×
Ad

ತೊಟ್ಟಂ ಚರ್ಚಿನಲ್ಲಿ ಕ್ರೈಸ್ತ ಐಕ್ಯತಾ ವಾರದ ಪ್ರಾರ್ಥನಾ ಕೂಟ

Update: 2025-01-19 22:09 IST

ಉಡುಪಿ, ಜ.19: ಮಲ್ಪೆ ಸಮೀಪದ ತೊಟ್ಟಂನ ಸಂತ ಅನ್ನಮ್ಮ ಚರ್ಚಿನ ವತಿಯಿಂದ ಕ್ರೈಸ್ತ ಐಕ್ಯತಾ ವಾರದ ಪ್ರಯುಕ್ತ ಪ್ರಾರ್ಥನಾ ಕೂಟ ರವಿವಾರ ನಡೆಯಿತು.

ಈ ವೇಳೆ ಸಂದೇಶ ನೀಡಿದ ಉಡುಪಿ ಧರ್ಮಪ್ರಾಂತದ ಬೈಬಲ್ ಆಯೋಗದ ನಿರ್ದೇಶಕ ವಂ.ಸಿರಿಲ್ ಲೋಬೊ ಮಾತನಾಡಿ ಪ್ರವಿತ್ರ ರಾಗುವವರಿಗೆ ಪ್ರಭು ಯೇಸು ಕ್ರಿಸ್ತರು ಸಹೋದರತ್ವದ ಪಾಠವನ್ನು ಕಲಿಸಿದ್ದಾರೆ. ಇಂದು ಕ್ರೈಸ್ತ ಧರ್ಮವು ವಿವಿಧ ಸಭೆಗಳಿಂದ ಗುರುತಿಸ ಲ್ಪಟ್ಟಿದ್ದರೂ ಕೂಡ ನಾವೆಲ್ಲರೂ ಕೂಡ ಕ್ರಿಸ್ತನಲ್ಲಿ ಐಕ್ಯತೆ ಹೊಂದಿರುವುದು ಪ್ರಮುಖ ಗುರುತಾಗಿದೆ ಎಂದರು.

ಇಂತಹ ಸಪ್ತಾಹಗಳು ನಮ್ಮೆಲ್ಲರನ್ನೂ ಒಗ್ಗೂಡಿಸುವ ಶ್ರೇಷ್ಠ ಸಾಧನಗಳಾಗಿವೆ. ಇತರ ಸಭೆಗಳಲ್ಲಿ ಇರುವ ಒಳಿತುಗಳನ್ನು ನಮ್ಮಲ್ಲಿ ಪಾಲಿಸಿ ಒಂದಾಗಿ ಪ್ರಾರ್ಥಿಸುವುದೇ ಐಕ್ಯತಾ ವಾರದ ಮುಖ್ಯ ಉದ್ದೇಶವಾಗಿದೆ. ಒಟ್ಟಾಗಿ ಊಟ ಮಾಡುವ ನಾವು ಒಟ್ಟಾಗಿ ಪ್ರಾರ್ಥನೆ ಮಾಡಲು ಐಕ್ಯತಾ ಕೂಟ ದಾರಿಯಾಗಲಿ ಎಂದರು.

ಸಿಎಸ್‌ಐ ಕ್ರಿಸ್ತ ಮಹಿಮಾ ಚರ್ಚ್ ಮಣಿಪುರ ಇದರ ಸಭಾ ಪಾಲಕರಾದ ವಂ.ಪ್ರವೀಣ್ ಮಾಬೆನ್ ಮಾತನಾಡಿ ಪ್ರತಿಯೊಬ್ಬರೂ ಕ್ರಿಸ್ತನಲ್ಲಿ ಐಕ್ಯತೆ ಯನ್ನು ಕಾಣಬೇಕಾಗಿದ್ದು ನಮ್ಮಲ್ಲಿರುವ ಬೇರೆ ಬೇರೆ ಆಲೋಚನೆಗಳನ್ನು ಒಂದಾಗಿಸಲು ಐಕ್ಯತಾ ಸಪ್ತಾಹ ಪ್ರೇರಣೆ ಎಂದರು.

