ಕರ್ನಾಟಕ ಕ್ರೀಡಾಕೂಟ| ಹಾಕಿ ಸ್ಪರ್ಧೆಯಲ್ಲಿ ಹಾವೇರಿ, ಬೆಂಗಳೂರು, ಧಾರವಾಡಕ್ಕೆ ಜಯ
ಮಣಿಪಾಲ, ಜ.20: ಮಣಿಪಾಲದ ಹಾಕಿ ಸ್ಟೇಡಿಯಂನಲ್ಲಿ ನಡೆದಿರುವ ಕರ್ನಾಟಕ ಕ್ರೀಡಾಕೂಟ-2025ರ ಹಾಕಿ ಸ್ಪರ್ಧೆ ಗಳಲ್ಲಿ ಇಂದು ಹಾವೇರಿ, ಬೆಂಗಳೂರು ನಗರ ಹಾಗೂ ಧಾರವಾಡ ತಂಡಗಳು ಜಯ ದಾಖಲಿಸಿದವು.
ಮೊದಲ ಪಂದ್ಯದಲ್ಲಿ ಹಾವೇರಿ ಜಿಲ್ಲಾ ತಂಡ, ದಕ್ಷಿಣ ಕನ್ನಡವನ್ನು 9-1 ಗೋಲುಗಳ ಭರ್ಜರಿ ಅಂತರದಿಂದ ಸೋಲಿಸಿತು. ಹಾವೇರಿ ತಂಡದ ಮಣಿಕಂಠ ಅವರು ಹ್ಯಾಟ್ರಿಕ್ ಸಹಿತ ನಾಲ್ಕು ಗೋಲು ಬಾರಿಸಿ ಮಿಂಚಿದರು. ಮದ್ಯಂತರದ ವೇಳೆಗೆ ವಿಜಯಿ ತಂಡ ಆರು ಗೋಲುಗಳ ಮುನ್ನಡೆಯಲ್ಲಿತ್ತು.
ಎರಡನೇ ಪಂದ್ಯದಲ್ಲಿ ಬೆಂಗಳೂರು ನಗರ, ಬಾಗಲಕೋಟೆಯನ್ನು 9-1ರ ಅಂತರದಿಂದ ಪರಾಭವಗೊಳಿಸಿತು. ಬೆಂಗಳೂರು ತಂಡದ ವಿವೇಕ್, ವಚನ ತಲಾ ಮೂರು ಗೋಲುಗಳನ್ನು ಗಳಿಸಿದರೆ, ಗೌರವ್ ಎರಡು ಗೋಲು ಬಾರಿಸಿದರು.
ದಿನದ ಮೂರನೇ ಪಂದ್ಯದಲ್ಲಿ ಧಾರವಾಡ ತಂಡ, ಹಾಸನ ತಂಡವನ್ನು ಏಕೈಕ ಗೋಲಿನಿಂದ ಹಿಮ್ಮೆಟ್ಟಿಸಿತು. ಧಾರವಾಡ ತಂಡದ ರಮೇಶ್ ಎಚ್.ಟಿ. ಪಂದ್ಯದ 47ನೇ ನಿಮಿಷದಲ್ಲಿ ವಿಜಯಿ ಗೋಲು ಬಾರಿಸಿದರು.
ಟೆನಿಸ್: ವೇದಾಂಶ ರೆಡ್ಡಿಯಾರ್‌ಗೆ ಸಿಂಗಲ್ಸ್ ಪ್ರಶಸ್ತಿ
ಕರ್ನಾಟಕ ಕ್ರೀಡಾಕೂಟದ ಪುರುಷರ ಟೆನಿಸ್ ಸಿಂಗಲ್ಸ್ ಪ್ರಶಸ್ತಿ ಬೆಂಗಳೂರು ಜಿಲ್ಲೆಯ ವೇದಾಂಶ ರೆಡ್ಡಿಯಾರ್ ಪಾಲಾಯಿತು. ಮಣಿಪಾಲದ ಮರೀನಾದಲ್ಲಿ ಇಂದು ನಡೆದ ಪೈನಲ್‌ನಲ್ಲಿ ರೆಡ್ಡಿಯಾರ್ ಅವರು ತನ್ನ ಜೊತೆಗಾರನಾದ ಸ್ಕಂಧ ಪ್ರಸನ್ನ ರಾವ್ ಅವರನ್ನು 6-4, 7-5ರ ನೇರ ಸೆಟ್‌ಗಳಿಂದ ಹಿಮ್ಮೆಟ್ಟಿಸಿದರು.
ಮಂಡ್ಯದ ಅರ್ಜುನ ಸೂರಿ ಅವರು ಬೆಂಗಳೂರು ಜಿಲ್ಲೆಯ ಮಂದೀಪ್ ರೆಡ್ಡಿ ಅವರನ್ನು ಹಿಮ್ಮೆಟ್ಟಿಸುವ ಮೂಲಕ ಸಿಂಗಲ್ಸ್ ನಲ್ಲಿ ಮೂರನೇ ಸ್ಥಾನದೊಂದಿಗೆ ಕಂಚಿನ ಪದಕ ಗೆದ್ದುಕೊಂಡರು.
ಪುರುಷರ ತಂಡ ಪ್ರಶಸ್ತಿಗಾಗಿ ನಾಳೆ ದಾವಣಗೆರೆ ಹಾಗೂ ಮೈಸೂರು ಜಿಲ್ಲಾ ತಂಡಗಳು ಸೆಣಸಲಿವೆ. ಮೂರನೇ ಸ್ಥಾನಕ್ಕಾಗಿ ಇಂದು ನಡೆದ ಪಂದ್ಯದಲ್ಲಿ ಬೆಂಗಳೂರು ಜಿಲ್ಲೆ, ಮಂಡ್ಯ ಜಿಲ್ಲೆಯನ್ನು 2-0 ಅಂತರದಿಂದ ಹಿಮ್ಮೆಟ್ಟಿಸಿ ಕಂಚಿನ ಪದಕ ಜಯಿಸಿತು.
ಪುರುಷರ ಡಬಲ್ಸ್‌ನ ಚಿನ್ನದ ಪದಕ ದಾವಣಗೆರೆ ಜಿಲ್ಲೆಯ ಅಲೋಕ್ ಆರಾಧ್ಯ ಹಾಗೂ ಬಸವರಾಜ್ ಕೆ. ಪಾಲಾಯಿತು. ಇಂದಿನ ಫೈನಲ್‌ನಲ್ಲಿ ಅವರು ಬೆಂಗಳೂರಿನ ವೇದಾಂಶ ರೆಡ್ಡಿಯಾರ್ ಹಾಗೂ ಸ್ಕಂಧ ಪ್ರಸನ್ನ ರಾವ್ ಜೋಡಿಯನ್ನು 7-5, 7-5ರ ನೇರ ಸೆಟ್‌ಗಳಿಂದ ಸೋಲಿಸಿದರು.
ಡಬಲ್ಸ್‌ನಲ್ಲಿ ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಉಡುಪಿಯ ರಾಮಚಂದ್ರ ಪಾಟ್ಕರ್ ಹಾಗೂ ನಿಖಿಲೇಶ್ ಅವರು ಮಂಡ್ಯದ ಅರ್ಜುನ್ ಸೂರಿ ಹಾಗೂ ನಿಖಿಲ್ ಯು.ಕೆ. ಅವರನ್ನು ಪರಾಭವಗೊಳಿಸಿದರು.