ಹೋಮ್ ನರ್ಸ್‌ನಿಂದ ಮನೆಯಲ್ಲಿನ ಸೊತ್ತು ಕಳವು: ಪ್ರಕರಣ ದಾಖಲು
ಕೋಟ, ಜು.21: ವೃದ್ಧರೊಬ್ಬರನ್ನು ನೋಡಿಕೊಳ್ಳಲು ನೇಮಕ ಮಾಡಲಾಗಿದ್ದ ಹೋಮ್ ನರ್ಸ್ ಮನೆಯಲ್ಲಿದ್ದ ಚಿನ್ನಾಭರಣ, ನಗದು ಹಾಗೂ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಪಾಂಡೇಶ್ವರ ಗ್ರಾಮದ ಸಿಪ್ರಿಯನ್ ಡಿ ಅಲ್ಮೆಡಾ ಎಂಬವರ ತಾಯಿ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದು, ಅವರನ್ನು ನೋಡಿಕೊಳ್ಳಲು ಏಜೆನ್ಸಿ ಮೂಲಕ ಹೋಂ ನರ್ಸ್ ಆಗಿ ಸಾಗರ ತಾಲೂಕಿನ ಚಾಮಗಾರ ಕೇರಿ ನಿವಾಸಿ ಶೀಲ ನೇಮಿಸಲಾಗಿತ್ತು. ಶೀಲ ಮೇ 27ರಂದು ಆಕೆಯ ಮಗನಿಗೆ ಆರೋಗ್ಯ ಸರಿಯಿಲ್ಲದ ಎಂದು ಊರಿಗೆ ಹೋಗಿದ್ದಳು. ಮೇ28ರಂದು ಸಿಪ್ರಿಯನ್ ತಾಯಿಯ ಕೋಣೆಗೆ ಹೋಗಿ ಕಪಾಟಿನಲ್ಲಿ ಲಾಕರ್ ತೆಗೆದು ನೋಡಿದಾಗ ಡ್ರಾವರ್‌ನಲ್ಲಿದ್ದ 5,00,000ರೂ. ಅಧಿಕ ಮೌಲ್ಯದ ಚಿನ್ನದ ಒಡವೆಗಳು, 87,000ರೂ. ನಗದು, 1,10,000ರೂ. ಮೌಲ್ಯ ಚೂರಿ ಸೆಟ್ ಹಾಗೂ 78,000ರೂ. ಮೌಲ್ಯದ ಪಾತ್ರೆ ಸೆಟ್‌ಗಳನ್ನು ಕಳವು ಆಗಿರುವುದು ಕಂಡುಬಂದಿದೆ.
ನಂತರ ಇದೇ ವಿಷಯದಲ್ಲಿ ಸಿಪ್ರಿಯನ್ ಆರೋಪಿತರನ್ನು ಸಂಪರ್ಕಿಸಿ ಆನಂದಪುರ ಪೊಲೀಸ್ ಠಾಣೆಗೆ ಕರೆಯಿಸಿ ಮಾತುಕತೆ ನಡೆಸಿದ್ದು, ಅವರು ಕಳವು ಮಾಡಿಕೊಂಡು ಹೋದ ಬಗ್ಗೆ ತಪ್ಪೊಪ್ಪಿಕೊಂಡಿದ್ದರು. ಅದರಲ್ಲಿ 1,30,000ರೂ. ಹಣದ ಬ್ರಾಸ್ಲೈಟ್ ಹಾಗೂ 40,000ರೂ. ಹಣವನ್ನು ವಾಪಾಸು ಸಿಪ್ರಿಯನ್‌ಗೆ ನೀಡಿದ್ದು ಆದರೆ ಉಳಿದ ಹಣ ಮತ್ತು ಒಡವೆಯನ್ನು ಈವರೆಗೂ ಕೊಡದೇ ಮೋಸ ಮಾಡಲಾಗಿದೆ ಎಂದು ದೂರಲಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.