ಮಲ್ಪೆ ಯುಬಿಎಂ ಎಬನೇಜರ್ ಚರ್ಚಿನ ಸಭಾಪಾಲಕರಾದ ಕುಮಾರ್ ಸಾಲಿನ್ಸ್ ಮಾತನಾಡಿ ಕ್ರೈಸ್ತ ಸಮುದಾಯ ವಿವಿಧ ಪಂಗಡಗಳಲ್ಲಿ ಹಂಚಿ ಹೋಗಿದ್ದರೂ ಕೂಡ ನಮ್ಮೆಲ್ಲರ ಬದುಕಿನ ಮೂಲ ಯೇಸು ಸ್ವಾಮಿಯಾಗಿದ್ದಾರೆ. ಕ್ರಿಸ್ತನ ಪ್ರೀತಿ ಮತ್ತು ಕ್ಷಮಾಪಣೆ ನಮ್ಮೆಲ್ಲರ ಬದುಕಿಗೆ ದಾರಿದೀಪವಾಗಬೇಕು. ಸ್ವಸ್ಥ ಸಮಾಜ ಕಟ್ಟಲು ಪ್ರತಿಯೊಬ್ಬರು ಕೈಜೋಡಿಸಿ ಬಹುತ್ವ ಸಮಾಜದಲ್ಲಿ ಸತ್ಯ ಪ್ರೀತಿ ಮತ್ತು ಶಾಂತಿಯ ಸಾಧನಗಳಾಗಬೇಕು ಎಂದರು.

ಐಕ್ಯತಾ ಪ್ರಾರ್ಥನಾ ಕೂಟದ ನೇತೃತ್ವ ವಹಿಸಿದ್ದ ತೊಟ್ಟಂ ಸಂತ ಅನ್ನಮ್ಮ ಚರ್ಚಿನ ಧರ್ಮಗುರು ವಂ. ಡೆನಿಸ್ ಡೆಸಾ ಮಾತನಾಡಿ ಪ್ರತಿವರ್ಷ ಜನವರಿ ತಿಂಗಳ 18 - 25 ರ ತನಕ ಕ್ರೈಸ್ತ ಐಕ್ಯತಾ ಸಪ್ತಾಹವನ್ನು ಆಚರಿಸಲಾಗುತ್ತಿದ್ದು ಈ ವರ್ಷ 1700ನೇ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತಿದೆ. ಈ ಸಪ್ತಾಹದಲ್ಲಿ ಪ್ರಾರ್ಥನಾ ಕೂಟ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಎಲ್ಲಾ ಕ್ರೈಸ್ತ ಸಭೆಗಳನ್ನು ಒಗ್ಗೂಡಿಸಿಕೊಂಡು ಆಯೋಜಿಸಲಾಗುತ್ತದೆ ಎಂದರು.

ಪ್ರಾರ್ಥನಾಕೂಟದಲ್ಲಿ ಸಿಎಸ್‌ಐ ದೇವಾಲಯ ಮಲ್ಪೆ, ಯುಬಿಎಂ ಎಬನೇಜರ್ ಚರ್ಚ್ ಮಲ್ಪೆ ಹಾಗೂ ತೊಟ್ಟಂ ಸಂತ ಅನ್ನಮ್ಮ ಚರ್ಚಿನ ಗಾಯನ ಮಂಡಳಿಗಳು ಪ್ರಾರ್ಥನಾ ಗೀತೆಗಳನ್ನು ಪ್ರಸ್ತುತಪಡಿಸಿದವು.

ತೊಟ್ಟಂ ಸಂತ ಅನ್ನಮ್ಮ ಚರ್ಚಿನ ಪಾಲನಾ ಸಮಿತಿ ಉಪಾಧ್ಯಕ್ಷ ಸುನೀಲ್ ಫೆರ್ನಾಂಡಿಸ್, ಕಾರ್ಯದರ್ಶಿ ಬ್ಲೆಸಿಲ್ಲಾ ಕ್ರಾಸ್ತಾ, 20 ಆಯೋಗಗಳ ಸಂಯೋಜಕರಾದ ವನಿತಾ ಫೆರ್ನಾಂಡಿಸ್, ಸೈಂಟ್ ಆ್ಯನ್ಸ್ ಕಾನ್ವೆಂಟಿನ ಧರ್ಮಭಗಿನಿಯರು, ಎಲ್ಲಾ ವಾಳೆಗಳ ಗುರಿಕಾರರು ಪ್ರಾರ್ಥನಾಕೂಟದಲ್ಲಿ ಪಾಲ್ಗೊಂಡರು.

ವಂ.ಡೆನಿಸ್ ಡೆಸಾ ಸ್ವಾಗತಿಸಿ, ಗಿಲ್ಬರ್ಟ್ ಪಿಂಟೊ ವಂದಿಸಿದರು. ಗ್ರೇಸಿ ಪಿಂಟೊ ಕಾರ್ಯಕ್ರಮ ನಿರೂಪಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News