ಹೊಟೇಲ್ ಉದ್ಯಮಿ ಸುರೇಶ್ ಪೂಜಾರಿ ಪಡುಕೋಣೆ ನಿಧನ
ಕುಂದಾಪುರ: ಮುಂಬಯಿಯಲ್ಲಿ ಸುಖ ಸಾಗರ್ ಗ್ರೂಪ್ ಆಫ್ ಹೊಟೇಲಿನ ಸಂಸ್ಥಾಪಕ ಉದ್ಯಮಿ, ಕೊಡುಗೈ ದಾನಿ ಪಡುಕೋಣೆ ಸುರೇಶ್ ಪೂಜಾರಿ (87) ಇಂದು ಸಂಜೆ ಮುಂಬಯಿಯಲ್ಲಿ ವಯೋ ಸಹಜವಾಗಿ ನಿಧನರಾಗಿದ್ದಾರೆ.
ಎಳೆಯ ವಯಸ್ಸಿನಲ್ಲೇ ಹುಟ್ಟೂರನ್ನು ತೊರೆದು ಕುಟುಂಬದ ಪಾಲನೆಗೆ ದೂರದ ಮಾಯಾ ನಗರಿ ಮುಂಬಯಿಗೆ ತೆರಳಿ ತಮ್ಮ ಸ್ವ ಸಾಮರ್ಥ್ಯದಿಂದ ಸುಖ ಸಾಗರ ಗ್ರೂಪ್ ಆಪ್ ಹೋಟೆಲಿನ ಸಾಮ್ರಾಜ್ಯ ವನ್ನು ಕಟ್ಟಿ ತಮ್ಮ ದುಡಿಮೆಯ ಬಹುಪಾಲನ್ನು ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಬದುಕನ್ನು ಸಮರ್ಪಿಸಿದ ಕೊಡುಗೈ ದಾನಿ ಸುರೇಶ್ ಎಸ್ ಪೂಜಾರಿ ಬಿಲ್ಲವ ಸಮಾಜ ಸೇವಾ ಸಂಘ(ರಿ) ಕುಂದಾಪುರದ ಗೌರವಾಧ್ಯಕ್ಷರು.
ಶ್ರೀ ನಾರಾಯಣಗುರು ಏಜ್ಯುಕೇಶನಲ್&ಕಲ್ಚರಲ್ ಟ್ರಸ್ಟ್ (ರಿ) ಕುಂದಾಪುರ ಇದರ ಅಧ್ಯಕ್ಷರಾಗಿ ಕಳೆದ 35 ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತಿದ್ದರು. ಸಮಾಜದ ಅಶಕ್ತರು ಕೂಡ ಅತ್ಯುತ್ತಮವಾದ ಕಲ್ಯಾಣ ಮಂಟಪದಲ್ಲಿ ವಿವಾಹವನ್ನು ನಡೆಸಬೇಕು ಎಂದು 35 ವರ್ಷಗಳ ಹಿಂದೆಯೇ ಕುಂದಾಪುರದಲ್ಲಿ ಶ್ರೀ ನಾರಾಯಣಗುರು ಕಲ್ಯಾಣ ಮಂಟಪವನ್ನು ನಿರ್ಮಿಸಿ ಬಡವರ ಬೆಳಕಾಗಿದ್ದರು, ವಿದ್ಯೆಗೆ ಬಹಳಷ್ಟು ಒತ್ತು ನೀಡಿದ್ದ ಅವರು ಬಿಲ್ಲವ ಸಂಘದ ಮೂಲಕ ವಿಧ್ಯಾರ್ಥಿ ವೇತನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು.
ನಾಳೆ ಹುಟ್ಟೂರು ಪಡುಕೋಣೆಗೆ ಪಾರ್ಥಿವ ಶರೀರ ಆಗಮಿಸಲಿದ್ದು ಅಪರಾಹ್ನ 12:30 ರಿಂದ ಸಾರ್ವಜನಿಕರಿಗೆ ವೀಕ್ಷಣೆಗೆ ಅವಕಾಶವಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.