×
Ad

ಬಜೆಟ್‌ನಲ್ಲಿ ಬ್ರಹ್ಮಾವರ ಕೃಷಿ ಕಾಲೇಜಿಗೆ ಅನುದಾನ ಕಲ್ಪಿಸಲು ಕೃಷಿಕ ಸಮಾಜ ಒತ್ತಾಯ

Update: 2025-02-28 22:05 IST

ಉಡುಪಿ, ಫೆ.28: ಬ್ರಹ್ಮಾವರದಲ್ಲಿ ಈಗ ಇರುವ ಕೃಷಿ ಡಿಪ್ಲೋಮಾ ಕಾಲೇಜನ್ನು ಕೃಷಿ ಪದವಿ ಕಾಲೇಜಾಗಿ ಉನ್ನತೀಕರಿ ಸಲು ಹಾಗೂ ಅದಕ್ಕಾಗಿ ಈ ಬಾರಿಯ ಬಜೆಟ್‌ನಲ್ಲಿ ಅನುದಾನ ಮೀಸರಿರಿಸುವಂತೆ ಉಡುಪಿ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಅಶೋಕಕುಮಾರ್ ಕೊಡ್ಗಿ ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.

ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ರಹ್ಮಾವರ ದಲ್ಲಿ ಕೃಷಿ ಕಾಲೇಜನ್ನು ಸ್ಥಾಪಿಸುವುದು ಕರಾವಳಿ ಭಾಗದ ಉಭಯ ಜಿಲ್ಲೆಗಳ ರೈತರ ಬಹುದಿನಗಳ ಬೇಡಿಕೆಯಾಗಿದೆ. ಪ್ರಸ್ತುತ ಬ್ರಹ್ಮಾವರದಲ್ಲಿ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ, ಕೃಷಿ ವಿಜ್ಞಾನ ಕೇಂದ್ರ ಹಾಗೂ ಡಿಪ್ಲೋಮಾ ಕಾಲೇಜುಗಳು ಕಾರ್ಯ ನಿರ್ವಹಿಸುತ್ತಿವೆ ಎಂದರು.

ಇವುಗಳು ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಇ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಈ ಭಾಗದ ರೈತರ ಸಮಸ್ಯೆಗಳಿಗೆ ಸಕಾರಾತ್ಮವಾಗಿ ಸ್ಪಂಧಿಸಿ ರೈತರ ಆಶಾಕಿರಣ ವಾಗಿವೆ. ಸಂಶೋಧನಾ ಕೇಂದ್ರದ ವ್ಯಾಪ್ತಿಯಲ್ಲಿ 350 ಎಕರೆಯಷ್ಟು ಜಮೀನಿದ್ದು ಕೃಷಿ ಸಂಶೋಧನೆ ಹಾಗೂ ವಿಸ್ತರಣಾ ಚಟುವಟಿಕೆಗಳಿಗೆ ಬಳಕೆಯಾಗುತ್ತಿವೆ ಎಂದರು.

ಆದರೆ ಕರಾವಳಿಯ ಮೂರು ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಗೆ ಯಾವುದೇ ಕೃಷಿ ಮತ್ತು ತೋಟಗಾರಿಕಾ ಕಾಲೇಜು ಇಲ್ಲದಿರುವುದರಿಂದ ಈ ಭಾಗದ ಕೃಷಿಯಾಸಕ್ತ ವಿದ್ಯಾರ್ಥಿಗಳು ಹಾಗೂ ರೈತರ ಮಕ್ಕಳಿಗೆ ಕೃಷಿ ವಿಜ್ಞಾನದಲ್ಲಿ ಪದವಿ ವ್ಯಾಸಂಗ ಮಾಡಲು ಅವಕಾಶವಿಲ್ಲವಾಗಿದೆ ಎಂದವರು ನುಡಿದರು.

