ಭಾರತ ವಸಾಹತುಶಾಹಿ ದೇಶ ಆಗಿರುವ ಆತಂಕ: ರಘುನಂದನ
ಉಡುಪಿ : ಸಮಾಜವಾದಿ ರಾಜಕೀಯ ಪ್ರಜ್ಞೆಯಿಂದ ಮಾತ್ರ ಪರಿಸರ ಮತ್ತು ನಮ್ಮ ಲೋಕವನ್ನು ಸ್ವಚ್ಛವಾಗಿ ಉಳಿಸಿಕೊಳ್ಳಬಹುದು. ನಮ್ಮ ದೇಶ 200 ವರ್ಷಗಳ ಕಾಲ ವಸಹಾತು ಆಡಳಿತದಲ್ಲಿ ಸಿಲುಕಿ ನರಳಿದೆ. ಆ ಮೂಲಕ ನಾವು ಆಕ್ರಮಣಕಾರಿ ಶೋಷಣೆಯ ವಸಹಾತುಶಾಹಿಯಿಂದ ನಲುಗಿದವರು. ಆದರೆ ಇಂದು ಭಾರತ ಕೂಡ ವಸಾಹತುಶಾಹಿ ದೇಶ ಆಗುತ್ತಿದೆ ಎಂದು ಕವಿ, ಸಾಹಿತಿ ರಘುನಂದನ ಹೇಳಿದ್ದಾರೆ.
ಉಡುಪಿ ಎಂಜಿಎಂ ಕಾಲೇಜಿನ ವತಿಯಿಂದ ಬುಧವಾರ ಕಾಲೇಜಿನ ಮುದ್ದಣ ಮಂಟಪದಲ್ಲಿ ಆಯೋಜಿ ಸಲಾದ ಮುದ್ದಣ ಸಾಹಿತ್ಯೋತ್ಸವದಲ್ಲಿ ಅವರು ತನ್ನ ‘ತುಯ್ತವೆಲ್ಲ ನವ್ಯದತ್ತ: ಅಂದತ್ತರ ಉಯ್ಯಾಲೆ ಮತ್ತು ಅದರ ಸುತ್ತ’ ಎಂಬ ಕೃತಿಗೆ ವಿ.ಎಂ.ಇನಾಂದರ್ ವಿಮರ್ಶಾ ಪ್ರಶಸ್ತಿಯನ್ನು ಸ್ವೀಕರಿಸಿ ಅವರು ಮಾತನಾಡುತಿದ್ದರು.
ಅಂಡಮಾನ್ ನಿಕೋಬಾರ್‌ನ ದ್ವೀಪದಲ್ಲಿ 70ಸಾವಿರ ಕೋಟಿ ವೆಚ್ಚದಲ್ಲಿ ಬಂದರು, ಅಂತಾರಾಷ್ಟ್ರೀಯ ವಿಮಾನಮ ನಿಲ್ದಾಣದ ಮಾಡಲು ನಮ್ಮ ಸರಕಾರ ಹೊರಟಿದೆ. ಅಲ್ಲಿನ ಸಾವಿರಾರು ಎಕರೆ ಕಾಡು, ನೆಲ ಜಲ ಮೂಲಗಳನ್ನು ನಾಶ ಮಾಡುತ್ತಿದೆ. ಇದರಿಂದ ಅಲ್ಲಿ ಬುಡಕಟ್ಟು ಸಮುದಾಯ ದಿಕ್ಕಪಾಲಾಗುತ್ತಿ ದ್ದಾರೆ. ಈ ಮೂಲಕ ಇಲ್ಲಿನ ದ್ವೀಪವನ್ನು ವ್ಯಾಪಾರ ಕೇಂದ್ರ ವನ್ನಾಗಿಸಲು ಹುನ್ನಾರ ಮಾಡಲಾಗುತ್ತಿದೆ. ಅಂದು ಬ್ರಿಟೀಷರ್ ಮಾಡಿದ ಕೆಲಸವನ್ನು ಇಂದು ನಮ್ಮ ಸರಕಾರ ಮಾಡುತ್ತಿದೆ ಎಂದು ಅವರು ದೂರಿದರು.
ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಹಾಗೂ ಸಾಹಿತಿ ನರೇಂದ್ರ ರೈ ದೇರ್ಲ ‘ಯುವಜನತೆ ಮತ್ತು ಪರಿಸರ ಕಾಳಜಿ’ ಕುರಿತು ಮಾತನಾಡಿ, ದೇಶದ ರಾಷ್ಟ್ರಪತಿ, ಪ್ರಧಾನಿ, ಪತ್ರಕರ್ತ, ಪ್ರಾಧ್ಯಾಪಕ, ಕಲಾವಿದ, ವಿದ್ಯಾರ್ಥಿ ಸೇರಿದಂತೆ ಎಲ್ಲರೂ ಪರಿಸರವಾದಿಗಳಾಗಬೇಕಾದ ಅನಿವಾರ್ಯ ಪರಿಸ್ಥಿತಿ ನಮ್ಮ ಮುಂದೆ ಇದೆ. ಕರಾವಳಿಯಲ್ಲಿ 22 ನದಿಗಳು ಹರಿದರೂ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಪರದಾಡುವ ಸ್ಥಿತಿ ಇದೆ. ಪರಿಸರವನ್ನು ಪರಿಸರದೊಳಗೆ ಕುಳಿತು ಅಧ್ಯಯನ ಮಾಡುವ ಮಾದರಿ ಪಠ್ಯದಲ್ಲಿ ಬರಬೇಕಾಗಿದೆ ಎಂದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ.ಲಕ್ಷ್ಮೀನಾರಾಯಣ ಕಾರಂತ ವಹಿಸಿದ್ದರು. ಎಂಜಿಎಂ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ.ದೇವಿದಾಸ ನಾಯಕ್, ಪದವಿ ಪೂರ್ವ ಕಾಲೇಜಿನ ಪ್ರಾಂಶು ಪಾಲೆ ಮಾಲತಿದೇವಿ, ಕಾಲೇಜಿನ ಉಪ ಪ್ರಾಂಶುಪಾಲ ಡಾ.ವಿಶ್ವನಾಥ ಪೈ ಎಂ. ಉಪಸ್ಥಿತರಿದ್ದರು. ಉಡುಪಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ ಶೆಟ್ಟಿ ಪ್ರಶಸ್ತಿ ಪುರಸ್ಕೃತರ ಪರಿಚಯ ಮಾಡಿದರು.
