×
Ad

ಉಡುಪಿ| ವಿದೇಶದಲ್ಲಿ ಶಿಕ್ಷಣಕ್ಕೆ ಸೀಟು ಕೊಡಿಸಿವುದಾಗಿ ನಂಬಿಸಿ ವಂಚನೆ ಪ್ರಕರಣ: ಮೂವರು ಆರೋಪಿಗಳ ಬಂಧನ

Update: 2025-01-22 21:42 IST

ಉಡುಪಿ: ವಿದೇಶದಲ್ಲಿ ಶಿಕ್ಷಣಕ್ಕಾಗಿ ಸೀಟು ನೀಡಿವುದಾಗಿ ನಂಬಿಸಿ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಬಂಧಿಸಿ, ಲಕ್ಷಾಂತರ ರೂ. ಮೌಲ್ಯದ ನಗದು ಸಹಿತ ಇತರ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಹೊಸನಗರದ ಸುಮನ್ ಎಸ್.(24), ಮೂಡುಬಿದಿರೆಯ ಬೆಳುವಾಯಿ ಗ್ರಾಮದ ಸುಹಾನ್ ಖಾನ್ (22) ಹಾಗೂ ಮಹಾಝ್(23) ಬಂಧಿತ ಆರೋಪಿಗಳು. ಇವರು ಯುಕೆಯಲ್ಲಿ ಎಂಪಿಎಚ್ ವಿದ್ಯಾಭ್ಯಾಸವನ್ನು ಮಾಡಲು ಸೀಟನ್ನು ಕೊಡಿಸುವುದಾಗಿ ನಂಬಿಸಿ ಸಂತೋಷ ಎ. ಅವರಿಂದ 8.5 ಲಕ್ಷ ಹಣವನ್ನು ಪಡೆದು ವಂಚಿಸಿರುವ ಬಗ್ಗೆ ಜ.9ರಂದು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಕುರಿತು ನಗರ ಠಾಣಾ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್ ನೇತೃತ್ವದಲ್ಲಿ ಎಸ್ಸೈಗಳಾದ ಈರಣ್ಣ ಶಿರಗುಂಪಿ, ಪುನಿತ್ ಕುಮಾರ್, ಭರತೇಶ್, ಸಿಬ್ಬಂದಿ ಚೇತನ್ ಕುಮಾರ್, ಬಶೀರ್, ಕಾರ್ತಿಕ್, ಸಂತೋಷ, ಶುಭಾ, ಸುಷ್ಮಾ, ನೇತ್ರಾವತಿ ಹಾಗೂ ಸೆನ್ ಪೊಲೀಸ್ ಠಾಣೆಯ ಪ್ರವೀಣ ಕುಮಾರ್, ವೆಂಕಟೇಶ್, ಧರ್ಮಪ್ಪ, ರಾಜೇಶ್, ನಿಲೇಶ್, ದೀಕ್ಷೀತ್, ಮಯ್ಯಪ್ಪ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರಿಂದ 5ಲಕ್ಷ ರೂ. ಹಣ ಹಾಗೂ ಇನ್ನೋವಾ ಕಾರು ಮತ್ತು 2 ಮೊಬೈಲ್‌ಗಳನ್ನು ಪೊಲೀಸರು ವಶಪಡಿಸಿ ಕೊಂಡಿದ್ದಾರೆ. ಇವುಗಳ ಒಟ್ಟು ಮೌಲ್ಯ 9,56,000ರೂ. ಎಂದು ಅಂದಾಜಿಸಲಾಗಿದೆ. ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News