×
Ad

ಭಾರತೀಯ ರೈಲ್ವೆಯೊಂದಿಗೆ ಕೊಂಕಣ ರೈಲ್ವೆ ವಿಲೀನಕ್ಕೆ ಒಪ್ಪಿಗೆ: ಕೋಟ

Update: 2025-03-15 22:26 IST

ಕುಂದಾಪುರ, ಮಾ.15: ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನ ಮಾಡುವ ಬಗ್ಗೆ ವಿಧಾನಸಭೆಯಲ್ಲಿ ಪ್ರಸ್ತಾಪಗಳಾಗಿದ್ದು, ಇದಕ್ಕೆ ಕರ್ನಾಟಕ ಸರಕಾರ ಭಾಗಶಃ ಒಪ್ಪಿಗೆ ನೀಡಿದೆ. ಕೊಂಕಣ ರೈಲ್ವೆ ಭಾರತೀಯ ರೈಲ್ವೆಯೊಂದಿಗೆ ವಿಲೀನವಾದಲ್ಲಿ ಪರಿಪೂರ್ಣ ಅಭಿವೃದ್ದಿಗೆ ಅನುಕೂಲ ವಾಗುತ್ತದೆ ಎಂದು ಉಡುಪಿ- ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಕುಂದಾಪುರದ ಮೂಡ್ಲಕಟ್ಟೆ ರೈಲ್ವೆ ನಿಲ್ದಾಣದಲ್ಲಿ ಪ್ರಥಮವಾಗಿ ನಿಲುಗಡೆ ಗೊಂಡ ತಿರುವನಂತಪುರಂ ನಿಝಾಮುದ್ದೀನ್ ಎಕ್ಸ್‌ಪ್ರೆಸ್ ಮತ್ತು ಎರ್ನಾಕುಲಂ ನಿಜಾಮುದ್ಧಿನ್ ಎಕ್ಸ್‌ಪ್ರೆಸ್ ರೈಲುಗಳನ್ನು ಸ್ವಾಗತಿಸಿದ ಬಳಿಕ ಅವರು ಮಾಧ್ಯಮದವರೊಂದಿಗೆ ಅವರು ಮಾತನಾಡುತಿದ್ದರು.

ವಿಲೀನಗೊಳಿಸುವ ಕುರಿತಂತೆ ಮುಂದಿನ ದಿನಗಳಲ್ಲಿ ಶಾಸಕ ಕಿರಣ್ ಕುಮಾರ್ ಕೊಡ್ಗಿ ಸೇರಿದಂತೆ ಕರಾವಳಿ ಶಾಸಕರ ಜೊತೆಗೂಡಿ ಮುಖ್ಯಮಂತ್ರಿ ಹಾಗೂ ಸಚಿವ ಎಂ.ಬಿ.ಪಾಟೀಲರನ್ನು ಭೇಟಿಯಾಗಿ ಚರ್ಚಿಸಲಾಗುವುದು. ಅಂದುಕೊಂಡಂತೆ ಆದಲ್ಲಿ ಕೊಂಕಣ ರೈಲ್ವೇಯನ್ನು ಅಭಿವೃದ್ದಿಗೊಳಿಸಲು, ಜೋಡಿ ಹಳಿಗಳಾಗಲು ಅನುಕೂಲಗಳಾಗುತ್ತವೆ ಎಂದರು.

ಮಂಗಳೂರು-ಗೋವಾಕ್ಕೆ ಕಾರ್ಯಾಚರಿಸುತ್ತಿರುವ ವಂದೇ ಭಾರತ್ ರೈಲು ಪ್ರಯಾಣಿಕರ ಕೊರತೆ ಯಿಂದಾಗಿ ನಿಲುಗಡೆಯಾಗಬೇಕೆನ್ನುವ ಪ್ರಸ್ತಾಪಗಳಿದ್ದು, ರೈಲ್ವೇ ಹಿತರಕ್ಷಣಾ ಸಮಿತಿ ಮತ್ತು ನಾವೆಲ್ಲರೂ ಜೊತೆಯಾಗಿ ಕೇಂದ್ರ ಸಚಿವರ ಗಮನ ಸೆಳೆದು ಈ ರೈಲನ್ನು ನಿಲ್ಲಿಸದೇ ಮುಂಬೈಗೆ ವಿಸ್ತರಿಸುವ ಬೇಡಿಕೆ ಸಲ್ಲಿಸಿದ್ದೇವೆ. ಮಂಗಳೂರನ್ನು ರೈಲ್ವೇ ವೃತ್ತವಾಗಿ ಪರಿಗಣಿಸಬೇಕೆನ್ನುವುದು ಬಹಳ ದಿನಗಳ ಬೇಡಿಕೆಗೆ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ಅವರು ತಿಳಿಸಿದರು.

ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಕೊಂಕಣ ರೈಲ್ವೇ ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸುವ ಪ್ರಕ್ರಿಯೆ ಕರ್ನಾಟಕ, ಗೋವಾ, ಮಹಾರಾಷ್ಟ್ರ ಸರಕಾರದ ಮುಂದಿದೆ. ಈ ಬಗ್ಗೆ ರಾಜ್ಯ ಸರಕಾರದ ಗಮನಕ್ಕೆ ತರಲಾಗಿದೆ. ಒಂದೇ ಕೊಂಕಣ ರೈಲ್ವೇಯನ್ನು ಭಾರತೀಯ ರೈಲ್ವೇಯೊಂದಿಗೆ ವಿಲೀನಗೊಳಸಬೇಕು. ಇಲ್ಲವಾದಲ್ಲಿ ಕೊಂಕಣ ರೈಲ್ವೆ ನಿಲ್ದಾಣ ಹಾಗೂ ಅದರ ಹಳಿಗಳನ್ನು ಅಭಿವೃದ್ದಿ ಪಡಿಸಲು ಸರಕಾರವೇ ಅನುದಾನ ಕೊಡಬೇಕು ಎಂದರು.

ಕುಂದಾಪುರ ರೈಲ್ವೇ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಗಣೇಶ್ ಪುತ್ರನ್ ಮಾತನಾಡಿದರು. ಕೊಕಣ ರೈಲ್ವೆಯ ಹಿರಿಯ ಪ್ರಾದೇಶಿಕ ಸಂಚಾರ ವ್ಯವಸ್ಥಾಪಕರಾದ ದಿಲೀಪ್ ಡಿ.ಭಟ್, ವಾಣಿಜ್ಯ ಮೇಲ್ವಿಚಾರಕ ಎಸ್.ಕೆ.ಭಟ್, ಸಾರ್ವಜನಿಕ ಸಂಪರ್ಕಾಧಿಕಾರಿ ಸುಧಾ ಕೃಷ್ಣಮೂರ್ತಿ, ರೈಲ್ವೇ ಹಿತರಕ್ಷಣಾ ಸಮಿತಿಯ ಪ್ರಮುಖರಾದ ಪ್ರವೀಣ್ ನಾಯ್ಕ್, ವಿವೇಕ್ ನಾಯ್ಕ್, ಪದ್ಮನಾಭ್ ಶೆಣೈ, ರಾಜು ಮೊಗವೀರ, ನಾಗರಾಜ್ ಆಚಾರ್, ಉದಯ್ ಭಂಡಾರ್ಕಾರ್, ಧರ್ಮಪ್ರಕಾಶ್, ಪ್ರಮುಖರಾದ ಶಿವರಾಮ್ ಶೆಟ್ಟಿ, ಹೆರಾಲ್ಡ್ ಡಿಸೋಜಾ, ಹ್ಯಾರಿ ಡಿಮೆಲ್ಲೋ, ಶ್ರೀಶನ್ ನಾಯರ್, ವಿಲ್ಸನ್ ಅಲ್ಮೇಡಾ, ಪ್ರಥ್ವಿ ಕುಂದರ್, ಮನೋಜ್ ನಾಯರ್, ಸುರೇಶ್ ಶೆಟ್ಟಿ ಗೋಪಾಡಿ, ರಾಜೇಶ್ ಕಾವೇರಿ, ಸುಧೀರ್ ಕೆ.ಎಸ್, ಸೌರಭಿ ಪೈ, ಸರಸ್ವತಿ ಜಿ. ಪುತ್ರನ್, ಆಶಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News