ಬಂಟಕಲ್ಲು ವಿದ್ಯಾರ್ಥಿಗಳಿಂದ ಸೌರಶಕ್ತಿ ಚಾಲಿತ ಬೀಜ ಬಿತ್ತನೆ ಯಂತ್ರ ಅಭಿವೃದ್ಧಿ
ಉಡುಪಿ, ಎ.18: ಬಂಟಕಲ್ ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ಅಂತಿಮ ವರ್ಷದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ಸೌರಶಕ್ತಿ ಚಾಲಿತ ಬೀಜ ಬಿತ್ತನೆ ಯಂತ್ರವನ್ನು ಅಭಿವೃದ್ಧಿ ಪಡಿಸಿದ್ದಾರೆ.
ರೈತರು ಕೃಷಿ ಭೂಮಿಯಲ್ಲಿ ಬೀಜಗಳನ್ನು ಬಿತ್ತಲು ಸಾಂಪ್ರದಾಯಿಕ ವಿಧಾನಗಳನ್ನು ಬಳಸುತ್ತಿದ್ದಾರೆ. ಈ ಹಳೆಯ ವ್ಯವಸ್ಥೆಯಲ್ಲಿ ಕೈಯಿಂದ ಬೀಜ ಬಿತ್ತಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಹಾಗೂ ಕಾರ್ಮಿಕರ ಕೊರತೆ ಇರುವುದರಿಂದ ಈ ಪದ್ಧತಿಯು ಕ್ರಮೇಣ ಅಪ್ರಸ್ತುತ ಎನಿಸುತ್ತದೆ. ಇದನ್ನು ಗಮನದಲ್ಲಿ ಇಟ್ಟು ಕೊಂಡು ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಡಾ.ರಾಜಾ ಯತೀಶ್ ಯಾದವ್ ನೇತೃತ್ವದಲ್ಲಿ ವಿದ್ಯಾರ್ಥಿ ಗಳಾದ ಐಶ್ವರ್ಯ, ಕಿರಣ್, ಗುರುಕಿರಣ್, ಲಿಖಿತ್ ಎರ್ಮಾಳ್ ಈ ಯಂತ್ರವನ್ನು ಅಭಿವೃದ್ದಿ ಪಡಿಸಿದ್ದಾರೆ.
ಈ ಯಂತ್ರವು ಸೌರಶಕ್ತಿ ಚಾಲಿತ ಬ್ಯಾಟರಿಯನ್ನು ಉಪಯೋಗಿಸುವುದರಿಂದ ಪರಿಸರ ಸ್ನೇಹಿಯಾಗಿದೆ. ಈ ಯಂತ್ರದಲ್ಲಿ ಬೀಜವನ್ನು ಮಣ್ಣಿನಲ್ಲಿ ಹಾಕುವ ಮೊದಲು ಸುಮಾರು 4 ಸೆಂ.ಮೀ. ಆಳಕ್ಕೆ ಮಣ್ಣನ್ನು ಅಗೆ ಯಲು ಅವಕಾಶವಿದೆ. ಬಿತ್ತನೆಯೊಂದಿಗೆ ನೀರು ಮತ್ತು ದ್ರವ ಗೊಬ್ಬರಗಳನ್ನು ಸಿಂಪಡಿಸುವುದು ಈ ಯಂತ್ರದ ಹೆಚ್ಚುವರಿ ವೈಶಿಷ್ಟ್ಯವಾಗಿದೆ. ಈ ಯಂತ್ರವು ನೆಲಗಡಲೆ ಬೆಳೆಯುವ ರೈತರಿಗೆ ಹೆಚ್ಚು ಸೂಕ್ತವಾಗಿದೆ.