ವೃದ್ಧರನ್ನು ಗೌರವಿಸದ ಸಮಾಜ ‘ನಾಗರಿಕ’ ಎನಿಸಿಕೊಳ್ಳದು: ಉಡುಪಿ ಡಿಸಿ ವಿದ್ಯಾಕುಮಾರಿ
ಉಡುಪಿ, ಮಾ.14: ವಿವಿಧ ಕಾರಣಗಳಿಂದ ಮನುಷ್ಯನ ಜೀವಿತಾವಧಿ ಹೆಚ್ಚಾಗಿದೆ. ಇದರಿಂದ ಸಮಾಜ ದಲ್ಲಿ ವೃದ್ಧರ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ. ಇದು ಹಲವು ರೀತಿಯ ಸಂಘರ್ಷಕ್ಕೆ ಕಾರಣವಾಗುತ್ತಿದೆ. ವೃದ್ಧರನ್ನು ಗೌರವಿಸದ ಸಮಾಜ ‘ನಾಗರಿಕ’ ಎಂದು ಕರೆಸಿಕೊಳ್ಳಲು ಸಾಧ್ಯವಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಹೇಳಿದ್ದಾರೆ.
ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಉಡುಪಿ ಶಾಖೆಯ ಸಹಯೋಗದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಿಶ್ವ ಆರೋಗ್ಯ ಸಂಸ್ಥೆಯ ವೃದ್ಧರ ಸಮಗ್ರ ಆರೈಕೆ ಕುರಿತು ಉಡುಪಿ ಜಿಲ್ಲೆಯ ಆಶಾ ಕಾರ್ಯಕರ್ತೆಯರ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ವಿವಿಧ ಕಾರಣಗಳಿಂದ ಇಂದು ಕುಟುಂಬದಲ್ಲಿ ವೃದ್ಧರು ಅವಗಣನೆಗೊಳ ಗಾಗುವ ಸಂದರ್ಭಗಳು ಹೆಚ್ಚುತ್ತಿದೆ. ಆದರೆ ಮಕ್ಕಳು, ವಿಕಲಚೇತನರಂತೆ ವೃದ್ಧರನ್ನೂ ನಾವು ಕಡೆಗಣಿಸದೇ ಆರೈಕೆ ಮಾಡಲೇ ಬೇಕಾಗಿದೆ. ಇಲ್ಲದಿದ್ದರೆ ನಮ್ಮದು ನಾಗರಿಕ ಸಮಾಜ ಎಂದು ಕರೆಸಿಕೊಳ್ಳಲು ಸಾಧ್ಯವಿಲ್ಲ ಎಂದರು.
ಆಶಾ ಕಾರ್ಯಕರ್ತೆಯರ ಕರ್ತವ್ಯನಿಷ್ಠೆಯನ್ನು ಪ್ರಶಂಸಿಸಿದ ಜಿಲ್ಲಾಧಿಕಾರಿ ಗಳು, ಕೇಂದ್ರ ಹಾಗೂ ರಾಜ್ಯ ಸರಕಾರಗಳ ಆರೋಗ್ಯಕ್ಕೆ ಸಂಬಂಧಿಸಿದ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಇವರು ಸಮರ್ಪ ಕವಾಗಿ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸುತಿದ್ದು, ಇದರಿಂದ ಜಿಲ್ಲೆ ರಾಜ್ಯದಲ್ಲೇ ಅಗ್ರಪಂಕ್ತಿಯಲ್ಲಿ ಇರಲು ಸಾಧ್ಯವಾಗಿದೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ ಅವರು ಮಾತನಾಡಿ, ಇಂದು ಸಮಾಜದಲ್ಲಿ ಹಿರಿಯ ನಾಗರಿಕರ ಸಂಖ್ಯೆ ಹೆಚ್ಚುತ್ತಿದೆ. ಇಂದು ಪುರುಷರು ಹಾಗೂ ಮಹಿಳೆಯರ ಪ್ರಮಾಣ ಶೇ.58ರಷ್ಟಿದ್ದರೆ, ಮಕ್ಕಳ ಪ್ರಮಾಣ ಶೇ.22ರಷ್ಟಿದೆ. ಉಳಿದಂತೆ ಒಟ್ಟು ಜನಸಂಖ್ಯೆಯಲ್ಲಿ ಹಿರಿಯ ನಾಗರಿಕರ ಪ್ರಮಾಣ ಈಗ ಶೇ.18ರಿಂದ 20ಕ್ಕೆ ಏರಿದೆ ಎಂದರು.
