×
Ad

ಸರಕಾರಿ ಉದ್ಯೋಗಕ್ಕೆ ಕೊರಗ ವಿದ್ಯಾವಂತರ ನೇರ ನೇಮಕಾತಿ: ಕೊರಗಾಭಿವೃದ್ಧಿ ಸಂಘಗಳ ಒಕ್ಕೂಟದಿಂದ ಸಿಎಂ ಸಿದ್ದರಾಮಯ್ಯ ಭೇಟಿ

Update: 2025-03-25 18:36 IST

ಉಡುಪಿ, ಮಾ.25: ಕೊರಗ ಸಮುದಾಯದ ಯುವಜನರಿಗೆ ನೇರ ನೇಮಕಾತಿ ಮೂಲಕ ಸರಕಾರಿ ಉದ್ಯೋಗ ನೀಡುವಂತೆ ಆಗ್ರಹಿಸಿ ಕೊರಗಾಭಿವೃದ್ಧಿ ಸಂಘಗಳ ಒಕ್ಕೂಟದ ವತಿಯಿಂದ ಸೋಮವಾರ ಬೆಂಗಳೂರಿನ ಸಿಎಂ ನಿವಾಸ ಕಾವೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.

ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಕೊರಗರ ನಿಯೋಗವನ್ನು ಮುಖ್ಯ ಮಂತ್ರಿಗೆ ಭೇಟಿ ಮಾಡಿಸಿದರು. ಅದೇ ರೀತಿ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಣದೀಪ್ ಭೇಟಿ ಮಾಡಿ ಸಮುದಾಯದ ಸಮಸ್ಯೆಗಳನ್ನು ಚರ್ಚಿಸಲಾಯಿತು.

ನಂತರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಕೋಶದ ನಿರ್ದೆಶಕ ಊರ್ಮಿಳಾ, ಬುಡಕಟ್ಟು ಕಲ್ಯಾಣ ಇಲಾಖೆಯ ನಿರ್ದೇಶಕ ಕೆ.ಯೋಗಿಶ್ ಅವರನ್ನು ಭೇಟಿ ಮಾಡಿ ಸುಮಾರು ಎರಡು ಗಂಟೆಗಳ ಕಾಲ ನಿರಂತರವಾಗಿ ಚರ್ಚೆ ಮಾಡಲಾಯಿತು.

ಈ ಸಂದರ್ಭ  ಒಕ್ಕೂಟದ ಅಧ್ಯಕ್ಷೆ ಸುಶೀಲ ನಾಡ, ಉಪಾಧ್ಯಕ್ಷೆ ಪವಿತ್ರ, ಸಂಯೋಜಕ ಪುತ್ರನ್ ಕೆ., ಮುಖಂಡರಾದ ಬೋಗ್ರ ಕೊಕ್ಕರ್ಣೆ, ಶೀನ ಕಾಂಜರಕಟ್ಟಿ, ನರಸಿಂಹ ಪೆರ್ಡೂರು, ಲೀಲಾ ಕಾಪು, ಸಮುದಾಯದ ಪ್ರಮುಖರಾದ ಪ್ರೀತಿ, ಸುಪ್ರಿಯಾ, ಪ್ರತಿಕ್ಷಾ, ರಕ್ಷಿತಾ, ಸಮಗ್ರ ಗ್ರಾಮೀಣ ಆಶ್ರಮದ ಅಧ್ಯಕ್ಷ ಅಶೋಕ್ ಉಪಸ್ಥಿತರಿದ್ದರು.

