×
Ad

ಉಪ್ಪುಂದ: ಸಮುದ್ರದ ಅಲೆಗಳ ಅಬ್ಬರಕ್ಕೆ ಮಗುಚಿದ ದೋಣಿ

Update: 2025-08-03 20:24 IST

ಬೈಂದೂರು, ಆ.3: ಸಮುದ್ರದ ಭಾರೀ ಅಲೆಗೆ ಸಿಲುಕಿದ ಮೀನುಗಾರಿಕಾ ದೋಣಿಯೊಂದು ಮಗುಚಿ ಬಿದ್ದಿದ್ದು, ಇದರಲ್ಲಿದ್ದ 9 ಮೀನುಗಾರರು ಲೈಫ್ ಜಾಕೇಟ್ ಧರಿಸಿದ್ದರಿಂದ ಅಪಾಯದಿಂದ ಪಾರಾಗಿ ದಡ ಸೇರಿದ ಘಟನೆ ಬೈಂದೂರು ತಾಲೂಕಿನ ಉಪ್ಪುಂದ ಮಡಿಕಲ್ ಎಂಬಲ್ಲಿ ರವಿವಾರ ಬೆಳಗ್ಗೆ ನಡೆದಿದೆ.

ಉಪ್ಪುಂದ ಮೂಲದ ಚಂದ್ರ ಖಾರ್ವಿ, ಪ್ರಮೋದ್, ಪ್ರಜ್ವಲ್, ಗೌತಮ್, ಭಾಸ್ಕರ, ಯೋಗಿರಾಜ್, ಗೋವಿಂದ, ಬಾಬು ಖಾರ್ವಿ, ದೀಪಕ್ ಅಪಾಯ ದಿಂದ ಪಾರಾದ ಮೀನುಗಾರರು. ಇವರೆಲ್ಲ ಬೆಳಗ್ಗೆ 11 ಗಂಟೆ ಸುಮಾರಿಗೆ ಉಪ್ಪುಂದ ಶಾರದಾ ಖಾರ್ವಿ ಎಂಬವರ ಮಾಲೀಕತ್ವದ ಶಿವಪ್ರಸಾದ್ ದೋಣಿಯು ಮೀನುಗಾರಿಕೆಗೆ ತೆರಳಿದ್ದರು. ಮಡಿಕಲ್ ಎಲ್.ಪಿ. ಸಮೀಪ ಸಮುದ್ರದ ಅಲೆಗಳ ರಭಸಕ್ಕೆ ದೋಣಿ ಮಗುಚಿ ಬಿತ್ತೆನ್ನಲಾಗಿದೆ.

ಇದರಿಂದ ದೋಣಿಯಲ್ಲಿದ್ದ ಎಲ್ಲ 9 ಮಂದಿ ಮೀನುಗಾರರು ಕೂಡ ನೀರಿಗೆ ಬಿದ್ದರು. ಎಲ್ಲ ಮೀನುಗಾರರು ಲೈಪ್ ಜಾಕೆಟ್ ಧರಿಸಿದ್ದರಿಂದ ಸಮುದ್ರದಲ್ಲಿ ಈಜುತ್ತಿದ್ದರು. ಕೂಡಲೇ ದಡದಲ್ಲಿದ್ದ ಇತರೆ ಮೀನುಗಾರರು ರೋಪ್ ನೀಡಿ ಅವರನ್ನು ಸುರಕ್ಷಿತವಾಗಿ ದಡ ಸೇರಿದರು. ದೋಣಿ ಮಗುಚಿದ ರಭಸಕ್ಕೆ ದೋಣಿಗೆ ಹಾನಿಯಾಗಿದ್ದಲ್ಲದೆ ಎಂಜಿನ್, ದೋಣಿಯಲ್ಲಿದ್ದ ಬಲೆ ಹಾಗೂ ಲಕ್ಷಾಂತರ ರೂ. ಮೌಲ್ಯದ ಸಲಕರಣೆಗಳು ನಷ್ಟವಾಗಿದೆ ಎಂದು ತಿಳಿದು ಬಂದಿದೆ.

ಕರಾವಳಿ ಕಾವಲು ಪೊಲೀಸ್ ಠಾಣೆಯ ಉಪನಿರೀಕ್ಷಕ ಸುಬ್ರಹ್ಮಣ್ಯ ಹಾಗೂ ಸಿಬ್ಬಂದಿ ರಾಘವೇಂದ್ರ ದೇವಾಡಿಗ, ಈಶ್ವರ, ನಾಗೇಶ್, ಸತೀಶ್, ರಮೇಶ್, ವಿಜಯ, ಕೆಎನ್‌ಡಿ ಸಿಬ್ಬಂದಿಗಳಾದ ಗಿರೀಶ್, ಜಯರಾಜ್ ಸ್ಥಳಕ್ಕೆ ಭೇಟಿ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News