ಇದರಿಂದಾಗಿ ವೃದ್ಧರ ಹಾಗೂ ಹಿರಿಯ ನಾಗರಿಕರ ಆರೋಗ್ಯ ಉಪಶಮನ ಮತ್ತು ಆರೋಗ್ಯ ರಕ್ಷಣೆ ಆರೋಗ್ಯ ಇಲಾಖೆಯ ಜವಾಬ್ದಾರಿಯಾಗಿದೆ. ಇದಕ್ಕಾಗಿ ಆಶಾ ಕಾರ್ಯಕರ್ತೆಯರಿಗೆ ವೃದ್ಧರ ಆರೈಕೆ ಯಲ್ಲಿ ಒಂದು ದಿನದ ತರಬೇತಿಯನ್ನು ನೀಡಲಾಗುತ್ತಿದೆ. ಜಿಲ್ಲೆಯ 900ಕ್ಕೂ ಅಧಿಕ ಆಶಾ ಕಾರ್ಯಕರ್ತೆ ಯರು ಜನರ ಆಶಯವನ್ನು ಆದೇಶದಂತೆ ಪಾಲಿಸುತಿದ್ದಾರೆ. ಅವರ ಸೇವಾ ನಿಖರತೆ ಹಾಗೂ ಬದ್ಧತೆಗೆ ಸಾಟಿಯಿಲ್ಲ ಎಂದು ಡಾ.ಉಡುಪ ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಜಿಲ್ಲಾ ಪಂಚಾಯತ್ ಸಿಇಓ ಪ್ರತೀಕ್ ಬಾಯಲ್, ಆರೋಗ್ಯ ಇಲಾಖೆಯ ಮೈಸೂರು ವಿಭಾಗೀಯ ಡಿಡಿ ಡಾ.ಮಲ್ಲಿಕಾ, ಜಿಲ್ಲೆಯ ಆಶಾ ಕಾರ್ಯಕ್ರಮದ ನೋಡೆಲ್ ಅಧಿಕಾರಿ ಡಾ. ಜ್ಯೋತ್ಸ್ನಾ ಬಿ.ಕೆ. ಮಾತನಾಡಿದರು.
ರಾಜಸ್ಥಾನದ ಮೌಂಟು ಅಬುವಿನ ಗ್ಲೋಬಲ್ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ.ಮಹೇಶ್ ಹೇಮಾದ್ರಿ ಅವರು ವಿಶೇಷ ಆಹ್ವಾನಿತರಾಗಿ ಭಾಗವಹಿಸಿ ವೃದ್ಧರ ಆರೈಕೆಯ ಕುರಿತಂತೆ ಆಶಾ ಕಾರ್ಯ ಕರ್ತೆಯರಿಗೆ ತರಬೇತಿ ನೀಡಿದರು.
ವೇದಿಕೆಯಲ್ಲಿ ಜಿಲ್ಲಾ ಹಿರಿಯ ನಾಗರಿಕರ ಉಪಶಮನ ಆರೈಕೆಯ ನೋಡೆಲ್ ಅಧಿಕಾರಿ ಡಾ.ನಾಗರತ್ನ ಶಾಸ್ತ್ರಿ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ನೋಡಲ್ ಅಧಿಕಾರಿ ಡಾ.ಲತಾ ನಾಯಕ್ ಉಪಸ್ಥಿತರಿದ್ದರು. ಬ್ರಹ್ಮಕುಮಾರೀಸ್‌ನ ಉಡುಪಿ ಶಾಖೆಯ ಸಂಚಾಲಕರಾದ ಬಿ.ಕೆ.ಸುಮ ಅಧ್ಯಕ್ಷತೆ ವಹಿಸಿದ್ದರು.
ರಘುರಾಮ ಬಿ.ಕೆ.ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.