×
Ad

ಎಪಿಎಂಸಿಗೆ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಿ: ಉಡುಪಿ ಅಪರ ಜಿಲ್ಲಾಧಿಕಾರಿ

Update: 2025-06-13 21:31 IST

ಉಡುಪಿ, ಜೂ.13: ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ರೈತರಿಗೆ ಹಾಗೂ ವರ್ತಕರು ವ್ಯಾಪಾರ ವಹಿವಾಟು ಕೈಗೊಳ್ಳಲು ಅಗತ್ಯವಿರುವ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಸೂಚನೆ ನೀಡಿದ್ದಾರೆ.

ಶುಕ್ರವಾರ ಉಡುಪಿ ನಗರದ ಆದಿಉಡುಪಿಯಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಕಚೇರಿ ಸಭಾಂಗಣ ದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಂಸ್ಥೆಯ ಎಪಿಎಂಸಿ ವರ್ತಕರ ಕುಂದುಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ರೈತರು ತಾವು ಬೆಳೆದ ಉತ್ಪನ್ನಗಳನ್ನು ಮಾರಾಟ ಮಾಡುವ ಚಟುವಟಿಕೆ ಗಳನ್ನು ಕೈಗೊಳ್ಳಲು ಸರಕಾರ ಕೃಷಿ ಉತ್ಪನ್ನ ಮಾರುಕಟ್ಟೆಯನ್ನು ನಿರ್ಮಿಸಿದೆ. ಮಾರುಕಟ್ಟೆಗೆ ಆಗಮಿಸುವ ರೈತರು ಹಾಗೂ ವರ್ತಕರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಅಗತ್ಯವಿರುವ ಎಲ್ಲಾ ರೀತಿಯ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕಾಗಿದೆ ಎಂದರು.

ಕೃಷಿ ಉತ್ಪನ್ನಗಳನ್ನು ಸಂರಕ್ಷಿಸಿ ಇಡಲು ಅನುಕೂಲವಾಗುವಂತೆ ಶೀತಲಗೃಹ ನಿರ್ಮಾಣ, ವೇಬ್ರಿಡ್ಜ್ ಹಾಗೂ ರೈತರಿಗೆ ತಂಗಲು ರೈತಭವನವನ್ನು ಸಹ ನಿರ್ಮಿಸುವಂತೆ ಸೂಚಿಸಿದ ಅವರು, ರೈತರಿಗೆ ಕೃಷಿ ಮಾರುಕಟ್ಟೆ ಇಲಾಖೆ ಯಿಂದ ದೊರೆಯುವ ಯೋಜನೆಗಳು ಹಾಗೂ ಸೌಲಭ್ಯಗಳ ಬಗ್ಗೆ ಅರಿವು ಮೂಡಿ ಸುವ ಕಾರ್ಯಾಗಾರಗಳನ್ನು ಕೈಗೊಳ್ಳುವುದರೊಂದಿಗೆ ಅದರ ಪ್ರಯೋಜನ ಪಡೆದುಕೊಳ್ಳುವಂತೆ ನೋಡಿಕೊಳ್ಳಬೇಕು ಎಂದರು.

ಎಪಿಎಂಸಿ ಮಾರುಕಟ್ಟೆ ಪ್ರಾಂಗಣದಲ್ಲಿ ಪರಿಸರ ರಕ್ಷಣೆ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಮರ-ಗಿಡಗಳನ್ನು ನೆಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದ ಅಬೀದ್ ಗದ್ಯಾಳ್, ಮಾರುಕಟ್ಟೆ ಪ್ರಾಂಗಣವನ್ನು ಪ್ಲಾಸ್ಟಿಕ್ ಮುಕ್ತಗೊಳಿಸುವಂತೆ ವ್ಯಾಪಾರಸ್ಥರು ಸಹಕರಿಸಬೇಕು ಎಂದರು.

ಪ್ರಾಂಗಣದಲ್ಲಿ ಎಲ್ಲಾ ರೀತಿಯ ತ್ಯಾಜ್ಯಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಅನುಕೂಲ ವಾಗುವಂತೆ ವ್ಯಾಪಾರಸ್ಥರು ಕಸಗಳನ್ನು ವಿಂಗಡಣೆ ಮಾಡಿ, ವಿಲೇವಾರಿಗೆ ನೀಡಬೇಕು. ತಪ್ಪಿದ್ದಲ್ಲಿ ಅಂತಹ ವ್ಯಾಪಾರಸ್ಥರಿಗೆ ದಂಡ ವಿಧಿಸಲಾಗುವುದು ಎಂದರು.

ಸಭೆಯಲ್ಲಿ ಎಪಿಎಂಸಿ ಕಾರ್ಯದರ್ಶಿ ಗಾಯತ್ರಿ, ರೈತರುಗಳು, ವರ್ತಕರು ಹಾಗೂ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News