×
Ad

ಸೇವಾ ನ್ಯೂನ್ಯತೆ: ಪಾಲಿಸಿದಾರರಿಗೆ ಪರಿಹಾರ ನೀಡಲು ಸ್ಟಾರ್ ಹೆಲ್ತ್‌ಗೆ ಗ್ರಾಹಕ ನ್ಯಾಯಾಲಯ ಆದೇಶ

Update: 2025-06-22 19:30 IST

ಉಡುಪಿ, ಜೂ.22: ಅನುಚಿತ ವ್ಯಾಪಾರ ಪದ್ದತಿ, ಸೇವಾ ನ್ಯೂನ್ಯತೆ ಸಾಬೀತಾಗಿರುವ ಹಿನ್ನೆಲೆಯಲ್ಲಿ ಸ್ಟಾರ್ ಹೆಲ್ತ್ ಆಂಡ್ ಅಲೈಡ್ ಇನ್ಸೂರೆನ್ಸ್ ಕಂಪೆನಿಗೆ 40,178ರೂ. ಹಾಗೂ ಶೇ.10 ಬಡ್ಡಿಯೊಂದಿಗೆ ದೂರುದಾರರಿಗೆ ಪರಿಹಾರ ಪಾವತಿಸಲು ಉಡುಪಿ ಜಿಲ್ಲಾ ಗ್ರಾಹಕ ನ್ಯಾಯಾಲಯ ಆದೇಶಿಸಿದೆ.

ತೆಂಕನಿಡಿಯೂರು ಗ್ರಾಮದ ಬೈಲಕೆರೆ ನಿವಾಸಿ ವಿಕ್ರಮ್ ಎಂಬವರು ಸ್ಟಾರ್ ಹೆಲ್ತ್ ವಿಮಾ ಕಂಪೆನಿಯ ಬಳಿ ಕೆಲವು ವರ್ಷಗಳಿಂದ ಆರೋಗ್ಯ ವಿಮಾ ಪಾಲಿಸಿಯನ್ನು ಪಡೆದುಕೊಂಡಿದ್ದು, ಕಾಲ ಕಾಲಕ್ಕೆ ಪಾಲಿಸಿಯನ್ನು ನವೀಕರಿಸುತ್ತಿ ದ್ದರು. ಈ ಮಧ್ಯೆ ಅವರು ಮೇ 22ರಂದು ಅನಾರೋಗ್ಯಕ್ಕೆ ಒಳಗಾಗಿ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದರು.

ಆದರೆ ವಿಮಾ ಕಂಪೆನಿಯು ಚಿಕಿತ್ಸೆಯ ಒಟ್ಟು ವೆಚ್ಚದಲ್ಲಿ 41,170ರೂ. ಮಾತ್ರ ಪಾವತಿಸಿ ಉಳಿದ 30178ರೂ.ವನ್ನು ಪಾವತಿಸಲಿಲ್ಲ. ವಿಕ್ರಮ್‌ಗೆ ಯಾವುದೇ ಪೂರ್ವ ಕಾಯಿಲೆ ಇಲ್ಲದಿದ್ದರೂ ಕಂಪೆನಿ ಇದೊಂದು ಪೂರ್ವ ಕಾಯಿಲೆ ಎಂದು ಕಾರಣ ನೀಡಿ ಬಾಕಿ ಮೊತ್ತ ಪಾವತಿಸಲು ನಿರಾಕರಿಸಿತ್ತು.

ನೊಂದ ಗ್ರಾಹಕರು ನ್ಯಾಯಕ್ಕಾಗಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ನ್ಯಾಯಾಲಯಕ್ಕೆ ದೂರು ಅರ್ಜಿಯನ್ನು ಸಲ್ಲಿಸಿದ್ದು, ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ನ್ಯಾಯಾಲಯವು ಪೂರ್ವ ಕಾಯಿಲೆಯನ್ನು ಸಾಬೀತು ಪಡಿಸಲು ಎದುರುದಾರ ವಿಮಾ ಕಂಪೆನಿಯು ವಿಫಲವಾಗಿರುವು ದಾಗಿ ಅಭಿಪ್ರಾಯಪಟ್ಟು, ದೂರುದಾರರ ಅರ್ಜಿಯನ್ನು ಪುರಸ್ಕರಿಸಿತು.

ದೂರುದಾರರಿಗೆ ನೀಡಲು ಬಾಕಿ ಇರುವ ಕ್ಲೇಮು ಮೊತ್ತ 30178ರೂ.ನ್ನು ಕ್ಲೇಮು ನಿರಾಕರಿಸಿದ ಮೇ 25ರಿಂದ ಶೇ.10 ವಾರ್ಷಿಕ ಬಡ್ಡಿಯಂತೆ ಸಂಪೂರ್ಣ ಹಣ ತೀರುವಳಿಯಾಗುವವರೆಗೂ ನೀಡಬೇಕು. ಅಲ್ಲದೇ ಪ್ರತೀವಾದಿಗಳು ಜಂಟಿಯಾಗಿ ಅಥವಾ ಪ್ರತ್ಯೇಕವಾಗಿ ದೂರುದಾರರಿಗೆ ಆದ ಮಾನಸಿಕ ಹಿಂಸೆಗೆ ಮತ್ತು ವ್ಯಾಜ್ಯ ಖರ್ಚುಗಳು ಒಟ್ಟಾಗಿ 10000ರೂ. ಆದೇಶದ ಪ್ರತಿ ತಲುಪಿದ 30 ದಿನಗಳೊ ಳಗಾಗಿ ಪಾಲಿಸಬೇಕು ಎಂದು ಅಧ್ಯಕ್ಷೆ ಸುನೀಲ ತಿಮಾಸರೆಡ್ಡಿ ಹಾಗೂ ಸದಸ್ಯೆ ಸುಜಾತ ಬಿ.ಕೋರಳ್ಳಿ ಅವರನ್ನು ಒಳಗೊಂಡ ಉಡುಪಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ನ್ಯಾಯ ಪೀಠವು ಆದೇಶಿಸಿದೆ. ದೂರುದಾರರ ಪರವಾಗಿ ನ್ಯಾಯವಾದಿ ವಿವೇಕಾನಂದ ಮಲ್ಯ ಕಾರ್ಕಳ ವಾದ ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News