ಪ್ರಮುಖ ಬೇಡಿಕೆಗಳು: ಅಸ್ಪೃಶ್ಯರಿಂದಲು ಅಸ್ಪೃಶ್ಯತೆಗೆ ಒಳಗಾದ ಪ.ಜಾತಿ ಮತ್ತು ಪ.ವರ್ಗದಲ್ಲಿ ಅತ್ಯಂತ ಹಿಂದುಳಿದಿರುವ ಕೊರಗ ಸಮು ದಾಯವನ್ನು ಪ್ರಿಮಿಟಿವ್ ಆಧಾರದಲ್ಲಿ ರಾಜ್ಯ ಸಿವಿಲ್ ಸೇವೆಗಳಲ್ಲಿ ವಿಶೇಷ ನೇರ ನೇಮಕಾತಿಯನ್ನು ಅನುಷ್ಠಾನ ಗೊಳಿಸಬೇಕು. ಈಗಾಗಲೇ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ನೀಡಿದ 800 ಭೂ ರಹಿತ ಅರ್ಜಿದಾರರಿಗೆ ಕನಿಷ್ಠ 1 ಎಕ್ರೆ ಕೃಷಿ ಭೂಮಿಯ ಹಕ್ಕುಪತ್ರ ಒದಗಿಸುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು.

ಆದಿವಾಸಿ ಕೊರಗ ಸಮುದಾಯದ ಜನರು ಪಾರಂಪರಿಕ ಜ್ಞಾನ ಜೀವನ ಉಪಾಯಕ್ಕಾಗಿ ಕೌಶಲ್ಯ ಅಭಿವೃದ್ಧಿ ವಿವಿಧ ರೀತಿಯ ಕೃಷಿ, ಕುಲಕಸುಬು, ಸ್ವ- ಉದ್ಯೋಗಕ್ಕೆ ಪೂರಕವಾಗಿ ಅವಕಾಶಗಳಿಗೆ ಹೋಗುವ ಹಾಗೆ ತರಬೇತಿಗಳು ನೀಡುವುದು ಅನುಸರಣೆ ಮಾಡುವುದು. ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಒದಗಿಸಬೇಕು. ಕೊರಗರ ಕುಲಕಸುಬಿನ ಉತ್ಪನ್ನಗಳು ಬ್ರಾಂಡ್ ಉತ್ಪನ್ನವಾಗಿ ಸಬೇಕು. ಇದಕ್ಕೆ ಮಾರುಕಟ್ಟೆ ಕಲ್ಪಿಸುವ ನಿಟ್ಟಿನಲ್ಲಿ 100 ಎಕ್ರೆ ಭೂಮಿ ಹಾಗೂ ಕನಿಷ್ಠ 100 ಕೋಟಿ ರೂ. ಬಂಡವಾಳವನ್ನು ಬಜೆಟ್‌ನಲ್ಲಿ ಘೋಷಿಸಿದ ಅನುದಾನದಲ್ಲಿ ಕಾದಿರಿಸಿ ಅನುಷ್ಠಾನಗೊಳಿಸಬೇಕು.

ಈಗಾಗಲೇ ಕೊರಗ ಸಮುದಾಯಕ್ಕೆ ಭೂಮಿ ನೀಡಲಾಗಿದ್ದು ಸರಿಯಾದ ಪುನರ್ ವಸತಿ ಕಾರ್ಯಕ್ರಮ ಗಳು ಮುಂದುವರಿದಿಲ್ಲ. ಇದಕ್ಕಾಗಿ ಕೃಷಿ ಇಲಾಖೆಯ ಅಧಿಕಾರಿಗಳ ನೇತೃತ್ವದಲ್ಲಿ ಪಶುಸಂಗೋಪನೆ ಇಂಜಿನಿಯರಿಂಗ್ ಇಲಾಖೆಯನ್ನು ಒಳಗೊಂಡು ಬರಡು ಭೂಮಿ ಫಲವತ್ತತೆ ಹೆಚ್ಚಿಸುವ ಕಾರ್ಯಕ್ರಮ ಗಳು, ಪುನರ್ವಸತಿ ಭೂಮಿಗೆ ಸಂಬಂಧಿಸಿ ಕ್ರಿಯಾ ಯೋಜನೆ ತಯಾರಿಸಿ ಕನಿಷ್ಠ 10 ಕೋಟಿ ರೂ. ಅನುದಾನ ಕಾದಿರಿಸಬೇಕು.

