ಎ.ಪದ್ಮನಾಭ ಕೊಡಂಚಗೆ ಸೇವಾ ಭೂಷಣ ಪ್ರಶಸ್ತಿ ಪ್ರದಾನ
ಉಡುಪಿ, ಫೆ.28: ಯಕ್ಷಗಾನ ಕಲಾರಂಗದ ವತಿಯಿಂದ ಎಸ್.ಗೋಪಾಲ ಕೃಷ್ಣ ಅವರ ನೆನಪಿನಲ್ಲಿ ನೀಡುವ ಸೇವಾ ಭೂಷಣ ಪ್ರಶಸ್ತಿಯನ್ನು ಬಳಕೆದಾರರ ವೇದಿಕೆಯ ಸಂಚಾಲಕ ಎ.ಪದ್ಮನಾಭ ಕೊಡಂಚ ಅವರಿಗೆ ಶುಕ್ರವಾರ ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಪ್ರದಾನ ಮಾಡಲಾಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿ ಪ್ರಶಸ್ತಿ ಪ್ರದಾನ ಮಾಡಿದ ಮೂಡಬಿದ್ರೆಯ ಆಳ್ವಾಸ್ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಎಂ.ಮೋಹನ್ ಆಳ್ವ ಮಾತನಾಡಿ, ಜೀವನದಲ್ಲಿ ಮಾನವೀಯತೆ, ಮೌಲ್ಯ ಎಂಬುದು ಮುಖ್ಯ. ವಿದ್ಯಾರ್ಥಿ ಗಳು ಜೀವನದಲ್ಲಿ ಬರುವ ಕಷ್ಟಗಳನ್ನು ಎದುರಿಸುವ ಮನಸ್ಥಿತಿ ಬೆಳೆಸಿ ಕೊಳ್ಳಬೇಕು. ನಿರಾಶವಾದಿಗಳಾಗದೇ ಆಶಾವಾದಿಗಳಾಗಬೇಕು. ಹಣದ ಹಿಂದೆ ಹೋಗದೆ ಸಂಪನ್ಮೂಲ ವ್ಯಕ್ತಿಗಳಾದರೆ ಸಮಾಜವೇ ಗೌರವಿಸುತ್ತದೆ ಎಂದರು.
ಪ್ರಶಸ್ತಿ ಸ್ವೀಕರಿಸಿದ ಕೊಡಂಚ ಮಾತನಾಡಿ, ನಾವೆಲ್ಲಾ ನಮ್ಮ ಕರ್ಮವನ್ನಷ್ಟೇ ಮಾಡುವುದಕ್ಕೆ ಹುಟ್ಟಿಬಂದವರು. ಸಮಾಜದಿಂದ ಸಾಕಷ್ಟು ಪಡೆದಿದ್ದೇವೆ. ಸಾಧ್ಯವಾಗುವವರೆಗೆ ಕರ್ಮವನ್ನು ಮಾಡುತ್ತ ಹೋಗಬೇಕು. ಫಲವನ್ನು ಅಪೇಕ್ಷಿಸಬಾರದು ಎಂದು ಹೇಳಿದರು.
ಖಬಳಕೆದಾರರ ವೇದಿಕೆಯ ವಿಶ್ವಸ್ಥ ಎನ್.ರಾಮ ಭಟ್ಟರು ಕೊಡಂಚರನ್ನು ಪರಿಚಯಿಸಿ, ಅಭಿನಂದಿಸಿದರು. ಚಂದ್ರಾವತಿ ಪಿ.ಕೊಡಂಚ ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಎಚ್.ಎನ್. ಶೃಂಗೇಶ್ವರ ಸಹಕರಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು.