲ್ಲಿದ್ದ ದಕ್ಷಿಣ ಕನ್ನಡ, ಆ ಬಳಿಕ ತನ್ನ ಆಟವನ್ನು ಮೇಲ್ಮಟ್ಟಕ್ಕೇರಿಸಿ 18 ಅಂಕ ಗಳಿಸಿ ಎದುರಾಳಿಗೆ 11 ಮಾತ್ರ ಬಿಟ್ಟುಕೊಟ್ಟಿತು.
ಆದರೆ ಉಡುಪಿ ಪುರುಷರ ತಂಡ ತನ್ನ ಮೊದಲ ಪಂದ್ಯದಲ್ಲಿ ಸೋಲನನುಭವಿಸಿತು. ಬೆಂಗಳೂರು ಗ್ರಾಮಾಂತರ ತಂಡ, ಉಡುಪಿಯನ್ನು 35-19 ಅಂಕಗಳಿಂದ ಹಿಮ್ಮೆಟ್ಟಿಸಿತು.ವಿರಾಮದ ವೇಳೆಗೆ ಉಡುಪಿ 18-10 ಅಂಕಗಳ ಮುನ್ನಡೆಯಲ್ಲಿ ದ್ದರೂ, ಅನಂತರ ಅದನ್ನು ಉಳಿಸಿಕೊಳ್ಳಲು ವಿಪಲವಾಯಿತು.
ಉಳಿದೆರಡು ಪಂದ್ಯಗಳಲ್ಲಿ ಬೆಂಗಳೂರು ನಗರ ತಂಡ, ಧಾರವಾಡ ತಂಡವನ್ನು 37-21 (ವಿರಾಮದ ವೇಳೆ 16-16) ಅಂಕಗಳಿಂದ ಸೋಲಿಸಿತು. ಮತ್ತೊಂದು ಪಂದ್ಯದಲ್ಲಿ ಹಾಸನ ತಂಡ, ಮಂಡ್ಯವನ್ನು 49-40 ಅಂಕಗಳ ಅಂತರದಿಂದ ಸೋಲಿಸಿತು.