ಭೂತಾರಾಧನೆಯಲ್ಲಿನ ಕಲೆ ರಂಗಕ್ಕೆ ತರುವುದು ಅಗತ್ಯ: ಅರವಿಂದ ಮಾಲಗತ್ತಿ
ಉಡುಪಿ, ಫೆ.23: ಭೂತಾರಾಧನೆಯ ಒಳಗೆ ಕಲೆ ಇದೆ. ಅದನ್ನು ಹೆಕ್ಕಿ ತೆಗೆದು ರಂಗಕ್ಕೆ ತರುವ ಕೆಲಸ ಆಗಬೇಕು ಎಂದು ಸಾಹಿತಿ ಅರವಿಂದ ಮಾಲಗತ್ತಿ ತಿಳಿಸಿದರು.
ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ ವತಿಯಿಂದ ಅಜ್ಜರಕಾಡು ಭುಜಂಗ ಪಾರ್ಕ್‌ನಲ್ಲಿ ಹಮ್ಮಿಕೊಳ್ಳಲಾದ 13ನೇ ವರ್ಷದ ರಂಗಹಬ್ಬವನ್ನು ರವಿವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಅಮೃತ ಸೋಮೇಶ್ವರ ಭೂತಾರಾಧನೆಯ ಪಾಡ್ದನಗಳನ್ನು ಇಟ್ಟುಕೊಂಡು ರಂಗಪ್ರಯೋಗ ನಡೆಸಿದ್ದರು. ಅಂಥ ಪ್ರಯೋಗ ಗಳನ್ನು ಆಧುನಿಕ ರಂಗಭೂಮಿ ಯಲ್ಲಿ ಹೆಚ್ಚಿಗೆ ಆಗಿಲ್ಲ. ಇದು ಜೇನುಗೂಡಿಗೆ ಕೈ ಹಾಕುವ ಕೆಲಸ. ಏನೋ ಮಾಡಲು ಹೋಗಿ ಏನೋ ಆಗುವ ಕಾರ್ಯ. ಸಂಪ್ರದಾಯಸ್ಥರು ಕೂಡ ಇದಕ್ಕೆ ಪ್ರೋತ್ಸಾಹ ನೀಡಬೇಕು. ಆಗ ಭೂತಾರಾಧನೆ ನಮ್ಮ ನಾಡಿನ, ನಮ್ಮ ದೇಶದ ಗಡಿ ದಾಟಿ ಬೆಳೆಯಲು ಸಾಧ್ಯ ಎಂದರು.
ಎಲ್ಲಿ ಮನುಷ್ಯತ್ವ ಇದೆಯೋ ಅಲ್ಲಿ ಕಲಾವಿದರು ಇರುತ್ತಾರೆ. ಎಲ್ಲಿ ಸೇವೆ, ತ್ಯಾಗದ ಭಾವ ಇರುವಲ್ಲಿ ಕಲಾವಿದರು ಇರು ತ್ತಾರೆ. ಭಾರತೀಯ ಆಧುನಿಕ ರಂಗಭೂಮಿ ಎಂದರೆ ಉತ್ತರ ಭಾರತದ ಕಡೆಗೆ ನೋಡಲಾಗುತ್ತಿತ್ತು. ಬಿ.ವಿ. ಕಾರಂತ, ಗಿರೀಶ್ ಕಾರ್ನಾಡ್ ಮುಂತಾದವರ ಪ್ರಯೋಗ, ಕುವೆಂಪು, ತೇಜಸ್ವಿ ಮುಂತಾದವರ ಬರಹಗಳು ರಂಗಭೂಮಿಗೆ ಬಂದಿರು ವುದರಿಂದ ಅನೇಕ ಪ್ರಯೋಗಗಳಾಗುತ್ತಿರುವುದರಿಂದ ಈಗ ಕರ್ನಾಟಕದ ಕಡೆಗೆ ತಿರುಗಿ ನೋಡು ವಂತಾಗಿದೆ. ಮೈಸೂರು ಮತ್ತು ಅವಿಭಜಿತ ದಕ್ಷಿಣ ಕನ್ನಡವು ಆಧುನಿಕ ರಂಗಭೂಮಿಯ ರಾಜಧಾನಿಯಾಗಿದೆ ಎಂದು ಅವರು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ, ’ಪ್ರತಿವಾರ ಕಾರ್ಯಕ್ರಮಗಳಾಗಬೇಕು ಎಂಬ ಕನಸು ಹೊತ್ತು ವಿ.ಎಸ್.ಆಚಾರ್ಯ ಅಜ್ಜರಕಾಡು ಭುಜಂಗಪಾರ್ಕ್ ಬಯಲು ರಂಗಮಂದಿರ ಕಟ್ಟಿದ್ದರು. ಆದರೆ, ಸುಮನಸಾ ಮಾತ್ರ ವರ್ಷಕ್ಕೊಮ್ಮೆ ಬಳಸಿಕೊಳ್ಳುತ್ತಿದ್ದಾರೆ. ಉಳಿದವರು ಬಳಸಿಕೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕಲಾವಿದ ಗೀತಂ ಗಿರೀಶ್ ಅವರಿಗೆ ರಂಗಸನ್ಮಾನ ನೀಡಿ ಗೌರವಿಸಲಾಯಿತು. ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಉದ್ಯಮಿ ದಿವಾಕರ ಸಾಲ್ಯಾನ್, ಕೊಡಂಕೂರು ಸಾಯಿ ಬಾಬಾ ಮಂದಿರದ ಧರ್ಮದರ್ಶಿ ತೋಟದಮನೆ ದಿವಾಕರ ಶೆಟ್ಟಿ, ಸುಮನಸಾ ಕೊಡವೂರು ಸಂಚಾಲಕ ಭಾಸ್ಕರ ಪಾಲನ್ ಉಪಸ್ಥಿತರಿದ್ದರು.
ಸಂಸ್ಥೆಯ ಅಧ್ಯಕ್ಷ ಪ್ರಕಾಶ್ ಜಿ.ಕೊಡವೂರು ಸ್ವಾಗತಿಸಿದರು. ನಾಗೇಶ್ ಪ್ರಸಾದ್ ವಂದಿಸಿದರು. ಅಕ್ಷತ್ ಅಮೀನ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಪಯಣ ಬೆಂಗಳೂರು ಇವರಿಂದ ’ತಲ್ಕಿ ನಾಟಕ ಪ್ರದರ್ಶನಗೊಂಡಿತು.
‘ಸರಕಾರದ ಅನುದಾನದಲ್ಲಿ ನಡೆಯುವ ರಂಗಭೂಮಿಗೆ ಹವ್ಯಾಸಿ ರಂಗ ಸಂಸ್ಥೆಗಳು ಆರೋಗ್ಯಕರ ಸ್ಪರ್ಧೆಯನ್ನು ನಿರಂತರ ಒಡ್ಡುತ್ತಾ ಇರಬೇಕು. ಆಗ ಹವ್ಯಾಸಿ ರಂಗಭೂಮಿ ಅಷ್ಟೇ ಅಲ್ಲ, ಸರಕಾರಿ ರಂಗಸಂಸ್ಥೆಗಳೂ ಬೆಳೆಯಲು ಸಾಧ್ಯವಾಗುತ್ತದೆ’
-ಅರವಿಂದ ಮಾಲಗತ್ತಿ, ಸಾಹಿತಿ