ಮಣಿಪಾಲ| ಇ-ಸಿಗರೇಟ್ ಮಾರಾಟ ಪ್ರಕರಣ: ಇಬ್ಬರ ಬಂಧನ
Update: 2025-02-10 21:02 IST
ಮಣಿಪಾಲ, ಫೆ.10: ನಿಷೇಧಿತ ಇ-ಸಿಗರೇಟ್‌ಗಳ ಅಕ್ರಮ ಮಾರಾಟಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಮಣಿಪಾಲ ಪೊಲೀಸರು ಫೆ.9ರಂದು ರಾತ್ರಿ ವೇಳೆ ಬಂಧಿಸಿದ್ದಾರೆ.
ಉಡುಪಿ ಸಂತೆಕಟ್ಟೆಯ ವಾಸುದೇವ್(42) ಹಾಗೂ ಮಣಿಪಾಲದ ಸುಬ್ರಹ್ಮಣ್ಯ(42) ಬಂಧಿತ ಆರೋಪಿಗಳು. ಖಚಿತ ಮಾಹಿತಿಯಂತೆ ದಾಳಿ ನಡೆಸಿದ ಪೊಲೀಸರು ಸಿಗರೇಟ್‌ಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ವಾಸುದೇವ್‌ನನ್ನು ಮಣಿಪಾಲ ಕಾಯಿನ್ ಸರ್ಕಲ್ ಬಳಿ ಬಂಧಿಸಿ, ಆತನಿಂದ ವಿವಿಧ 9 ಬಗೆಯ ನಿಷೇಧಿತ ಇ ಸಿಗರೇಟ್‌ಗಳನ್ನು ವಶಪಡಿಸಿಕೊಂಡರು.
ಬಳಿಕ ಆತನ ಹೇಳಿಕೆಯಂತೆ ಮಣಿಪಾಲ ವಿ.ಎಸ್.ಆಚಾರ್ಯ ರಸ್ತೆಯ ಯೂತ್ ಕಾರ್ನರ್ ಅಂಗಡಿಯಲ್ಲಿ ಸುಬ್ರಹ್ಮಣ್ಯನನ್ನು ಬಂಧಿಸಿ, ಆತನ ವಶದಲ್ಲಿದ್ದ ವಿವಿಧ ಬಗೆಯ 25 ನಿಷೇಧಿತ ಇ-ಸಿಗರೇಟ್‌ಗಳನ್ನು ವಶಪಡಿಸಿ ಕೊಳ್ಳಲಾಯಿತು. ಇವುಗಳ ಒಟ್ಟು ಮೌಲ್ಯ 42,100ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.