ಬಿಲ್ಲವ ಧಾರ್ಮಿಕ ಸಮಾವೇಶ -ಬಿಲ್ಲವ ದತ್ತಾಂಶಗಳ ಗಣತಿಗೆ ಚಾಲನೆ
ಕುಂದಾಪುರ, ಫೆ.23: ಬಿಲ್ಲವ ಸಮಾಜ ಸೇವಾ ಸಂಘ ವತಿಯಿಂದ ಶ್ರೀ ನಾರಾಯಣಗುರು ಕಲ್ಯಾಣ ಮಂಟಪದಲ್ಲಿ ರವಿವಾರ ಹಮ್ಮಿಕೊಳ್ಳಲಾದ ಬಿಲ್ಲವ ಧಾರ್ಮಿಕ ಸಮಾವೇಶ ಮತ್ತು ಬಿಲ್ಲವ ದತ್ತಾಂಶಗಳ ಗಣತಿಗೆ ಚಾಲನೆ ಕಾರ್ಯಕ್ರಮ ವನ್ನು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಜಕೀಯ ಮಾಡಬೇಕು. ಸಮಾಜದ ಬೇಡಿಕೆಗೆ ರಾಜಕೀಯ ಮರೆತು ಧ್ವನಿಯಾಗಬೇಕು. ನಾಯಕನಿಗೆ ತಾಳ್ಮೆ ಬೇಕು. ಮಾತುಗಳಿಗೆ, ಕಾಲೆಳೆ ಯುವವರಿಗೆ ತಲೆ ಕೆಡಿಸಿ ಕೊಳ್ಳಬಾರದು ಎಂದು ಹೇಳಿದರು.
ಈಗಲೂ ಕೆಲವು ಸಮುದಾಯಗಳಲ್ಲಿ ಅಸ್ತಿತ್ವದಲ್ಲಿ ಇರುವ, ಈ ಹಿಂದೆ ಬಿಲ್ಲವರಲ್ಲಿ ಅನುಷ್ಠಾನದಲ್ಲಿದ್ದ ಗುರಿಕಾರರ ಪದ್ಧತಿ ಪುನಶ್ಚೇತನಗೊಳ್ಳಲಿ. ಗರಡಿ, ದೈವಸ್ಥಾನಗಳ ಮೇಲೆ ನಂಬಿಕೆ ಇಟ್ಟು ಕೆಲಸ ಮಾಡುವ ಪಾತ್ರಿಗಳು, ಅರ್ಚಕರಿಗೆ ಸರಕಾರ ದಿಂದ ವೇತನ ದೊರಕಿಸಲು ಪ್ರಯತ್ನಿಸಲಾಗುವುದು ಬಿಲ್ಲವ ದತ್ತಾಂಶದಿಂದ ಉದ್ಯೋಗ ನೇಮಕಾತಿ ಸೇರಿದಂತೆ ಸಮಾಜಕ್ಕೆ ಅನೇಕ ಲಾಭಗಳಿವೆ ಎಂದರು.
ಬಿಲ್ಲವ ದತ್ತಾಂಶಗಳ ಗಣತಿಗೆ ಚಾಲನೆ ನೀಡಿದ ಮಾಜಿ ಸಂಸದ ವಿನಯ ಕುಮಾರ್ ಸೊರಕೆ ಮಾತನಾಡಿ, ದತ್ತಾಂಶ ಸಂಗ್ರಹದಿಂದ ಸಮಾಜ ಇನ್ನಷ್ಟು ಸದೃಢವಾಗುತ್ತದೆ. ಬೇಡಿಕೆಗೆ ಗಟ್ಟಿ ಧ್ವನಿ ಸಿಗುತ್ತದೆ ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ಬಿಲ್ಲವ ಸಮಾಜ ಸೇವಾ ಸಂಘ ಅಧ್ಯಕ್ಷ ಅಶೋಕ ಪೂಜಾರಿ ಬೀಜಾಡಿ ವಹಿಸಿದ್ದರು. ಧಾರ್ಮಿಕ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಬಿಲ್ಲವರು ಅಂದು ಮತ್ತು ಇಂದು ಉಪನ್ಯಾಸ ನೀಡಿದರು.
ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರ ಕ್ಷೇತ್ರಾಧ್ಯಕ್ಷ ಬಿ.ಎನ್.ಶಂಕರ ಪೂಜಾರಿ, ಉದ್ಯಮಿ ವಿಜಯ್ ಪಿ. ಪೂಜಾರಿ, ಬ್ರಹ್ಮ ಬದರ್ಕಳ ಬಿಲ್ಲವ ಸಮಾಜ ಸೇವಾ ಸಂಘ ಸಾಸ್ತಾನ ಅಧ್ಯಕ್ಷ ಎಂ.ಸಿ.ಚಂದ್ರ ಪೂಜಾರಿ, ಬೆಂಗಳೂರು ಉದ್ಯಮಿ ನಾಗರಾಜ ಪೂಜಾರಿ ಬಿಜೂರು, ನಿತೀಶ್ ಚಾರಿಟೆಬಲ್ ಟ್ರಸ್ಟ್ ಬೆಳ್ವೆ ಅಧ್ಯಕ್ಷ ಚನ್ನ ಪೂಜಾರಿ, ಕುಂದಾಪುರ ರೂರಲ್ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಡಾ.ಸುಪ್ರಿಯ ಎಸ್., ಬಿಲ್ಲವ ಸಮಾಜ ಸೇವಾ ಸಂಘ ಕುಂದಾಪುರ ಉಪಾಧ್ಯಕ್ಷ ರಾಮ ಪೂಜಾರಿ ಮುಲ್ಲಿಮನೆ, ಶಿವರಾಮ ಪೂಜಾರಿ ಬಸ್ರೂರು, ನಾರಾಯಣಗುರು ಯುವಕ ಮಂಡಲ ಅಧ್ಯಕ್ಷ ಸಂದೇಶ್ ಪೂಜಾರಿ ಬೀಜಾಡಿ, ಬಿಲ್ಲವ ಮಹಿಳಾ ಘಟಕ ಅಧ್ಯಕ್ಷೆ ಗಿರಿಜಾ ಮಾಣಿ ಗೋಪಾಲ ಉಪಸ್ಥಿತರಿದ್ದರು.
ಬಿಲ್ಲವ ಸಮಾಜ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಯೋಗೇಶ್ ಪೂಜಾರಿ ಕೋಡಿ ಸ್ವಾಗತಿಸಿದರು. ಮೋಹನ ಪೂಜಾರಿ ಮನವಿ ವಾಚಿಸಿದರು. ಸತೀಶ್ ವಡ್ಡರ್ಸೆ ಹಾಗೂ ನರೇಂದ್ರ ಕೋಟ ನಿರ್ವಹಿಸಿದರು.
‘ಗರಡಿ ಅರ್ಚಕರು, ಪಾತ್ರಿಗಳು ಈ ನೆಲದ ಇತಿಹಾಸವನ್ನು ಇಂದಿಗೂ ಸಾರುತ್ತಿದ್ದಾರೆ. ಗರಡಿಗಳನ್ನು ಸರಕಾರ ಮುಜರಾಯಿ ವ್ಯಾಪ್ತಿಗೆ ತರಬೇಕು. 2 ಜಿಲ್ಲೆಗಳಲ್ಲಿ ಗರಡಿಗಳ ಧಾರ್ಮಿಕ ಕೆಲಸ ನಿರ್ವಹಿಸುವವರಿಗೆ ದೇವಾಲಯಗಳ ಅರ್ಚಕರಂತೆ ಸರಕಾರ ಮಾಸಿಕ ಗೌರವಧನ ನೀಡಬೇಕು’
-ಅಶೋಕ ಪೂಜಾರಿ ಬೀಜಾಡಿ