ಪರಿಶಿಷ್ಟ ಜಾತಿ, ಪಂಗಡಗಳ ವಿಶೇಷ ಸಭೆ ಕರೆಯಲು ದಸಂಸ ಆಗ್ರಹ
ಕುಂದಾಪುರ, ಜ.19: ಪರಿಶಿಷ್ಟ ಜಾತಿ, ಪಂಗಡಗಳಿಗೆ ಭೂಮಿ ಹಂಚಿಕೆ ಯಲ್ಲಿ ಕಂದಾಯ ಇಲಾಖೆಯ ನಿರ್ಲಕ್ಷ್ಯ ಹಾಗೂ ತಾಲೂಕಿನ ಬಹುತೇಕ ಗ್ರಾಮ ಪಂಚಾಯತಿಗಳಲ್ಲಿ ಕುಲುಷಿತ ಕುಡಿಯುವ ನೀರನ್ನು ಒದಗಿಸುತ್ತಿರುವುದನ್ನು ವಿರೋಧಿಸಿ ತಕ್ಷಣವೇ ತಾಲೂಕು ಆಡಳಿತ ಪರಿಶಿಷ್ಟ ಜಾತಿ ಪಂಗಡಗಳ ವಿಶೇಷ ಸಭೆಯನ್ನು ಕರೆಯಬೇಕೆಂದು ಕುಂದಾಪುರ ದಸಂಸ ತಾಲೂಕು ಸಂಚಾಲಕ ಕೆ.ಸಿ ರಾಜು ಬೆಟ್ಟಿನಮನೆ ಆಗ್ರಹಿಸಿದರು.
ರವಿವಾರ ಕುಂದಾಪುರದ ಅಂಬೇಡ್ಕರ್ ಭವನದಲ್ಲಿ ಕರೆಯಲಾದ ತಾಲೂಕು ಸಮಿತಿಯ ತುರ್ತುಸಭೆಯಲ್ಲಿ ಮಾತನಾಡಿದ ಅವರು ಈ ಒತ್ತಾಯ ಮಾಡಿದರು.
ಕೇಂದ್ರ ಗೃಹ ಸಚಿವ ಅಮಿತ್ ಷಾ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಕುರಿತಂತೆ ಅವಹೇಳನಕಾರಿಯಾಗಿ ಮಾತಾಡಿರುವುದನ್ನು ಖಂಡಿಸಿ ಜ.23ರಂದು ಬೆಂಗಳೂರಿನ ಪ್ರೀಡಂ ಪಾರ್ಕಿನಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘಟನೆಗಳ ಒಕ್ಕೂಟ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಕುಂದಾಪುರ ತಾಲೂಕು ಸಮಿತಿಯಿಂದ ಅತೀ ಹೆಚ್ಚು ಕಾರ್ಯಕರ್ತರು ಭಾಗವಹಿಸಲು ಸಹ ಸಭೆ ನಿರ್ಧರಿಸಿತು.
ಸಭೆಯಲ್ಲಿ ಜಿಲ್ಲಾ ಸಂಘಟನ ಸಂಚಾಲಕ ಸುರೇಶ್ ಹಕ್ಲಾಡಿ, ಜಿಲ್ಲಾ ಸಮಿತಿ ಸದಸ್ಯ ಗೋಪಾಲಕೃಷ್ಣ ನಾಡ, ತಾಲೂಕು ಕೋಶಾಧಿಕಾರಿ ಚಂದ್ರ ಕೊರ್ಗಿ, ಸಂಘಟನಾ ಸಂಚಾಲಕರುಗಳಾದ ಚಂದ್ರ ಉಳ್ಳೂರು, ಎಸ್.ಎಚ್ ಉದಯ ಕುಮಾರ್, ಅಶೋಕ ಮೊಳಹಳ್ಳಿ, ಭಾಸ್ಕರ ಆಲೂರು, ಭವಾನಿ ನಾಯ್ಕ, ಶ್ರೀಕಾಂತ್ ಹಿಜಾಣ, ಸತೀಶ್, ರಾಮನಗರ ಗ್ರಾಮ ಶಾಖೆ ಸಂಚಾಲಕ ರಾದ ರಾಜು ಮೊಳಹಳ್ಳಿ, ಕುಷ್ಟ ಹರ್ಕೂರು, ಪ್ರದೀಪ್ ಹೊಸ್ಮಠ, ಸೂರ ನೈಕಂಬ್ಳಿ, ರಾಜು ಅಂಪಾರು, ಉದಯ ಮೊಳಹಳ್ಳಿ ಹಾಗೂ ಗ್ರಾಮಶಾಖೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.