ಆದ್ದರಿಂದ ಪ್ರಸ್ತುತ ಬ್ರಹ್ಮಾವರದಲ್ಲಿರುವ ಡಿಪ್ಲೋಮಾ ಕಾಲೇಜನ್ನು ಉನ್ನತೀಕರಿಸಿ ಕೃಷಿ ಮಹಾವಿದ್ಯಾಲಯವಾಗಿ (ಪದವಿ ಕಾಲೇಜು) ಪರಿವರ್ತಿಸಬೇಕು. ಇದು ಈ ಭಾಗದ ರೈತರ ಬಹುಕಾಲದ ಬೇಡಿಕೆ. ಪ್ರಸ್ತುತ ಇರುವ ಡಿಪ್ಲೋಮಾ ಕಾಲೇಜಿ ನಲ್ಲಿ ಇದಕ್ಕೆ ಅಗತ್ಯವಿರುವ ಎಲ್ಲಾ ಮೂಲಭೂತ ಸೌಲಭ್ಯಗಳು ಲಭ್ಯವಿದೆ. ಸುಸಜಿತ ಕಾಲೇಜು ಕಟ್ಟಡ, ಪ್ರಯೋಗಶಾಲೆ, ವಿದ್ಯಾರ್ಥಿನಿಲಯ, ಪೀಠಪಕರಣಗಳೆಲ್ಲವೂ ಇದ್ದು ಕಾಲೇಜು ಪ್ರಾರಂಭಕ್ಕೆ ಬೇಕಾದ ಎಲ್ಲಾ ಅವಕಾಶಗಳು ಲಭ್ಯವಿದೆ ಎಂದು ಅಶೋಕ ಕುಮಾರ್ ಕೊಡ್ಗಿ ತಿಳಿಸಿದರು.

ಇದರೊಂದಿಗೆ ಕುಮ್ಕಿ ಹಕ್ಕು ಹಾಗೂ ಗೇರು ಲೀಸ್ ಮಂಜೂರಾತಿ ಪತ್ರವನ್ನು ರೈತರಿಗೆ ನೀಡುವಂತೆ, ಶೂನ್ಯ ಪ್ರತಿಶತ ಬಡ್ಡಿದರದಲ್ಲಿ ಸಾಲವನ್ನು ಈಗಿರುವ 3 ಲಕ್ಷದಿಂದ 5ಲಕ್ಷಕ್ಕೆ ಏರಿಸಿ ಆದೇಶ ಹೊರಡಿಸಿದ್ದರೂ, ಅದು ಅನುಷ್ಠಾನಗೊಂಡಿಲ್ಲ. ಕೂಡಲೇ ಆದೇಶದ ಜಾರಿಗೆ ಸೂಚನೆ ನೀಡುವಂತೆ ಕೊಡ್ಗಿ ಒತ್ತಾಯಿಸಿದರು.

ಅಲ್ಲದೇ ಕರಾವಳಿಯ ರೈತರು ಕಾಡುಪ್ರಾಣಿಗಳ ಹಾವಳಿಯಿಂದ ಹೈರಾಣ ಆಗಿದ್ದು, ಅವುಗಳಿಗೆ ರೈತ ಬೆಳೆದ ಬೆಳೆಗಳಿಗೆ ರಕ್ಷಣೆ ಒದಗಿಸಲು ಸೋಲಾರ್ ಬೇಲಿಯ ನಿರ್ಮಾಣಕ್ಕೆ ಶೇ.90ರಷ್ಟು ಸಹಾಯಧನ ಒದಗಿಸುವಂತೆಯೂ ಅವರು ಸರಕಾರಕ್ಕೆ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಬ್ರಹ್ಮಾವರ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ವೈಕುಂಠ ಹೇರ್ಳೆ ಹಾಗೂ ಕಾರ್ಯದರ್ಶಿ ಪ್ರದೀಪ್‌ಕುಮಾರ್ ಉಪಸ್ಥಿತ ರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News