×
Ad

ಕರ್ನಾಟಕ ಕ್ರೀಡಾಕೂಟ| ಸೈಕ್ಲಿಂಗ್ ಸ್ಪರ್ಧೆ: ಉತ್ತರ ಕರ್ನಾಟಕದ ಸ್ಪರ್ಧಿಗಳ ಮೇಲುಗೈ

Update: 2025-01-19 22:33 IST

ಉಡುಪಿ, ಜ.19: ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ. ಅವರು ಉಡುಪಿ ಹೊರವಲಯದ ಉಪ್ಪೂರು ಸರಕಾರಿ ಪ್ರೌಢ ಶಾಲೆಯ ಬಳಿ ಹಸಿರು ನಿಶಾನೆ ತೋರಿಸಿದ ಕರ್ನಾಟಕ ಕ್ರೀಡಾಕೂಟದ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಉತ್ತರ ಕರ್ನಾಟಕದ ಕ್ರೀಡಾಪಟುಗಳು ಪುರುಷ ಹಾಗೂ ಮಹಿಳಾ ವಿಭಾಗಗಳಲ್ಲಿ ಸಂಪೂರ್ಣ ಮೇಲುಗೈ ಸಾಧಿಸಿದರು.

ಕೊಳಲಗಿರಿ ವಾಟರ್‌ಟ್ಯಾಂಕ್ ಸಮೀಪದಿಂದ ಪೆರ್ಡೂರು ಮಾರ್ಗದಲ್ಲಿ ಬರುವ ಕುಕ್ಕೆಹಳ್ಳಿ ಜಂಕ್ಷನ್ ಬಳಿಯ ಶಾಂತಿವನ ಜಂಕ್ಷನ್‌ವರೆಗೆ 10ಕಿ.ಮೀ. ಮಾರ್ಗದಲ್ಲಿ ನಡೆದ ಇಂದಿನ ಪುರುಷರ ಮತ್ತು ಮಹಿಳೆಯರ ಟೀಮ್ ಟೈಮ್ ಟ್ರಯಲ್ ಹಾಗೂ ಮಾಸ್ ಸ್ಟಾರ್ಟ್ ಸ್ಪರ್ಧೆಗಳೆರಡರಲ್ಲೂ ಉತ್ತರ ಕರ್ನಾಟಕ ವಿಜಯಪುರ, ಬಾಗಲಕೋಟೆ, ಬೆಳಗಾವಿಯ ಸೈಕಲಿಸ್ಟ್‌ಗಳೇ ಮೊದಲೆರಡು ಸ್ಥಾನಗಳನ್ನು ಗೆದ್ದುಕೊಂಡರು.

ಪುರುಷರ 40ಕಿ.ಮೀ. ಟೀಮ್ ಟೈಮ್ ಟ್ರಯಲ್‌ನಲ್ಲಿ ವಿಜಯಪುರದ ಶ್ರೀಸಾಲಿ ವೀರಾಪುರ್, ಉದಯ ಗುಲೇಡ್, ಹನುಮಂತ ಮರನೂರ್ ಹಾಗೂ ರಮೇಶ್ ಮಲಗುಂಡಿ ಅವರನ್ನೊಳಗೊಂಡ ತಂಡ 58ನಿ.46.77ಸೆ.ಗಳಲ್ಲಿ ಮೊದಲಿಗರಾಗಿ ಗುರಿಮುಟ್ಟಿದರೆ, 1ಗಂಟೆ 21.22ಸೆ.ಗಳಲ್ಲಿ ಗುರಿಮುಟ್ಟಿಗ ಬಾಗಲಕೋಟೆ ತಂಡ ಬೆಳ್ಳಿಪದಕ ಹಾಗೂ ಮೈಸೂರು ತಂಡ (1ಗ.5ನಿ41.63ಸೆ.) ಕಂಚಿನ ಪದಕ ಪಡೆಯಿತು.

ಮಹಿಳೆಯರ 20ಕಿ.ಮೀ. ಟೀಮ್ ಟೈಮ್ ಟ್ರಯಲ್‌ನಲ್ಲಿ ಪಾಯಲ್ ಚೌಹಾಣ್, ಅಕ್ಷತಾ ಭೂತಾನಿ ಹಾಗೂ ಕಾವೇರಿ ಡಾಲ್ಲಿ ಅವರನ್ನೊಳಗೊಂಡ ವಿಜಯಪುರ ತಂಡ 37ನಿ.03.768ಸೆ. ಸಾಧನೆಯೊಂದಿಗೆ ಚಿನ್ನದ ಪದಕವನ್ನು ಪಡೆಯಿತು. ಬೆಳಗಾವಿ ತಂಡ ಬೆಳ್ಳಿ ಹಾಗೂ ಮೈಸೂರು ತಂಡ ಕಂಚಿನ ಪದಕ ಗಳನ್ನು ಗೆದ್ದುಕೊಂಡವು.

ಪುರುಷರಿಗಾಗಿ ನಡೆದ 50ಕಿ.ಮೀ. ಮಾಸ್ ಸ್ಟಾರ್ಟ್ ಸ್ಪರ್ಧೆಯಲ್ಲಿ ಬಾಗಲಕೋಟೆಯ ಅರುಣ್ ಲಮ್ಹಾಣಿ ಚಿನ್ನದ ಪದಕ ಪಡೆದರೆ, ಮೈಸೂರಿನ ಚರಿತ ಗೌಡ ಬೆಳ್ಳಿ ಹಾಗೂ ಬೆಂಗಳೂರಿನ ನೀಲ್ ಡಿಸೋಜ ಕಂಚಿನ ಪದಕಗಳನ್ನು ಗೆದ್ದುಕೊಂಡರು.

ಮಹಿಳೆಯರ 30ಕಿ.ಮೀ. ಮಾಸ್ ಸ್ಟಾರ್ಟ್ ಸ್ಪರ್ಧೆಯಲ್ಲಿ ವಿಜಯಪುರ ತಂಡದ ಪಾಯಲ್ ಚೌಹಾಣ್ ಚಿನ್ನದ ಪದಕ ಪಡೆದರೆ, ಬಾಗಲಕೋಟೆಯ ದಾನಮ್ಮ ಗೌರವ್ವ ಬೆಳ್ಳಿ ಪದಕ ಹಾಗೂ ಮೈಸೂರಿನ ಗ್ಲೆಯಾನ್ ಡಿಸೋಜ ಕಂಚಿನ ಪದಕಗಳನ್ನು ಗೆದ್ದುಕೊಂಡರು.

50ಕಿ.ಮೀ. ಮಾಸ್ ಸ್ಟಾರ್ಟ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಕೂಲಿಕಾರ್ಮಿನ ಮಗ ಅರುಣ್


ಒಲಿಂಪಿಕ್ ಸ್ಪರ್ಧೆಗಳಲ್ಲೂ ಸ್ಥಾನ ಪಡೆದಿರುವ ಸೈಕ್ಲಿಂಗ್ ಎಂಬುದು ಉತ್ತರ ಕರ್ನಾಟಕದ ಯುವಜನತೆಗೆ ನಿತ್ಯದ ಹವ್ಯಾಸ. ಕರಾವಳಿ ಹಾಗೂ ಬಯಲುಸೀಮೆ ಪ್ರದೇಶಗಳಲ್ಲಿ ವ್ಯಾಯಾಮದ ಭಾಗವಾಗಿಯಷ್ಟೇ ಇರುವ ಸೈಕ್ಲಿಂಗ್ ವಿಜಯಪುರ, ಬಾಗಲಕೋಟೆ, ಬೆಳಗಾವಿಯವರಿಗೆ ನಿತ್ಯದ ಕಾಯಕ. ಕ್ರೀಡೆಗೆ ಹೊರತಾಗಿಯೂ ಅಲ್ಲಿನ ಜನತೆಗೆ ಸೈಕಲ್ ನಿತ್ಯದ ಸಂಗಾತಿ. ಈ ಕಾರಣದಿಂದಲೇ ಕಳೆದ ಮೂರು ವರ್ಷಗಳಿಂದ ಸೈಕಲಿಂಗ್‌ನ್ನು ನೆಚ್ಚಿಕೊಂಡಿರುವ ಬಾಗಲಕೋಟೆ ಜಿಲ್ಲೆಯ ಬಿಳಗಿ ತಾಲೂಕಿನ ಅರುಣ್ ಲಮ್ಹಾಣಿ ಇಂದು 50ಕಿ.ಮೀ. ಮಾಸ್ಟ್ ಸ್ಟಾರ್ಟ್‌ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.

ಬಿಳಗಿ ತಾಲೂಕು ತೆಗ್ಗಿ ಎಲ್‌ಟಿ ಗ್ರಾಮದ ಕೂಲಿಕಾರ್ಮಿಕರೊಬ್ಬರ ಮಗನಾದ 23 ವರ್ಷ ಪ್ರಾಯದ ಅರುಣ್ ಮೊದಲು ಕಬಡ್ಡಿ ಆಟಗಾರ ರಾಗಿದ್ದರು. ಮೂರು ವರ್ಷಗಳ ಹಿಂದೆ ತನ್ನ ಸ್ನೇಹಿತರಂತೆ ಸೈಕ್ಲಿಂಗ್‌ನಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡ ಅರುಣ್, ತಾನೇ ದುಡಿದು ಸೈಕಲ್ ಖರೀದಿಸಿ ಯಾರೊಬ್ಬರ ಸಹಾಯವಿಲ್ಲದೇ ಸ್ವಪ್ರಯತ್ನದಿಂದಲೇ ಅಭ್ಯಾಸ ನಡೆಸಿ ಇಲ್ಲೀಗ ಚಿನ್ನದ ಪದಕ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಸದ್ಯ ಬಿಳಗಿಯ ರುದ್ರೇಗೌಡ ಕಾಲೇಜಿನಲ್ಲಿ ಬಿ.ಎ. ಮೊದಲ ವರ್ಷದಲ್ಲಿ ಕಲಿಯುತ್ತಿರುವ ಅರುಣ್ ಲಮ್ಹಾಣಿ, ಆಗಾಗ ತಂದೆ ಯೊಂದಿಗೆ ಕೂಲಿ ಕೆಲಸಕ್ಕೂ ಹೋಗುತ್ತಿರುವುದಾಗಿ ತಿಳಿಸಿದರು. ಸ್ಪರ್ಧೆಗಳ ಬಗ್ಗೆ ತನಗೆ ಮಾಹಿತಿ ಇಲ್ಲ ಎನ್ನುವ ಅವರು ಅವಕಾಶ ಸಿಕ್ಕಿದರೆ ಮುಂದೆಯೂ ಸ್ಪರ್ಧೆಗಳಲ್ಲಿ ಬಾಗವಹಿಸುವುದಾಗಿ ತಿಳಿಸಿದರು.























Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News