×
Ad

ಆರ್‌ಎಸ್‌ಎಸ್‌ನ ಸಂವಿಧಾನ ಸಮ್ಮಾನ್ ಅಭಿಯಾನ ಕಪಟ ನಾಟಕ: ಸುಂದರ್ ಮಾಸ್ತರ್

Update: 2025-01-21 22:06 IST

ಉಡುಪಿ, ಜ.21: ಆರ್‌ಎಸ್‌ಎಸ್ ನಡೆಸುತ್ತಿರುವ ಸಂವಿಧಾನ ಸಮ್ಮಾನ್ ಅಬಿಯಾನದ ಮೂಲಕ ಸಂವಿಧಾನವನ್ನು ಪೂಜೆ ಮಾಡಲು ಹೊರಟಿದ್ದಾರೆ. ಇದು ಅವರ ಕಪಟ ನಾಟಕ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ತರ್ ಆರೋಪಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಇವರು ನಾವು ಅಧಿಕಾರಕ್ಕೆ ಬಂದಿರು ವುದೇ ಸಂವಿಧಾನ ಬದಲಾವಣೆ ಮಾಡಲು ಹಾಗೂ ಕಳೆದ ಚುನಾವಣೆಯಲ್ಲಿ 400 ಸೀಟು ಬಂದರೆ ದೇಶದ ಸಂವಿಧಾನ ಅಡಿಮೇಲು ಮಾಡುವುದಾಗಿ ಹೇಳಿದ್ದಾರೆ. ಇದೀಗ ಸಂವಿಧಾನ ಸಮ್ಮಾನ ಮಾಡಲು ಹೊರಡುವ ಮೂಲಕ ಇವರ ನಿಜ ಬಣ್ಣ ಬಯಲು ಆಗುತ್ತಿದೆ ಎಂದು ಟೀಕಿಸಿದರು.

ಇಂದು ದೇಶದಲ್ಲಿ ಸಂವಿಧಾನ ವರ್ಸಸ್ ಮನುವಾದ ಎಂಬುದು ನಡೆಯುತ್ತಿದೆ. ಈ ದೇಶದ ಹಿಂದುಳಿದವರು, ಅಲ್ಪ ಸಂಖ್ಯಾತರು, ದಲಿತರು, ಶೋಷಿತರು ಈ ಸಂವಿಧಾನವನ್ನು ಖಂಡಿತವಾಗಿ ಉಳಿಸುತ್ತಾರೆ. ಯಾವುದೇ ಕಾರಣಕ್ಕೂ ಸಂವಿಧಾನವನ್ನು ಬದಲಾವಣೆ ಮಾಡಲು ನಾವು ಬಿಡುವುದಿಲ್ಲ ಮತ್ತು ಅವರಿಗೆ ಮನುವಾದವನ್ನು ತರಲು ಅವಕಾಶ ನೀಡುವುದಿಲ್ಲ ಎಂದು ಅವರು ತಿಳಿಸಿದರು.

ಜ.23ರಂದು ಪ್ರತಿಭಟನೆ: ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕ ಮಂಜುನಾಥ್ ಗಿಳಿಯಾರು ಮಾತನಾಡಿ, ದಲಿತ ಸಂಘರ್ಷ ಸಮಿತಿಗಳ ಒಕ್ಕೂಟದ ನೇತೃತ್ವದಲ್ಲಿ ಅಂಬೇಡ್ಕರ್ ಬಗ್ಗೆ ಕೇವಲವಾಗಿ ಮಾತ ನಾಡಿ ಕೋಟಿ ಕೋಟಿ ಜನರ ಮನಸ್ಸಿಗೆ ಘಾಸಿ ಮಾಡಿರುವ ಕೇಂದ್ರ ಗೃಹ ಸಚಿವ ತಕ್ಷಣ ರಾಜೀನಾಮೆ ನೀಡಬೇಕು ಅಥವಾ ಇಲ್ಲದಿದ್ದರೆ ಪ್ರಧಾನ ಮಂತ್ರಿ ಸಂಪುಟದಿಂದ ವಜಾಗೊಳಿಸಬೇಕು ಅಥವಾ ಅಂಬೇಡ್ಕರ್ ಪ್ರತಿಮೆ ಮುಂಭಾಗ ಮಂಡಿಯೂರಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿ ಜ.23ರಂದು ಬೆಂಗಳೂರಿನ ಪ್ರೀಡಂ ಪಾರ್ಕ್‌ನಲ್ಲಿ ಧರಣಿಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಸಹಸ್ರಾರು ಸಂಖ್ಯೆಯಲ್ಲಿ ಸೇರುವ ಈ ಹೋರಾಟದಲ್ಲಿ ಉಡುಪಿ ಜಿಲ್ಲೆಯಿಂದ 15 ಬಸ್‌ಗಳು ಸೇರಿದಂತೆ ವಿವಿಧ ವಾಹನಗಳ ಮೂಲಕ ಸುಮಾರು ಒಂದು ಸಾವಿರ ಮಂದಿ ಬೆಂಗಳೂರಿಗೆ ತೆರಳಲಿ ಭಾಗವಹಿಸಲಿದ್ದಾರೆ. ಅಮಿತ್ ಶಾ ಹೇಳಿಕೆಯಿಂದ ನಮ್ಮ ಸ್ವಾಭಿಮಾನಕ್ಕೆ ಪೆಟ್ಟು ಬಿದ್ದಿದೆ. ಈ ಹೋರಾಟದಲ್ಲಿ ನಮಗೆ ನ್ಯಾಯ ಸಿಗದಿದ್ದರೆ ಇದನ್ನು ರಾಷ್ಟ್ರ ಮಟ್ಟಕ್ಕೆ ತೆಗೆದುಕೊಂಡು ಹೋಗಿ ಆಂದೋಲನ ಮಾಡಲು ನಿರ್ಣಯ ಮಾಡಲಾಗಿದೆ. ಸಂವಿಧಾನ ಬದ್ಧವಾಗಿ ಅಧಿಕಾರ ಪಡೆದುಕೊಂಡವರು ಸಂವಿಧಾನಕ್ಕೆ ಆಶಯಕ್ಕೆ ಅನುಗುಣವಾಗಿ ಇರದೆ ಉಡಾಫೆಯಿಂದ ಮಾತನಾಡಬಾರದು. ಇದು ಎಲ್ಲರಿಗೂ ಪಾಠ ಆಗಬೇಕು ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಶ್ಯಾಮ್‌ರಾಜ್ ಬಿರ್ತಿ, ಮುಖಂಡರಾದ ಶ್ಯಾಂಸುಂದರ್ ತೆಕ್ಕಟ್ಟೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News