ಕೋಮು ಸಂಘರ್ಷ ನಿಗ್ರಹ ವಿಶೇಷ ಕಾರ್ಯಪಡೆ ವ್ಯಾಪ್ತಿಗೆ ಉಡುಪಿ ಜಿಲ್ಲೆ ಸೇರ್ಪಡೆಗೆ ವಿರೋಧ
ಉಡುಪಿ, ಜೂ.14: ಕರಾವಳಿ ಜಿಲ್ಲೆಯ ಕೋಮು ಸಂಘರ್ಷ ನಿಗ್ರಹಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಹೊಸದಾಗಿ ರಚಿಸಿರುವ ವಿಶೇಷ ಕಾರ್ಯ ಪಡೆಯ ವ್ಯಾಪ್ತಿಗೆ ಉಡುಪಿ ಜಿಲ್ಲೆಯನ್ನು ಸೇರ್ಪಡೆಗೊಳಿಸುವ ಮೂಲಕ ರಾಜ್ಯ ಕಾಂಗ್ರೆಸ್ ಸರಕಾರ ಉಡುಪಿ ಜಿಲ್ಲೆಯ ಘನತೆಗೆ ಧಕ್ಕೆ ತರುವ ಪ್ರಯತ್ನ ಮಾಡುತ್ತಿದೆ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಆರೋಪಿಸಿದ್ದಾರೆ.
ದಕ್ಷಿಣ ಕನ್ನಡ, ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಯನ್ನು ಈ ಕಾರ್ಯಪಡೆಯ ವ್ಯಾಪ್ತಿಗೆ ರಾಜ್ಯ ಸರಾಕರ ನಿರ್ಧರಿಸಿದ್ದು, ಕಳೆದ ಹಲವು ದಶಕಗಳಿಂದ ಯಾವುದೇ ಕೋಮು ಸಂಘರ್ಷದ ಘಟನೆಗಳು ಉಡುಪಿ ಜಿಲ್ಲೆಯಲ್ಲಿ ವರದಿಯಾಗದಿ ದ್ದರೂ, ರಾಜ್ಯ ಕಾಂಗ್ರೆಸ್ ಸರಕಾರ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಅಭಿಪ್ರಾಯ ಸಲಹೆ ಪಡೆಯದೆ ಕಾನೂನು ಸುವ್ಯವಸ್ಥೆ ನಿಟ್ಟಿನಲ್ಲಿ ಯಾವುದೇ ಚರ್ಚೆ ನಡೆಸದೆ ಏಕಪಕ್ಷೀಯವಾಗಿ ಈ ಕಾರ್ಯಪಡೆಯನ್ನು ಉಡುಪಿ ಜಿಲ್ಲೆಯ ಜನತೆಯ ಮೇಲೆ ಹೇರಿದೆ ಎಂದು ಅವರು ದೂರಿದ್ದಾರೆ.
ಬುದ್ಧಿವಂತರ ಜಿಲ್ಲೆಯಾಗಿ ಗುರುತಿಸಿಕೊಂಡಿರುವ ಉಡುಪಿ ನೆರೆಯ ಜಿಲ್ಲೆಗಳಲ್ಲಿ ಕೋಮು ಸಂಘರ್ಷದ ಘಟನೆಗಳು ನಡೆದಾಗಲು ಶಾಂತಿಯುತ ವಾಗಿದ್ದು, ತಮ್ಮ ಶಿಸ್ತು, ಸಂಯಮ, ಕಾನೂನು ಪಾಲನೆ ಹಾಗೂ ರಾಷ್ಟೀಯ ವಾದಿ ಚಿಂತನೆಯ ಮೂಲಕ ಕಾನೂನು ಸುವ್ಯವಸ್ಥೆಗೆ ಸದಾ ಸಹಕಾರ ನೀಡುವ ಜಿಲ್ಲೆಯ ಜನತೆಗೆ ರಾಜ್ಯ ಸರಕಾರ ಈ ಕಾರ್ಯ ಪಡೆಯನ್ನು ಹೇರುವ ಮೂಲಕ ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆದಂತಾಗಿದೆ.
ಕೋಮು ಸಂಘರ್ಷಕ್ಕೆ ಕಾರಣವಾಗಿರುವ ಕರಾವಳಿ ಜಿಲ್ಲೆಯಲ್ಲಿ ಅವ್ಯಾಹತವಾಗಿರುವ ನಡೆಯುತ್ತಿರುವ ಗೋವುಗಳ ಕಳ್ಳತನವನ್ನು ತಡೆಯಲು ಗೋ ಹಂತಕರ ವಿರುದ್ಧ ಗೋವು ಕಳ್ಳತನ ನಿಗ್ರಹ ವಿಶೇಷ ಕಾರ್ಯಪಡೆ ಯನ್ನು ರಾಜ್ಯ ಸರ್ಕಾರ ಆರಂಭಿಸಲಿ. ಇದರಿಂದ ಜಿಲ್ಲೆಯ ಆರ್ಥಿಕ ವ್ಯವಸ್ಥೆಗೆ, ಶಿಕ್ಷಣ ಸಂಸ್ಥೆಗಳು, ಪ್ರವಾಸೋದ್ಯಮ, ಕೈಗಾರಿಕೆಗಳು, ಧಾರ್ಮಿಕ ಕೇಂದ್ರಗಳಿಗೆ ದೊಡ್ಡ ಹೊಡೆತ ನೀಡಲಿದೆ. ಉಡುಪಿ ಜಿಲ್ಲೆಯ ಹೊಟೇಲ್ ಉದ್ಯಮ, ರಿಯಲ್ ಎಸ್ಟೇಟ್, ಸಣ್ಣ ಕೈಗಾರಿಕೆ ಮೊದಲಾದ ಕ್ಷೇತ್ರದ ಉದ್ಯಮಗಳು ಆರ್ಥಿಕ ಹಿಂಜರಿತದ ಗಂಭೀರ ಸಮಸ್ಯೆ ಎದುರಿಸುವ ಸನ್ನಿವೇಶ ಸೃಷ್ಟಿಯಾಗಲಿದೆ.
ರಾಜ್ಯ ವಿಶೇಷ ಕಾರ್ಯಪಡೆಯ ವ್ಯಾಪ್ತಿಯಿಂದ ಉಡುಪಿ ಜಿಲ್ಲೆಯನ್ನು ತಕ್ಷಣ ಕೈಬಿಡ ಬೇಕು ಹಾಗೂ ದಕ್ಷಿಣ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಯ ಕಾನೂನು ಸುವ್ಯವಸ್ಥೆ ಹಾಗೂ ಅಭಿವೃದ್ದಿಯ ದೃಷ್ಟಿಯಿಂದ ವಿಶೇಷ ಕಾರ್ಯಪಡೆಯ ಔಚಿತ್ಯವನ್ನು ಪುನರ್ ವಿಮರ್ಶೆ ಮಾಡಿ ರದ್ದು ಮಾಡಬೇಕು. ಉಡುಪಿಯ ಪ್ರಜ್ಞಾವಂತ ನಾಗರಿಕರು ಜಿಲ್ಲೆಯ ಘನತೆಯನ್ನು ಕಾಪಾಡುವ ನಿಟ್ಟಿನಲ್ಲಿ ರಾಜ್ಯ ಸರಕಾರದ ಈ ನಿರ್ಧಾರವನ್ನು ಒಕ್ಕೊರಲಿನಿಂದ ವಿರೋಧಿಸಿ ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡುವ ಸಂದರ್ಭ ಬರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.