ಗಾಂಜಾ ಮಾರಾಟ ಪ್ರಕರಣ: ಆರೋಪಿಗೆ ಜೈಲುಶಿಕ್ಷೆ
ಉಡುಪಿ, ಜ.20: ಅಕ್ರಮ ಗಾಂಜಾ ಮಾರಾಟ ಪ್ರಕರಣದ ಆರೋಪಿಗೆ ಉಡುಪಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 2 ವರ್ಷ 6 ತಿಂಗಳ ಕಠಿಣ ಸಜೆ ಮತ್ತು 20 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ.
ಅಂಬಲಪಾಡಿಯ ಅಖಿಲೇಶ್ ಶೆಟ್ಟಿ(25) ಶಿಕ್ಷೆಗೆ ಗುರಿಯಾದ ಆರೋಪಿ. 2016ರ ಜು.5ರಂದು ಕಡೆಕಾರು ಗ್ರಾಮದ ಕನ್ನರ್ಪಾಡಿ ದುರ್ಗಾ ಪರಮೇಶ್ವರಿ ಯುವಕ ಮಂಡಲದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಆರೋಪಿ ಯನ್ನು ಉಡುಪಿಯ ಜಿಲ್ಲಾ ಅಪರಾಧ ಪತ್ತೆ ದಳದ ಪೊಲೀಸ್ ನಿರೀಕ್ಷಕ ರತ್ನಕುಮಾರ್ ಜಿ. ಬಂಧಿಸಿ, 1ಕೆ.ಜಿ 150 ಗ್ರಾಂ ತೂಕದ ಗಾಂಜಾ ವಶಪಡಿಸಿಕೊಂಡಿದ್ದರು. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ನಂತರದಲ್ಲಿ ಪ್ರಕರಣವನ್ನು ಉಡುಪಿ ವೃತ್ತ ನಿರೀಕ್ಷಕ ಟಿ.ಆರ್ ಜಯಶಂಕರ್ ತನಿಖೆ ನಡೆಸಿ ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಕಿರಣ್ ಎಸ್. ಗಂಗಣ್ಣನವರ್ ಆರೋಪಿಯನ್ನು ದೋಷಿ ಎಂದು ಪರಿಗಣಿಸಿ 2 ವರ್ಷ 6 ತಿಂಗಳ ಕಠಿಣ ಸಜೆ ಮತ್ತು 20 ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿದರು. ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ಜಯರಾಮ ಶೆಟ್ಟಿ ವಾದ ಮಂಡಿಸಿದ್ದಾರೆ.