ಗ್ರಂಥಾಲಯಗಳನ್ನು ಹಳ್ಳಿ ಹಳ್ಳಿಗಳಲ್ಲಿ ಬೆಳೆಸುವ ಚಳುವಳಿ ಅಗತ್ಯ: ಕಲ್ಲಾಗರ್
ಕುಂದಾಪುರ, ಫೆ.23: ವಿದ್ಯಾಮಾನಗಳನ್ನು ವಾಸ್ತವವನ್ನು ಗ್ರಹಿಸುವ, ಸ್ವಂತ ಬುದ್ಧಿಯಿಂದ ವಿಶ್ಲೇಷಿಸುವ ಮತ್ತು ಅಗತ್ಯ ಪ್ರವೇಶ ಮಾಡುವ ಸಾಮರ್ಥ್ಯವು ಓದಿನ ಮೂಲಕ ಬರಲು ಸಾಧ್ಯ. ಓದುವ ಹಿಗ್ಗನ್ನು ಮತ್ತು ಎಲ್ಲರಿಗೂ ಕೈಗೆಟಕುವ ಗ್ರಂಥಾಲಯಗಳನ್ನು ಹಳ್ಳಿ ಹಳ್ಳಿಗಳಲ್ಲಿ ಬೆಳೆಸುವ ಚಳುವಳಿ ಕೇರಳದಂತೆ ಕರ್ನಾಟಕದಲ್ಲಿಯೂ ನಡೆಸಬೇಕು ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಹೇಳಿದ್ದಾರೆ.
ಮಾತೃಭಾಷಾ ಮತ್ತು ಕೆಂಪು ಪುಸ್ತಕ ದಿನದ ಪ್ರಯುಕ್ತ ಕುಂದಾಪುರ ಕಟ್ಟಡ ಕಾರ್ಮಿಕರ ಸಂಘದ ಕಚೇರಿ ಬೆವರು ಕಟ್ಟಡ ದಲ್ಲಿ ರವಿವಾರ ನಡೆದ ಓದುವ ಹಿಗ್ಗು ಉತ್ಸವ ತಿಂಗಳು ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.
ಉನ್ನತ ವಿದ್ಯಾಭ್ಯಾಸ ಪಡೆದವ ಮಾತ್ರ ಪುಸ್ತಕ ಓದಬೇಕು ಎಂಬ ತಪ್ಪು ತಿಳುವಳಿಕೆ ದೂರ ಮಾಡಬೇಕಾದದ್ದು ಇಂದಿನ ಅಗತ್ಯವಾಗಿದೆ. ಕಾರ್ಮಿಕರು, ರೈತರು ಕೂಲಿಕಾರರು ಕೂಡ ಓದುವ ಖುಷಿಯನ್ನು ಪಡೆದು ದಿನನಿತ್ಯ ಬದುಕಿನಲ್ಲಿ ನಮ್ಮನ್ನು ರಕ್ಷಿಸಿಕೊಳ್ಳಲು ಆಯುಧಗಳನ್ನು ಒದಗಿಸುತ್ತದೆ ಎಂದರು.
ಹಸಿ ಸುಳ್ಳುಗಳನ್ನು ವಾಟ್ಸಾಪ್ ವಿವಿ ಮೂಲಕ ಹರಡುವ ಇಂದಿನ ದಿನಗಳಲ್ಲಿ ಸಮಾಜದ ಆಗುಹೋಗುಗಳಲ್ಲಿ ಸರಿಯಾದ ಮಾಹಿತಿಯೊಂದಿಗೆ ವಿವೇಕ ಯುತವಾದ ಭಾಗವಹಿಸುವಿಕೆ ಅಗತ್ಯ. ತಮ್ಮ ಹಿತಾಸಕ್ತಿಗಳಿಗೆ ಮಾರಕವಾಗುವ ಅತಾರ್ಕಿಕ ಧೋರಣೆಗಳಿಗೆ ಮಾರು ಹೋಗುವ ಪ್ರವ್ರತ್ತಿಗಳು ಇಂದು ವ್ಯಾಪಕವಾಗಿವೆ ಎಂದರು.
ಕಟ್ಟಡ ಕಾರ್ಮಿಕರ ಸಂಘದ ಗೌರವಾಧ್ಯಕ್ಷ ಚಿಕ್ಕ ಮೊಗವೀರ, ಕುಂದಾಪುರ ತಾಲೂಕು ಆಟೋ ರಿಕ್ಷಾ ಮತ್ತು ವಾಹನ ಚಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ರಾಜು ದೇವಾಡಿಗ, ಕೃಷ್ಣ ಪೂಜಾರಿ, ಶ್ರೀನಿವಾಸ ಪೂಜಾರಿ ಉಪಸ್ಥಿತರಿದ್ದರು.
ಕಟ್ಟಡ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ್ ಹೆಮ್ಮಾಡಿ ಸ್ವಾಗತಿಸಿದರು. ಡಿವೈಎಫ್‌ಐ ಯುವಜನ ಮುಖಂಡರಾದ ಗಣೇಶ್ ಹಾಗೂ ರಾಘವೇಂದ್ರ ನಿರಂಜನರ ಚಿರಸ್ಮರಣೆ ಕಾದಂಬರಿಗಳ ಓದುವಿಕೆಗೆ ಚಾಲನೆ ನೀಡಿದರು.