ಕನ್ನಡ ವಿಭಾಗದ ಮುಖ್ಯಸ್ಥ ಡಾ.ಪುತ್ತಿ ವಸಂತ ಕುಮಾರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ದರು. ಉಪನ್ಯಾಸಕಿ ಅದಿತಿ ಪ್ರಶಸ್ತಿ ಪತ್ರ ವಾಚಿಸಿದರು. ಕನ್ನಡ ಉಪನ್ಯಾಸಕಿ ಡಾ.ಕಾತ್ಯಾಯಿನಿ ಕುಂಜಿಬೆಟ್ಟು ವಂದಿಸಿದರು. ಕನ್ನಡ ಉಪನ್ಯಾಸಕ ರಾಘವೇಂದ್ರ ತುಂಗ ಕಾರ್ಯಕ್ರಮ ನಿರೂಪಿಸಿದರು.
‘ಗಾಝಾದಲ್ಲಿ ಸಾಮೂಹಿಕ ಕಗ್ಗೊಲೆ’
ಬಂಡವಾಳಶಾಹಿ ಪ್ರಪಂಚದ ಬೆಂಬಲದೊಂದಿಗೆ ಪ್ಯಾಲೆಸ್ತಿನ್ ಗಾಝಾದಲ್ಲಿ ಇಂದು ನಿರಂತರವಾಗಿ ನರಮೇಧ ಹಾಗೂ ಸಾಮೂಹಿಕ ಕಗ್ಗೊಲೆ ನಡೆಯುತ್ತಿದೆ. ಭಾರತ ಸ್ವಾತಂತ್ರ್ಯ ಪೂರ್ವದಿಂದಲೂ ಪ್ಯಾಲೆಸ್ತಿನ್‌ಗೆ ಬೆಂಬಲವಾಗಿ ನಿಂತು, ಅದಕ್ಕೆ ನ್ಯಾಯ ಸಿಗಬೇಕೆಂಬ ನಿಲುವನ್ನು ಹೊಂದಿದೆ. ಇಂದಿಗೂ ನಮ್ಮ ದೇಶದ ಅಧಿಕೃತ ನೀತಿ ಅದೇ ಆಗಿದೆ. ಆದರೆ ಅದನ್ನು ಈಗಿನ ಸರಕಾರ ಪಾಲಿಸುತ್ತಿಲ್ಲ. ಇಸ್ರೇಲ್‌ಗೆ ಸಶಸ್ತ್ರವನ್ನು ಕೂಡ ನಮ್ಮ ದೇಶ ನೀಡುತ್ತಿದೆ. ಉನ್ನತವಾಗಿರುವ ಮೌಲ್ಯವನ್ನು ಎತ್ತಿ ಹಿಡಿದಿದ್ದ ಭಾರತ ಇಂದು ಯಾವ ಸ್ಥಿತಿಗೆ ಬಂದಿದೆ ಎಂಬುದುನ್ನು ಯೋಚಿಸಬೇಕಾಗಿದೆ ಎಂದು ಸಾಹಿತಿ ರಘುನಂದನ ತಿಳಿಸಿದರು.
ನಮ್ಮ ದೇಶದಲ್ಲಿ ಸಂವಿಧಾನ ಬದ್ಧವಾಗಿ ಹಾಗೂ ಶಾಂತಿಯುತವಾಗಿ ಪ್ರತಿಭಟಿಸಿದ ಅನೇಕ ಧೀಮಂತ ರನ್ನು ಜೈಲಿಗೆ ದೂಡಲಾಗಿದೆ. ಇವರೇ ಈ ದೇಶದ ನಿಜವಾದ ದೇಶಪ್ರೇಮಿಗಳು. 2020ರಲ್ಲಿ ದೆಹಲಿ ಗಲಭೆಯನ್ನು ಹುಟ್ಟು ಹಾಕಿ ಕೆಲವರನವ್ನ ಮತ್ತೆ ಜೈಲಿಗೆ ಹಾಕಲಾಗಿದೆ. ಅವರ ಮೇಲೂ ದೇಶ ದ್ರೋಹದ ಕೇಸುಗಳನ್ನು ದಾಖಲಿಸಲಾಗಿದೆ. ಅದೇ ರೀತಿ ಅನೇಕ ಆದಿವಾಸಿಗಳು ಬಡವರು ಇಂದು ಜೈಲಿನಲ್ಲಿದ್ದಾರೆ ಎಂದು ಅವರು ಖೇಧ ವ್ಯಕ್ತಪಡಿಸಿದರು.