ಉಡುಪಿ ಜಿಲ್ಲೆಯಲ್ಲಿ ಉಪವಾಸ, ಧ್ಯಾನದೊಂದಿಗೆ ಗುಡ್ ಫ್ರೈಡೆ ಆಚರಣೆ
ಉಡುಪಿ, ಎ.18: ಕ್ರೈಸ್ತ ಸಮುದಾಯದ ಪವಿತ್ರ ದಿನವಾದ ಶುಭ ಶುಕ್ರವಾರ(ಗುಡ್ ಫ್ರೈಡೆ)ವನ್ನು ಉಡುಪಿ ಜಿಲ್ಲೆಯಾದ್ಯಂತ ಉಪವಾಸ, ಧ್ಯಾನ ಹಾಗೂ ಪ್ರಾರ್ಥನೆಯೊಂದಿಗೆ ಆಚರಿಸಲಾಯಿತು.
ಧರ್ಮಪ್ರಾಂತ್ಯದ ಪ್ರಧಾನ ದೇವಾಲಯ ಮಿಲಾಗ್ರಿಸ್ ಕ್ಯಾಥೆಡ್ರಲ್ ಚರ್ಚ್‌ನಲ್ಲಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಪ್ರಾರ್ಥನಾ ವಿಧಿಯನ್ನು ನೆರವೇರಿಸಿದರು. ಚರ್ಚಿನ ಪ್ರಧಾನ ಧರ್ಮಗುರು ಹಾಗೂ ಧರ್ಮಪ್ರಾಂತ್ಯದ ಶ್ರೇಷ್ಠಗುರು ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್, ಸಹಾಯಕ ಧರ್ಮಗುರು ವಂ.ಪ್ರದೀಪ್ ಕಾರ್ಡೊಜಾ, ಪೋಪ್ ಅವರ ಭಾರತೀಯ ರಾಯಭಾರಿಗಳ ಕಾರ್ಯದರ್ಶಿ ವಂ.ಆಲ್ಬರ್ಟೋ ನಪ್ಲಿತಾನೋ ಹಾಗೂ ಬೊಲಿವಿಯಾ ರಾಯಭಾರಿಗಳ ಕಾರ್ಯದರ್ಶಿ ವಂ.ಐವನ್ ಮಾರ್ಟಿಸ್, ಕಟಪಾಡಿ ಹೋಲಿ ಕ್ರೊಸ್ ಸಂಸ್ಥೆಯ ನಿರ್ದೇಶಕ ವಂ.ರೋನ್ಸನ್ ಡಿಸೋಜ ಉಪಸ್ಥಿತರಿದ್ದರು.
ಧರ್ಮಾಧ್ಯಕ್ಷ ಜೆರಾಲ್ಡ್ ಐಸಾಕ್ ಲೋಬೊ ಗುಡ್ ಫ್ರೈಡೆ ಸಂದೇಶ ನೀಡಿ, ಶುಭ ಶುಕ್ರವಾರ ಯೇಸು ಇಡೀ ಮನುಕುಲದ ವಿಮೋಚನೆಗಾಗಿ ತನ್ನಾತ್ಮವನ್ನು ಪಿತನ ಕೈಗೊಪ್ಪಿಸಿದ ದಿನ. ಕ್ರಿಸ್ತನ ತ್ಯಾಗದ ಮಹತ್ವ ವನ್ನು ಧ್ಯಾನಿಸುವ ಪವಿತ್ರ ದಿನ. ಶುಭ ಶುಕ್ರವಾರ ನಿಮ್ಮ ಬದುಕಿನಲ್ಲಿ ಪ್ರೀತಿಯ, ಕ್ಷಮೆಯ ಮತ್ತು ತ್ಯಾಗದ ಅರ್ಥವನ್ನು ಅರಿಯಲು ಸಹಾಯ ಮಾಡುತ್ತದೆ. ಈದಿನ ಯೇಸು ಮಾನವನ ಮೇಲಿರುವ ಅವನ ಅನಂತ ಪ್ರೀತಿಯನ್ನು ತೋರಿಸಲು ಶಿಲುಬೆಯ ಮೇಲೆ ತನ್ನ ಪ್ರಾಣವನ್ನೇ ಅರ್ಪಿಸಿದ ಶುಭದಿನ ಎಂದರು.