ಕೊರಗ ಜನಾಂಗದ ಜನ ಸಂಖ್ಯೆ ಇಳಿಮುಖವಾಗುತ್ತಿದ್ದು, ಇದಕ್ಕೆ ಹದಗೆಟ್ಟ ಆರೋಗ್ಯ, ರಕ್ತ ಹೀನತೆ ಮತ್ತು ಆಹಾರದ ಪರಿಸ್ಥತಿಗಳು ಮತ್ತು ಸಾಮಾಜಿಕ ಸಮಸ್ಯೆಗಳು ಕೂಡ ಕಾರಣವಾಗಿವೆ. ಆದುದರಿಂದ ಆರೋಗ್ಯಕ್ಕೆ ಸಂಬಂಧಿಸಿ ಪ್ರಚಲಿತದಲ್ಲಿರುವ ಕಾರ್ಯಕ್ರಮಗಳನ್ನು ಈಗ ಇರುವಂತೆಯೇ ಮುಂದು ವರಿಸಬೇಕು ಎಂದು ಮನವಿಯಲ್ಲಿ ಮುಖ್ಯಮಂತ್ರಿಯವರನ್ನು ಆಗ್ರಹಿಸಲಾಗಿದೆ.

‘ಕೊರಗರಿಗೆ ಪ್ರತ್ಯೇಕ ನಿಗಮ ಮಂಡಳಿ ಸ್ಥಾಪಿಸಿ’

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಆದಿವಾಸಿ ಕೊರಗ ಸಮುದಾಯವು ಇಂದಿಗೂ ಕೂಡ ಅಸ್ಪೃಶ್ಯ ರಿಗೂ ಅಸ್ಪೃಶ್ಯರಾಗಿ ಮಾನಸಿಕ, ಶೈಕ್ಷಣಿಕ, ಅನಾರೋಗ್ಯ, ನಿರುದ್ಯೋಗ ಹಾಗೂ ಅಪೌಷ್ಟಿಕತೆಯಿಂದ ಬಳಲುತ್ತಿರುವ ಅಳಿವಿನ ಅಂಚಿನಲ್ಲಿರುವ ಸಮುದಾಯವಾಗಿದೆ. ಅದಕ್ಕಾಗಿ ಕೊರಗರಿಗೆ ಪ್ರತ್ಯೇಕ ನಿಗಮ ಮಂಡಳಿ ಸ್ಥಾಪಿಸಿ ಸಮಗ್ರ ಕೊರಗರ ಅಭಿವೃದ್ಧಿ ಪಡಿಸಬೇಕು. ಇದಕ್ಕೆ 10 ಕೋಟಿ ರೂ. ಅನುದಾನ ಮೀಸಲಿರಿಸಬೇಕು.

ಕೊರಗ ಸಮುದಾಯದ ಜನಸಂಖ್ಯೆ ಇಳಿಮುಖವಾಗುತ್ತಿರುವುದಕ್ಕೆ ನುರಿತ ವೈದ್ಯಕೀಯ ತಜ್ಞರು, ಮಾನವ ಶಾಸ್ತ್ರ, ಸಮಾಜ ಶಾಸ್ತ್ರ, ಮನೋಶಾಸ್ತ್ರಜ್ಞರನ್ನು ಒಳಗೊಂಡ ತಂಡ ಕೊರಗರ ಸಹಭಾಗಿತ್ವ ದಲ್ಲಿ ಸಮಗ್ರ ಆರೋಗ್ಯ ಅಧ್ಯಯನ ಮತ್ತು ಸಂಶೋಧನೆ ನಡೆಸಬೇಕು. ಸಮುದಾಯದ ಜನ ಸಂಖ್ಯೆ ಏರುಗತಿಗೆ ಪಡೆಯುವವರೆಗೆ ಈ ಕಾರ್ಯಕ್ರಮ ಮುಂದುವರಿಸಬೇಕು. ಇದಕ್ಕಾಗಿ ವಾರ್ಷಿಕ 2 ಕೋಟಿ ರೂ. ಅನುದಾನ ಕಾದಿರಿಸಿ ನೀತಿಯಾಗಿ ಜಾರಿಯಾಗಬೇಕು ಎಂದು ನಿಯೋಗ ಮುಖ್ಯಮಂತ್ರಿಯವರನ್ನು ಒತ್ತಾಯಿಸಿದೆ.



 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News