×
Ad

ಉಡುಪಿ: ರಂಗಭೂಮಿ ರಂಗೋತ್ಸವ ಉದ್ಘಾಟನೆ

Update: 2025-02-01 21:01 IST

ಉಡುಪಿ, ಫೆ.1: ರಂಗಭೂಮಿ ಉಡುಪಿ ವತಿಯಿಂದ ಮೂರು ದಿನಗಳ ಕಾಲ ನಡೆಯುವ ‘ರಂಗಭೂಮಿ ರಂಗೋತ್ಸವ’ ಸೋಮವಾರ ಸಂಜೆ ನಗರದ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಉದ್ಘಾಟನೆಗೊಂಡಿತು.

ಮಾಹೆ ಮಣಿಪಾಲದ ಸಹಕುಲಾಧಿಪತಿ ಹಾಗೂ ರಂಗಭೂಮಿ ಉಡುಪಿಯ ಗೌರವಾಧ್ಯಕ್ಷ ಡಾ.ಎಚ್.ಎಸ್. ಬಲ್ಲಾಳ್ ರಂಗೋತ್ಸವವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ರಂಗಭೂಮಿ ಕಲಾವಿದರಿಗೆ ಸಮಾಜ ದಿಂದ ಗೌರವ ಹಾಗೂ ಗುರುತಿಸುವಿಕೆ ಸಿಗಬೇಕು.ನಮ್ಮ ಸಿನೆಮಾ ಕಲಾವಿದರಲ್ಲಿ ಬಹು ಮಂದಿ ರಂಗಭೂಮಿ ಹಿನ್ನಲೆ ಯಿಂದ ಬಂದವರು. ಹೀಗಾಗಿ ರಂಗಭೂಮಿಗೆ ಪ್ರೋತ್ಸಾಹ ನೀಡಿ ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮದಾಗಿದೆ ಎಂದರು.

ರಂಗಭೂಮಿ ಉಡುಪಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ 45 ವರ್ಷದಿಂದ ನಿರಂತರವಾಗಿ ರಾಜ್ಯಮಟ್ಟದ ನಾಟಕ ಸ್ಪರ್ಧೆ ನಡೆಸುತ್ತಿರುವುದು ದೊಡ್ಡ ಕಾರ್ಯ. ರಂಗಭೂಮಿ ಹಮ್ಮಿ ಕೊಂಡ ರಂಗ ಶಿಕ್ಷಣಕ್ಕೆ ಅಭೂತಪೂರ್ವ ಸ್ಪಂದನೆ ದೊರೆತಿದೆ ಎಂದರು.

ಅದಾನಿ ಸಮೂಹದ ಅಧ್ಯಕ್ಷ ಕಿಶೋರ್ ಆಳ್ವ, ಕಾರ್ಕಳ ಯಕ್ಷ ರಂಗಾಯಣದ ನಿರ್ದೇಶಕ ಬಿ. ಆರ್. ವೆಂಕಟರಮಣ ಐತಾಳ್, ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಪೂರ್ಣಿಮಾ, ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ.ಲಕ್ಷ್ಮೀನಾರಾಯಣ ಕಾರಂತ ಹಾಗೂ ರಂಗಭೂಮಿ ಉಪಾಧ್ಯಕ್ಷರಾದ ಎನ್. ಆರ್.ಬಲ್ಲಾಳ್ ಹಾಗೂ ಭಾಸ್ಕರ ರಾವ್ ಕಿದಿಯೂರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಕಳೆದ ಡಿಸೆಂಬರ್ ತಿಂಗಳಲ್ಲಿ ರಂಗಭೂಮಿ ವತಿಯಿಂದ ನಡೆದ 45ನೇ ವರ್ಷದ ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಬೆಂಗಳೂರಿನ ರಂಗರಥ ಟ್ರಸ್ಟಿನ ಧರ್ಮನಟಿ ನಾಟಕ ತಂಡ ಸೇರಿದಂತೆ ಸ್ಪರ್ಧೆಯ ವಿಜೇತ ತಂಡಗಳಿಗೆ ಹಾಗೂ ಕಲಾವಿದರಿಗೆ ಬಹುಮಾನ ವಿತರಿಸಲಾಯಿತು. ನಾಟಕ ಸ್ಪರ್ಧೆಯ ತೀರ್ಪುಗಾರರಿಗೂ ಗೌರವಾರ್ಪಣೆ ನಡೆಯಿತು.

ರಂಗಭೂಮಿ ಉಡುಪಿ ಸಂಸ್ಥೆಯ ಪ್ರದಾನ ಕಾರ್ಯದರ್ಶಿ ಪ್ರದೀಪ್ ಚಂದ್ರ ಕುತ್ಪಾಡಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿ ದರು. ವಿವೇಕಾನಂದ ವಿಜೇತರ ಪಟ್ಟಿ ವಾಚಿಸಿದರು.ಪೂರ್ಣಿಮಾ ಸುರೇಶ್ ಕಾರ್ಯಕ್ರಮ ನಿರೂಪಿಸಿದರು. ಶ್ರೀಪಾದ ಹೆಗಡೆ ವಂದಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಧರ್ಮ ನಟಿ ನಾಟಕದ ಮರು ಪ್ರದರ್ಶನ ನಡೆಯಿತು. ರಂಗೋತ್ಸವಾದ ಎರಡನೇ ದಿನವಾದ ನಾಳೆ ಪ್ರಸಿದ್ಧ ವೈದ್ಯ ಹಾಗೂ ಹವ್ಯಾಸಿ ಕಲಾವಿದ ಡಾ. ಭಾಸ್ಕರನಂದ ಕುಮಾರ್ ಅವರಿಗೆ 2025ನೆ ಸಾಲಿನ ರಂಗಭೂಮಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News