×
Ad

ಯೋಗವನ್ನು ದೈನಂದಿನ ಅಭ್ಯಾಸವಾಗಿ ಮಾಡಿಕೊಳ್ಳಿ: ಸಚಿವೆ ಹೆಬ್ಬಾಳ್ಕರ್

Update: 2025-06-21 21:20 IST

ಉಡುಪಿ, ಜೂ.21: ಇಡೀ ವಿಶ್ವವೇ ಭಾರತದ ಆರೋಗ್ಯ ಪದ್ಧತಿಯನ್ನು ಅಳವಡಿಸಿಕೊಂಡಿದೆ. ಪ್ರತಿಯೊಬ್ಬರು ಯೋಗವನ್ನು ನಿತ್ಯ ಅಭ್ಯಾಸವಾಗಿ ಅಳವಡಿಸಿಕೊಳ್ಳಬೇಕು. ಪ್ರತಿದಿನ ಕನಿಷ್ಠ 30 ನಿಮಿಷವಾದರೂ ಯೋಗ ಸಾಧನೆ ಮಾಡಬೇಕು ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಆರ್ ಹೆಬ್ಬಾಳ್ಕರ್ ಹೇಳಿದ್ದಾರೆ.

ನಗರದ ಅಜ್ಜರಕಾಡಿನ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಮುಂಜಾನೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಅಂತಾ ರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಯೋಗದಿಂದ ಮಾತ್ರ ಮನಸ್ಸಿಗೆ ಉಲ್ಲಾಸ ಸಿಗುತ್ತದೆ. ನಾನು ಕಳೆದ 25 ವರ್ಷಗಳಿಂದ ಯೋಗಾಭ್ಯಾಸ ಮಾಡುತ್ತಿದ್ದೇನೆ. ನಾನು ದಿನಕ್ಕೆ 15 ಗಂಟೆ ಕೆಲಸ ಮಾಡುವ ಸಾಮರ್ಥ್ಯದ ಹಿಂದೆ ಯೋಗವಿದೆ. ಇದೇ ಜನವರಿ 14 ರಂದು ನನಗೆ ಅಪಘಾತ ಆಯಿತು. ಬೆನ್ನು ನೋವಿನಿಂದಾಗಿ ಇಂದು ಯೋಗ ಮಾಡಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.

ನಾನು ವಾರಕ್ಕೆ ಐದು ದಿನ ಯೋಗ ಮಾಡುತ್ತೇನೆ. ಇವತ್ತಿನ ಆಧುನಿಕ ಜಗತ್ತಿನಲ್ಲಿ ಯೋಗ ಬೇಕೇಬೇಕು. ಪ್ರತಿ ದಿನ 25ರಿಂದ 50 ಸೂರ್ಯ ನಮಸ್ಕಾರ ಮಾಡುತ್ತಿದ್ದೆ. ಭುಜಂಗಾಸನ, ವೀರಭದ್ರಾಸನ, ಪ್ರಾಣಾಯಾಮ ನನ್ನ ಆರೋಗ್ಯದ ಗುಟ್ಟು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಉಡುಪಿ ಜಿಲ್ಲೆ ಎಸೆಸೆಲ್ಸಿಯಲ್ಲಿ ಎರಡನೇ, ಪಿಯುಸಿಯಲ್ಲಿ ಮೊದಲ ಸ್ಥಾನ ಪಡೆದಿದ್ದು, ಶೈಕ್ಷಣಿಕವಾಗಿ ಜಿಲ್ಲೆ ತನ್ನ ಸಾಮರ್ಥ್ಯ ಹೆಚ್ಚಿಸಿಕೊಂಡಿದೆ. ದೇಶದ ಸಂಸ್ಕೃತಿ ಆಚಾರ, ವಿಚಾರವನ್ನು ಎಲ್ಲರೂ ಅಳವಡಿಸಿಕೊಳ್ಳ ಬೇಕು. ತಂದೆ ತಾಯಂದಿರು ನಮ್ಮ ಮಕ್ಕಳೇ ನಮಗೆ ಆಸ್ತಿ ಎನ್ನುತ್ತಾರೆ. ಮಕ್ಕಳು ಕೂಡ ನಮ್ಮ ತಂದೆ ತಾಯಿಯೇ ನಮ್ಮ ಆಸ್ತಿ ಎನ್ನುವಂತೆ ಆಗಲಿ ಎಂದು ಹೇಳಿದರು.

ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿ, ಜೀವನಶೈಲಿಯಲ್ಲಿ ಯೋಗ ಅಳವಡಿಸಿಕೊಳ್ಳುವ ಮೂಲಕ ಆರೋಗ್ಯಕರ ಜೀವನ ರೂಢಿಸಿಕೊಳ್ಳಬಹುದು. ಯೋಗ ಮಾಡಲು ಯಾವುದೇ ರೀತಿಯ ವೆಚ್ಚವಾಗುವುದಿಲ್ಲ. ಇತ್ತೀಚಿಗಿನ ಜೀವನಶೈಲಿಯು ಮನುಷ್ಯನ ದೇಹ ಮತ್ತು ಮನಸ್ಸಿನ ಮೇಲೆ ಸಾಕಷ್ಟು ಒತ್ತಡ ತರುತ್ತದೆ. ಇದರಿಂದ ಮುಕ್ತರಾಗಲು ಯೋಗ ಒಂದೇ ಸರಿಯಾದ ಮಾರ್ಗವಾಗಿದೆ ಎಂದರು.

ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷ ಅಶೋಕ್ ಕೊಡವೂರು, ಉಡುಪಿ ತಾಲೂಕು ಅಧ್ಯಕ್ಷ ರಮೇಶ್ ಕಾಂಚನ್, ಪ್ರಸಾದ್‌ರಾಜ್ ಕಾಂಚನ್, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಡಿಎಫ್‌ಓ ಗಣಪತಿ ಹಾಗೂ ಇತರರು ಉಪಸ್ಥಿತರಿದ್ದರು.

ಜಿಲ್ಲಾ ಆಯುಷ್ ಅಧಿಕಾರಿ ಡಾ. ಸತೀಶ್ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೋಶನ್ ಕುಮಾರ್ ಶೆಟ್ಟಿ ನಿರೂಪಿಸಿ, ಡಾ.ಹೇಮಲತಾ ವಂದಿಸಿದರು.





 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News