×
Ad

ಕೊಲ್ಲೂರು ದೇವಳದ ವರ್ಷಾವಧಿ ಜಾತ್ರೆಗೆ ಚಾಲನೆ

Update: 2025-03-15 22:24 IST

ಕುಂದಾಪುರ, ಮಾ.15: ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದಲ್ಲಿ ಕ್ರೋಧಿ ನಾಮ ಸಂವತ್ಸರದ ಪಾಲ್ಗುಣ ಶುದ್ಧ ಶನಿವಾರ ಬೆಳಿಗ್ಗೆ ಶುಭ ಮಹೂರ್ತದಲ್ಲಿ ಕಂಬದ ಗಣಪತಿ ದೇವರಿಗೆ ತಂತ್ರಿ ಹಾಗೂ ವ್ಯವಸ್ಥಾಪನಾ ಸಮಿತಿ ಸದಸ್ಯ ಕೆ.ನಿತ್ಯಾನಂದ ಅಡಿಗ ಪೂಜೆ ಸಲ್ಲಿಸುವ ಮೂಲಕ ವರ್ಷಾವಧಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದರು.

ಶ್ರೀಕ್ಷೇತ್ರದ ತಂತ್ರಿಗಳ ಮಾರ್ಗದರ್ಶನದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಗಣಪತಿ ಪ್ರಾರ್ಥನೆ, ನಾಂದಿ, ಪುಣ್ಯಾಹ ಅಂಕುರಾಧಿವಾಸ, ಸಿಂಹಯಾಗ, ವೃಷಭ ಲಗ್ನದಲ್ಲಿ ಧ್ವಜಾರೋಹಣಾ, ಯಾಗ ಶಾಲಾ ಪ್ರವೇಶ, ರಜ್ಜು ಬಂಧನ, ಮಹೂರ್ತಬಲಿ, ಭೇರಿತಾಡನ, ಕೌತುಕ ಬಂಧನ ಹಾಗೂ ಸಂಜೆ ನಗರೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಬಾಬು ಶೆಟ್ಟಿ ತಗ್ಗರ್ಸೆ, ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ ಶೆಟ್ಟಿ, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ರಘುರಾಮ ದೇವಾಡಿಗ ಆಲೂರು, ಧನಾಕ್ಷಿ ವಿಶ್ವನಾಥ ಪೂಜಾರಿ, ಮಹಾಲಿಂಗ ನಾಯ್ಕ್, ಸುರೇಂದ್ರ ಶೆಟ್ಟಿ ಸಹನಾ, ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯ ರಮೇಶ್ ಗಾಣಿಗ ಕೊಲ್ಲೂರು ಮುಂತಾದವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News