ಉಡುಪಿ ಜಿಲ್ಲಾ ಎಸ್‌ಡಿಪಿಐ ಸಂಸ್ಥಾಪನಾ ದಿನಾಚರಣೆ
ಉಡುಪಿ, ಜೂ.21: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಪಕ್ಷದ 17ನೇ ಸಂಸ್ಥಾಪನಾ ದಿನಾಚರಣೆಯ ಪ್ರಯುಕ್ತ ದ್ವಜಾರೋಹಣ ಕಾರ್ಯಕ್ರಮ ಪಕ್ಷದ ಜಿಲ್ಲಾ ಕಚೇರಿಯಲ್ಲಿ ನಡೆಯಿತು.
ಎಸ್‌ಡಿಪಿಐ ಉಡುಪಿ ಜಿಲ್ಲಾಧ್ಯಕ್ಷ ಆಸಿಫ್ ಕೋಟೇಶ್ವರ ದ್ವಜಾರೋಹಣವನ್ನು ನೆರವೇರಿಸಿದರು. ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯ ಶಾಹಿದ್ ಅಲಿ ಸಂಸ್ಥಾಪನಾ ದಿನದ ಸಂದೇಶವನ್ನು ನೀಡಿದರು.
ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಪಕ್ಷದ ವತಿಯಿಂದ ಉಡುಪಿ ಜಿಲ್ಲೆಯಾದ್ಯಂತ ವಿವಿಧ ಕಾರ್ಯ ಕ್ರಮಗಳನ್ನು ನಡೆಸಲಾಯಿತು. ಜಿಲ್ಲೆಯ ಕಾಪು, ಉಚ್ಚಿಲ, ಪಡುಬಿದ್ರಿ, ಉಡುಪಿ, ಹೂಡೆ, ಗಂಗೊಳ್ಳಿ, ಕಂಡ್ಲೂರ್ ಹಾಗೂ ಶೀರೂರಿನಲ್ಲಿ ದ್ವಜಾರೋಹಣ ಕಾರ್ಯಕ್ರಮ ನಡೆಸಲಾಯಿತು.
ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ, ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಕುಶಲೋಪರಿ ವಿಚಾರಿಸುವುದು, ಹಣ್ಣು ಹಂಪಲು ಹಾಗೂ ಸಿಹಿ ತಿಂಡಿ ವಿತರಣೆ ಮತ್ತು ಪಕ್ಷದ ಕಾರ್ಯಕರ್ತರ ಕುಟುಂಬ ಸಮ್ಮಿಲನ ಹೀಗೆ ಹಲವಾರು ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಪಕ್ಷದ ಸಂಸ್ಥಾಪನಾ ದಿನವನ್ನು ವಿಶಿಷ್ಟ ವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಹಾಗೂ ಕ್ಷೇತ್ರ ಸಮಿತಿ ನಾಯಕರು, ಕಾರ್ಯಕರ್ತರು ಉಪಸ್ಥಿತರಿದ್ದರು.