ಇಂದಿನ ವೈಷಮ್ಯದಿಂದ ಕೂಡಿದ ಜಗತ್ತಿನಲ್ಲಿ ಕ್ರಿಸ್ತನ ಬಲಿದಾನವು ನಮಗೆ ಸಹಾನುಭೂತಿ, ಸಹಬಾಳ್ವೆ ಮತ್ತು ಮಾನವೀಯ ಮೌಲ್ಯಗಳೆಡೆಗೆ ಮನವನ್ನು ನಮಗೆ ಪ್ರೀತಿ ಮತ್ತುಕ್ಷಮೆಯ ಮೂಲಕ ನಿಜವಾದ ಶಾಂತಿಯನ್ನು ಪಡೆಯ ಬಹುದು. ಕ್ರಿಸ್ತನ ತ್ಯಾಗ, ನಮ್ಮ ಜೀವನದಲ್ಲಿ ದಾರಿತೋರಿಸುವ ಬೆಳಕಾಗಲಿ. ಪ್ರೀತಿ, ಕ್ಷಮೆ, ಪರೋಪಕಾರದ ಮೂಲಕ ನವ ಸಮಾಜವನ್ನು ಕಟ್ಟೋಣ. ಒಬ್ಬರೊಗೊಬ್ಬರು ಪ್ರೀತಿ ನೀಡುವ, ವೈರಿಗಳಿಗೆ ಕ್ಷಮೆ ನೀಡುವ, ಮತ್ತು ನೋವಿನ ಸಡುವೆಯೂ ಶಾಂತಿಯನ್ನು ಕಟ್ಟುವ ಸಂಕಲ್ಪದೊಂದಿಗೆ ಬದುಕಬೇಕು ಎಂದರು.
ಚರ್ಚ್‌ಗಳಲ್ಲಿ ಕ್ರೈಸ್ತರು ಉಪವಾಸ, ಧ್ಯಾನ, ಪ್ರಾರ್ಥನೆ ಸಲ್ಲಿಸಿದರು. ಯೇಸುವಿನ ಮರಣದ ಹಿನ್ನೆಲೆಯಲ್ಲಿ ಎಲ್ಲೆಡೆ ಮೌನ ಅವರಿಸಿತ್ತು. ಕೆಲವು ಚರ್ಚ್ಗಳಲ್ಲಿ ಯೇಸು ಕ್ರಿಸ್ತರ ಬಂಧನ, ಶಿಲುಬೆಯ ಮೇಲೆ ಮರಣ ವನ್ನಪ್ಪುವ ಘಟನಾವಳಿಗಳನ್ನು ಪ್ರಸ್ತುತಪಡಿಸಲಾಯಿತು. ಧರ್ಮಗುರುಗಳು ರಕ್ತವರ್ಣದ ಪೂಜಾ ಬಟ್ಟೆ ಧರಿಸಿ ಯೇಸು ಕ್ರಿಸ್ತನ ಕೊನೆಯ ಘಳಿಗೆಗಳ ವತ್ತಾಂತ ಓದಿದರು. ಬಳಿಕ ಶಿಲುಬೆಯನ್ನು ಮೆರವಣಿಗೆಯಲ್ಲಿ ತರಲಾಯಿತು. ತ್ಯಾಗದ ಉಳಿಕೆಯ ಹಣವನ್ನು ಬಡವರಿಗೆ ಹಂಚಲಾಯಿತು.
ಜಿಲ್ಲೆಯ ವಿವಿಧ ಚರ್ಚುಗಳಲ್ಲಿ ಆಯಾ ಚರ್ಚುಗಳ ಧರ್ಮಗುರುಗಳ ನೇತೃತ್ವದಲ್ಲಿ ಪವಿತ್ರ ಶುಕ್ರವಾರದ ವಿಧಿ ವಿಧಾನಗಳು ಜರಗಿದವು. ಉಡುಪಿ ಶೋಕಮಾತಾ ಚರ್ಚಿನಲ್ಲಿ ಧರ್ಮಗುರುಗಳಾದ ವಂ.ಚಾರ್ಲ್ಸ್ ಮಿನೇಜಸ್, ತೊಟ್ಟಂ ಸಂತ ಅನ್ನಮ್ಮ ದೇವಾಲಯದಲ್ಲಿ ವಂ.ಡೆನಿಸ್ ಡೆಸಾ, ಕುಂದಾಪುರ ಹೋಲಿ ರೋಸರಿ ಚರ್ಚಿನಲ್ಲಿ ವಂ.ಪಾವ್ಲ್ ರೇಗೊ, ಶಿರ್ವ ಆರೋಗ್ಯ ಮಾತಾ ಚರ್ಚಿನಲ್ಲಿ ವಂ.ಡಾ.ಲೆಸ್ಲಿ ಡಿಸೋಜ, ಕಾರ್ಕಳ ಸಂತ ಲಾರೇನ್ಸ್ ಬಸಿಲಿಕಾದಲ್ಲಿ ವಂ.ಆಲ್ಬನ್ ಡಿಸೋಜ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ಜರಗಿದವು.