ಯಕ್ಷಗಾನ ಕಲೆಯಲ್ಲಿ ರಾಜಕೀಯ ಸರಿಯಲ್ಲ: ತಲ್ಲೂರು ಶಿವರಾಮ ಶೆಟ್ಟಿ
ಕೋಟ, ಎ.18: ಪ್ರಸ್ತುತ ಯಕ್ಷಗಾನದಲ್ಲಿ ಪಾತ್ರಧಾರಿಗಳು ಯಕ್ಷಗಾನ ಚೌಕಟ್ಟನ್ನು ಮೀರಿ ಹೋಗುತ್ತಿ ದ್ದಾರೆ ಎಂಬುದಾಗಿ ಅಕಾಡೆಮಿಗೆ ದೂರುಗಳು ಬರುತ್ತಿವೆ. ಅದನ್ನು ನಾವು ಸರಕಾರಕ್ಕೆ ಕಳುಹಿಸಿದ್ದೇವೆ. ಯಕ್ಷಗಾನ ಕಲಾವಿದರು ತಮ್ಮ ಪಾತ್ರದ ಇತಿಮಿತಿಯನ್ನು ಅರಿತುಕೊಂಡೇ ಅಭಿನಯಿಸಬೇಕು. ರಾಜಕೀಯ ಮಾತನಾಡುವುದು ಕಲೆಯ ದೃಷ್ಟಿಯಿಂದ ಸರಿಯಲ್ಲ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದ್ದಾರೆ.
ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಸಹಕಾರದಲ್ಲಿ ಸಾಲಿಗ್ರಾಮ ಮಕ್ಕಳ ಮೇಳ ತನ್ನ ಸುವರ್ಣ ಪರ್ವದ 9ನೇ ಕಾರ್ಯಕ್ರಮವಾಗಿ ಕೋಟದ ಶ್ರೀಹಂದೆ ವಿಷ್ಣುಮೂರ್ತಿ ಶ್ರೀವಿನಾಯಕ ದೇವಸ್ಥಾನದ ನಾಗಪ್ಪಯ್ಯ ಸಭಾಂಗಣ ದಲ್ಲಿ ಗುರುವಾರ ಹಮ್ಮಿಕೊಳ್ಳಲಾದ ಆಹ್ವಾನಿತ ಯಕ್ಷಗಾನ ತಂಡಗಳ ಎರಡು ದಿನಗಳ ಯಕ್ಷೋತ್ಸವ ’ಯಕ್ಷ ತ್ರಿವಳಿ’ ಮಕ್ಕಳ ಯಕ್ಷಗಾನ ಪ್ರದರ್ಶನದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಯಕ್ಷಗಾನಕ್ಕೆ ಸರಕಾರದಿಂದ ಸಿಗುವ ಸರಕಾರಿ ಸೌಲಭ್ಯಗಳನ್ನು ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಯಕ್ಷ ಶಿಕ್ಷಣ ಟ್ರಸ್ಟ್ ಮೂಲಕ ಕುಂದಾಪುರದ ಎಲ್ಲಾ ಪ್ರೌಢಶಾಲೆಗಳಲ್ಲಿ ಯಕ್ಷಗಾನ ಕಲಿಸುವಂತಾಗಬೇಕು ಎಂಬುದೇ ನಮ್ಮ ಆಶಯವಾಗಿದೆ ಎಂದು ತಿಳಿಸಿದರು.
ಕೋಟ ಗೀತಾನಂದ ಫೌಂಡೇಶನ್‌ನ ಪ್ರವರ್ತಕ ಆನಂದ ಸಿ.ಕುಂದರ್, ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್ ಮಾತನಾಡಿದರು. ಈ ಸಂದರ್ಭದಲ್ಲಿ ಮಕ್ಕಳ ಯಕ್ಷಗಾನ ಕ್ಷೇತ್ರದ ಸಾಧಕ ದೇವದಾಸ್ ರಾವ್ ಕೂಡ್ಲಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕೋಟತಟ್ಟು ಗ್ರಾಪಂ ಅಧ್ಯಕ್ಷ ಸತೀಶ್ ಬಾರಿಕೆರೆ, ಸಾಲಿಗ್ರಾಮ ಮಕ್ಕಳ ಮೇಳದ ಸಂಸ್ಥಾಪಕ ಎಚ್.ಶ್ರೀಧರ ಹಂದೆ, ಬಲರಾಮ್ ಕೆ., ಶ್ರೀಕಾಂತ ಉಡುಪ, ಮಕ್ಕಳ ಮೇಳದ ಉಪಾಧ್ಯಕ್ಷ ಜನಾರ್ದನ ಹಂದೆ ಉಪಸ್ಥಿತರಿದ್ದರು.
ಅಕಾಡೆಮಿಯ ಸದಸ್ಯ ಸಂಚಾಲಕ ರಾಘವ ಎಚ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಅಕಾಡೆಮಿಯ ರಿಜಿಸ್ಟ್ರಾರ್ ನಮ್ರತಾ ಎನ್. ಸ್ವಾಗತಿಸಿದರು., ಸಾಲಿಗ್ರಾಮ ಮಕ್ಕಳ ಮೇಳದ ಕಾರ್ಯದರ್ಶಿ ಎಚ್. ಸುಜಯೀಂದ್ರ ಹಂದೆ ವಂದಿಸಿದರು. ಬಳಿಕ ಕಲಾಪೀಠ ಕೋಟ ವತಿಯಿಂದ ಮೈಂದ ದ್ವಿವಿದ ಕಾಳಗ ಯಕ್ಷಗಾನ ಪ್ರದರ್ಶನ ನಡೆಯಿತು.