ಹಾವುಗಳ ಬಗ್ಗೆ ಅಜ್ಞಾನ, ಮೂಢನಂಬಿಕೆ ಇನ್ನೂ ಉಳಿದಿವೆ: ಗುರುರಾಜ್ ಸನಿಲ್
ಕುಂದಾಪುರ, ಫೆ.23: ಹಾವುಗಳ ಮೇಲಿನ ವೈಜ್ಞಾನಿಕ ಸಂಶೋಧನೆಗಳಿಂದ ಬಹಳಷ್ಟು ಸತ್ಯಾಂಶಗಳು ಹೊರಬಂದಿವೆ. ಆದರೂ ನಮ್ಮಲ್ಲಿ ಅವುಗಳ ಕುರಿತು ಅಜ್ಞಾನ ಮೂಢ ನಂಬಿಕೆಗಳು ಇನ್ನೂ ಉಳಿದಿವೆ. ಹಾವುಗಳ ಮೇಲೆ ನಮಗೆಷ್ಟು ಪವಿತ್ರ ಭಾವನೆಗೂ ಹೆಚ್ಚಾಗಿ ಅವುಗಳ ಬಗ್ಗೆ ಅಜ್ಞಾನವಿದೆ. ನಮ್ಮಲ್ಲಿರುವ ಮೌಢ್ಯತೆಯ ಹಿನ್ನೆಲೆಯಲ್ಲಿ ಅವುಗಳಿಗೂ ನಮ್ಮಂತೆ ಈ ಭೂಮಿಯಲ್ಲಿ ಜೀವಿಸುವ ಹಕ್ಕಿದೆ ಎಂಬ ಸತ್ಯವನ್ನು ಮರೆತಿದ್ದೇವೆ ಎಂದು ಉರಗ ತಜ್ಞ ಗುರುರಾಜ್ ಸನಿಲ್ ಹೇಳಿದ್ದಾರೆ.
ಸಮುದಾಯ ಸಾಂಸ್ಕೃತಿಕ ಸಂಘಟನೆ ಕುಂದಾಪುರ ವತಿಯಿಂದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕುಂದಾಪುರ ತಾಲೂಕು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಕುಂದಾಪುರದ ಅಂಬೇಡ್ಕರ್ ಭವನದಲ್ಲಿ ರವಿವಾರ ದಿವಂಗತ ಕಾರ್ಕಡ ರಾಮಚಂದ್ರ ಉಡುಪ ನೆನಪಿನ ವಿಜ್ಞಾನ ಕಾರ್ಯಕ್ರಮ ದಲ್ಲಿ ’ಹಾವು- ನಂಬಿಕೆ ಮತ್ತು ವಾಸ್ತವ’ ಎಂಬ ವಿಚಾರದ ಕುರಿತು ಅವರು ಮಾತನಾಡುತಿದ್ದರು.
ಎಲ್ಲಾ ಹಾವುಗಳು ಮಾಂಸಾಹಾರಿಗಳು. ಇವುಗಳ ಮುಖ್ಯ ಆಹಾರ ಸರಿಸೃಪಗಳು, ಪಕ್ಷಿಗಳು, ಸಸ್ತನಿಗಳು ಮತ್ತು ಉಭಯ ವಾಸಿ ಜೀವಿಗಳಾಗಿವೆ. ಕಾಳಿಂಗ ಸರ್ಪ ಕಡಂಬಳ ಹಾವುಗಳು ಮುಖ್ಯವಾಗಿ ಇತರ ಜಾತಿಯ ಹಾವುಗಳನ್ನು ತಿಂದು ಬದುಕುತ್ತವೆ ಮತ್ತು ನಾಗರಹಾವು ಸೇರಿದಂತೆ ಇವು ಸ್ವ ಹಾವುಗಳ ಭಕ್ಷಣೆಯನ್ನು ಮಾಡುತ್ತದೆ ಎಂದರು.
ಈ ಪೃಥ್ವಿಯಲ್ಲಿ ಮನುಷ್ಯ ದುರಾಸೆಯಿಂದ ಜಗತ್ತಿಗೆ ಆಧುನಿಕತೆಯನ್ನು ತರುವ ಹುನ್ನಾರದಲ್ಲಿ ತನ್ನ ಮುಂದಿನ ಪೀಳಿಗೆ ಯನ್ನು ಮೇಲೇಳಲಾಗದ ಕಂದಕಕ್ಕೆ ತಳ್ಳುವ ತಯಾರಿ ನಡೆಸಿದ್ದಾನೆ. ಈ ನಿಸರ್ಗದ ಸಮಸ್ತ ಜೀವ ರಾಶಿಗಳು ಒಂದ ನ್ನೊಂದು ಅವಲಂಬಿಸಿ ಬದುಕು ಸಾಗಿಸುತ್ತಿರುವುದು ಪ್ರಕೃತಿಯ ವೈಶಿಷ್ಟ್ಯಗಳಲ್ಲೊಂದಾಗಿದೆ. ಆದರೆ ಬುದ್ಧಿಜೀವಿ ಎನಿಸಿ ಕೊಂಡ ಮಾನವ ಮಾತ್ರ ನಿಸರ್ಗ ನಿಯಮಕ್ಕೆ ವಿರುದ್ಧವಾಗಿ ಜೀವಿಸುತ್ತಿರುವುದು ನಿಜಕ್ಕೂ ದುರಂತ ಎಂದು ಅವರು ತಿಳಿಸಿದರು.
ಕುಂದಾಪುರ ಸಮುದಾಯದ ಅಧ್ಯಕ್ಷ ಡಾ.ಸದಾನಂದ ಬೈಂದೂರು, ದಾನಿಗಳಾದ ಕೆ.ಆರ್.ನಾಯಕ್, ಚಂದ್ರಶೇಖರ್, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸಂಚಾಲಕ ರಾಜು ಬೆಟ್ಟಿನಮನೆ, ವ್ಯಂಗ್ಯಚಿತ್ರಕಾರ ಪಂಜು ಗಂಗೊಳ್ಳಿ ಉಪಸ್ಥಿತರಿದ್ದರು.
ಚಂದ್ರಶೇಖರ್ ದಿ.ಕಾರ್ಕಡ ರಾಮಚಂದ್ರ ಉಡುಪರ ಪರಿಚಯದೊಂದಿಗೆ ಸ್ಮರಿಸಿದರು. ಸಮುದಾಯದ ಅಧ್ಯಕ್ಷ ಡಾ.ಸದಾನಂದ ಬೈಂದೂರು ಅತಿಥಿಗಳ ಪರಿಚಯ ಮಾಡಿದರು. ನಮ್ಮ ಭೂಮಿ ಸಂಸ್ಥೆಯ ವಿದ್ಯಾರ್ಥಿಗಳು, ಸಮುದಾಯದ ಹಿತೈಷಿಗಳು ಭಾಗವಹಿಸಿದ್ದರು. ವಿಚಾರ ಮಂಡನೆಯ ನಂತರ ಸಂವಾದ ಕಾರ್ಯಕ್ರಮ ನಡೆಯಿತು. ಗಣೇಶ ಶೆಟ್ಟಿ ವಂದಿಸಿದರು.