ಅರ್ಹ ಕೊರಗರಿಗೆ ’ಗೃಹಲಕ್ಷ್ಮಿ’ ಯೋಜನೆಗಾಗಿ ಅದಾಲತ್: ಹರಿಪ್ರಸಾದ್ ಶೆಟ್ಟಿ
ಕುಂದಾಪುರ, ಫೆ.28: ತಾಲೂಕಿನ ಹಲವು ಕೊರಗ ಫಲಾನುಭವಿಗಳು ಗೃಹಲಕ್ಷ್ಮೀ ಯೋಜನೆಯಿಂದ ವಂಚಿತರಾಗಿದ್ದು, ಈ ಬಗ್ಗೆ ಕೂಡಲೇ ಅದಾಲತ್ ನಡೆಸಿ ಸಮಸ್ಯೆ ಬಗೆಹರಿಸಬೇಕು ಎಂದು ಗ್ಯಾರೆಂಟಿ ಯೋಜನೆಗಳ ಕುಂದಾಪುರ ತಾಲೂಕು ಮಟ್ಟದ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಹರಿಪ್ರಸಾದ್ ಶೆಟ್ಟಿ ಇಲಾಖಾಧಿಕಾರಿಗಳಿಗೆ ಸೂಚನೆ ನೀಡಿದರು.
ಗ್ಯಾರೆಂಟಿ ಯೋಜನೆಗಳ ಕುಂದಾಪುರ ತಾಲೂಕು ಮಟ್ಟದ ಅನುಷ್ಠಾನ ಸಮಿತಿಯಿಂದ ಕುಂದಾಪುರ ತಾಪಂ ಸಭಾಂಗಣ ದಲ್ಲಿ ಶುಕ್ರವಾರ ನಡೆದ ಅನುಷ್ಠಾನ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡುತಿದ್ದರು.
ಕುಂದಾಪುರ ತಾಲೂಕಿನಲ್ಲಿ 723 ಪರಿಶಿಷ್ಟ ಪಂಗಡಗಳಿದ್ದು 622 ಕುಟುಂಬಗಳು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿವೆ. 101 ಕೊರಗ ಕುಟುಂಬಗಳು ಅರ್ಜಿ ಸಲ್ಲಿಸದಿರಲು ಕಾರಣಗಳೇನು ಎಂದು ಸಭೆಯಲ್ಲಿ ಪ್ರಶ್ನಿಸ ಲಾಯಿತು. ಇದಕ್ಕೆ ಉತ್ತರಿ ಸಿದ ಅನುಷ್ಠಾನಾಧಿಕಾರಿಯಾಗಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಡಿಪಿಒ, ಒಂದಷ್ಟು ಹೊಸ ರೇಶನ್ ಕಾರ್ಡ್ ಸಮಸ್ಯೆ ಹಾಗೂ ತಾಂತ್ರಿಕ ಕಾರಣಗಳಿಗಾಗಿ ಈ ಸಮಸ್ಯೆಯಾಗುತ್ತಿದೆ ಎಂದರು.
ಎಲ್ಲಾ ಸಮಸ್ಯೆಗಳನ್ನು ಪಟ್ಟಿ ಮಾಡಿ ನೈಜ್ಯ ಫಲಾನುಭವಿಗಳಿಗೆ ಯೋಜನೆ ಸಿಗಲು ’ಅದಾಲತ್’ ನಡೆಸಿ ಮುಂದಿನ ಸಭೆ ಯೊಳಗೆ ಸಮಸ್ಯೆಗೆ ತಾರ್ಕಿಕ ಅಂತ್ಯ ಕಂಡುಕೊಳ್ಳಬೇಕು ಎಂದು ಹರಿಪ್ರಸಾದ್ ಶೆಟ್ಟಿ ಸೂಚಿಸಿದರು.
ಕೊಲ್ಲೂರು-ಮೈಸೂರು ಸರಕಾರಿ ಬಸ್ ಮತ್ತೆ ಓಡಿಸಲು ಸೂಕ್ತ ಕ್ರಮ ವಹಿಸಬೇಕು. ಗೃಹಲಕ್ಷ್ಮೀ ಹಣವನ್ನು ತಾಪಂ ಮಟ್ಟದಲ್ಲಿ ಪ್ರಾಯೋಗಿಕವಾಗಿ ಬಿಡುಗಡೆಗೊಳಿಸಲು ಈಗಾಗಾಲೇ ಸರಕಾರದ ಮಟ್ಟದಲ್ಲಿ ಆ್ಯಪ್ ಸಾಫ್ಟ್‌ವೇರ್ ಸಿದ್ದಪಡಿಸ ಲಾಗುತ್ತಿದ್ದು ಅತೀ ಶೀಘ್ರದಲ್ಲಿ 3 ತಿಂಗಳ ಗೃಹಲಕ್ಷ್ಮಿ ಹಣ ಅರ್ಹ ಫಲಾನುಭವಿಗಳ ಖಾತೆಗೆ ಬೀಳಲಿದೆ ಎಂದರು.
ಸಭೆಯಲ್ಲಿ ಗ್ಯಾರೆಂಟಿ ಅನುಷ್ಠಾನ ಸಮಿತಿ ಸದಸ್ಯರಾದ ವಸುಂಧರ ಹೆಗ್ಡೆ ಹೆಂಗವಳ್ಳಿ, ವಾಣಿ ಆರ್.ಶೆಟ್ಟಿ ಮೊಳಹಳ್ಳಿ, ನಾರಾಯಣ ಆಚಾರ್ ಕೋಣಿ, ಅಭಿಜಿತ್ ಪೂಜಾರಿ ಹೇರಿಕುದ್ರು, ಚಂದ್ರ ಕಾಂಚನ್ ಜನ್ನಾಡಿ, ಮಂಜು ಕೊಠಾರಿ ಕೆರಾಡಿ, ಗಣೇಶ್ ಕುಂದಾಪುರ, ಆಶಾ ಕರ್ವೆಲ್ಲೋ, ಸವಿತಾ ಪೂಜಾರಿ ಚಿತ್ತೂರು, ಜಹೀರ್ ಅಹಮದ್ ಗಂಗೊಳ್ಳಿ, ಅರುಣ್ ಹಕ್ಲಾಡಿ ಹಾಗೂ ವಿವಿಧ ಇಲಾಖಾಧಿಕಾರಿಗಳು ಹಾಜರಿದ್ದರು.
ಕುಂದಾಪುರ ತಾಪಂ ಕಾರ್ಯನಿರ್ವಹಣಾಧಿಕಾರಿ ಡಾ.ರವಿಕುಮಾರ್ ಹುಕ್ಕೇರಿ ಸ್ವಾಗತಿಸಿ, ವಂದಿಸಿದರು.
‘ಪಂಚಭಾಗ್ಯಗಳಿಂದ 317 ಕೋಟಿ ರೂ. ಬಿಡುಗಡೆ’
ಜನವರಿ ತಿಂಗಳಿನಲ್ಲಿ ಗೃಹಜ್ಯೋತಿಗೆ 4 ಕೋಟಿ 14 ಲಕ್ಷದ 92 ಸಾವಿರದ 235ರೂ., ಅನ್ನಭಾಗ್ಯಕ್ಕೆ 3 ಕೋಟಿ 40 ಲಕ್ಷದ 18 ಸಾವಿರದ 460 ರೂ., ಯುವನಿಧಿಗೆ 10 ಲಕ್ಷದ 80 ಸಾವಿರ ರೂ. ಹಾಗೂ ಶಕ್ತಿ ಯೋಜನೆಗೆ 2 ಕೋಟಿ 48 ಸಾವಿರದ 29 ಸಾವಿರದ 100 ರೂ. ವ್ಯಯವಾಗಿದ್ದು ಒಟ್ಟು ಕುಂದಾಪುರ ತಾಲೂಕಿನಲ್ಲಿ ಜನವರಿಯಲ್ಲಿ 10 ಕೋಟಿ 14 ಲಕ್ಷದ 22 ಸಾವಿರದ 792 ರೂ. ಸರಕಾರದಿಂದ ಬಿಡುಗಡೆಯಾಗಿದೆ. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಪಂಚಭಾಗ್ಯಗಳು ಅನುಷ್ಠಾನಗೊಂಡ ಬಳಿಕ 317 ಕೋಟಿ ಹಣ ತಾಲೂಕಿಗೆ ಬಿಡುಗಡೆಯಾಗಿದೆ ಎಂದು ಹರಿಪ್ರಸಾದ್ ಶೆಟ್ಟಿ ಮಾಹಿತಿ ನೀಡಿದರು.