ಭಾರತದ ಪುರುಷರ ವೀರ್ಯದ ಗುಣಮಟ್ಟದಲ್ಲಿ ಕುಸಿತ ಕಂಡುಬಂದಿಲ್ಲ: ಕೆಎಂಸಿ ತಜ್ಞರಿಂದ ಅಧ್ಯಯನ
► ದಕ್ಷಿಣ ಭಾರತದಲ್ಲಿ ನಡೆದ ಸಮಗ್ರ ಅಧ್ಯಯನದಿಂದ ಬಹಿರಂಗ ► ಜಾಗತಿಕ ಆತಂಕಕ್ಕೆ ವ್ಯತಿರಿಕ್ತ ಫಲಿತಾಂಶ
ಪ್ರೊ.ಸತೀಶ್ ಅಡಿಗ
ಉಡುಪಿ, ಅ.23: ಜಾಗತಿಕ ಮಟ್ಟದಲ್ಲಿ ಪುರುಷರ ವೀರ್ಯದ ಗುಣಮಟ್ಟ ಹಾಗೂ ಫಲವಂತಿಕೆಯಲ್ಲಿ ಕುಸಿತ ಕಂಡುಬರುತ್ತಿದೆ ಎಂಬ ವ್ಯಾಪಕ ಕಳವಳ, ಆತಂಕಕ್ಕೆ ವ್ಯತಿರಿಕ್ತವಾಗಿ ದಕ್ಷಿಣಭಾರತದ ರಾಜ್ಯಗಳಲ್ಲಿ ನಡೆಸಿದ ಸಮಗ್ರ ಅಧ್ಯಯನದಲ್ಲಿ ಕಳೆದ 17 ವರ್ಷಗಳಲ್ಲಿ ಭಾರತೀಯ ಪುರುಷರ ಫಲವಂತಿಕೆ ಯಲ್ಲಿ, ವೀರ್ಯದ ಗುಣಮಟ್ಟದಲ್ಲಿ ಯಾವುದೇ ರೀತಿಯ ಕುಸಿತದ ಸಾಕ್ಷಿಗಳು ಪತ್ತೆಯಾಗಿಲ್ಲ.
ಮಣಿಪಾಲದ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ)ಯ ಆಡಳಿತಕ್ಕೊಳಪಟ್ಟ ಕಸ್ತೂರ್‌ಬಾ ಮೆಡಿಕಲ್ ಕಾಲೇಜಿನ ತಜ್ಞರ ತಂಡ ದಕ್ಷಿಣ ಭಾರತದ ರಾಜ್ಯಗಳಲ್ಲಿ ನಡೆಸಿದ ಅಧ್ಯಯನದಿಂದ ಕಳೆದ 17 ವರ್ಷ ಗಳಲ್ಲಿ ಭಾರತೀಯ ಪುರುಷರ ವೀರ್ಯದ ಗುಣಮಟ್ಟದಲ್ಲಿ ಯಾವುದೇ ಯಾವುದೇ ಮಹತ್ವದ ವ್ಯತ್ಯಾಸ ಕಂಡು ಬಂದಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಅಧ್ಯಯನದ ವರದಿಯನ್ನು ‘ಅಮೆರಿಕನ್ ಜರ್ನಲ್ ಆಫ್ ಮೆನ್ಸ್ ಹೆಲ್ತ್’ನಲ್ಲಿ ಪ್ರಕಟಿಸಲಾಗಿದೆ. 2006ರಿಂದ 2022ರ ಅವಧಿಯ ನಡುವೆ ಫಲವತ್ತತೆಯ ಮೌಲ್ಯಮಾಪನಕ್ಕಾಗಿ ವಿಶ್ವವಿದ್ಯಾನಿಲಯದ ಆಂಡ್ರಾಲಜಿ ಪ್ರಯೋಗಾಲಯಕ್ಕೆ ಭೇಟಿ ನೀಡಿದ 12ಸಾವಿರ ಪುರುಷರ ವೀರ್ಯದ ವಿಶ್ಲೇಷಣೆಯಿಂದ ಗೊತ್ತಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಭಾರತದಲ್ಲಿ ಈ ವಿಷಯದ ಕುರಿತಂತೆ ನಡೆದ ಅತ್ಯಂತ ದೊಡ್ಡ ಅಧ್ಯಯನ ಇದಾಗಿದೆ. ಸಂಶೋಧನೆಯ ವೇಳೆ ವೀರ್ಯದ ಮಾನದಂಡಗಳಾದ ವೀರ್ಯದ ಎಣಿಕೆ, ಚಲನಶೀಲತೆ, ಜೀವಶಕ್ತಿ ಹಾಗೂ ವೀರ್ಯದ ರಚನೆಯ ಗುಣಮಟ್ಟದ ಮೌಲ್ಯಮಾಪನವನ್ನು ನಡೆಸಲಾಗಿತ್ತು. ಇದರಿಂದ ಹೊರಹೊಮ್ಮಿದ ಅಂಕಿಅಂಶಗಳನ್ನು ವಿಶ್ಲೇಷಣೆ ಗೊಳಪಡಿಸಿದಾಗ ಕಳೆದ 17 ವರ್ಷಗಳಲ್ಲಿ ವೀರ್ಯದ ಗುಣಮಟ್ಟದಲ್ಲಿ ಗಮನಾರ್ಹ, ಗುರುತಿಸಬ ಹುದಾದ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಇದು ಜಾಗತಿಕ ಮಟ್ಟದಲ್ಲಿ ಕಂಡುಬಂದಿದೆ ಎಂದು ಹೇಳಲಾದ ಟ್ರೆಂಡ್‌ಗೆ ವ್ಯತಿರಿಕ್ತವಾಗಿದೆ. ಇದರಿಂದ ವೀರ್ಯದ ಗುಣಮಟ್ಟದಲ್ಲಿ ಕುಸಿತ ಕಂಡುಬಂದಿದೆ ಎಂಬುದು ಜಾಗತಿಕವಾಗಿ ವಿದ್ಯಾಮಾನವಲ್ಲ ಎಂಬುದು ಖಚಿತವಾಗಿದೆ ಎಂದು ವರದಿ ತಿಳಿಸಿದೆ.
ಈ ಮಹತ್ವದ ಸಂಶೋಧನೆಯ ಪ್ರಾಮುಖ್ಯತೆ ಕುರಿತಂತೆ ವಿವರಿಸಿದ ಕೆಎಂಸಿ ಮಣಿಪಾಲದ ಡೀನ್ ಡಾ.ಅನಿಲ್ ಭಟ್, ವಿಜ್ಞಾನದ ಈ ಕ್ಷೇತ್ರದ ದೀರ್ಘಕಾಲದ ಡೇಟಾ ಅಪರೂಪದ್ದಾಗಿದೆ. ರೋಗಿಗಳ ಕೌನ್ಸಿಲಿಂಗ್ ವೇಳೆ ಇದು ಅಮೂಲ್ಯವಾಗಿದೆ. ಭಾರತೀಯ ಸಂದರ್ಭದಲ್ಲಿ ಪುರುಷರ ಫಲವಂತಿಕೆಯ ಆರೋಗ್ಯವನ್ನು ಅರಿತುಕೊಳ್ಳುವಲ್ಲಿ ಈ ಅಧ್ಯಯನ ವಿಶೇಷ ಮಹತ್ವವನ್ನು ಪಡೆದಿದೆ ಎಂದರು.
ಕೆಎಂಸಿಯ ಸಂಶೋದನೆಯ ಕುರಿತು ಪ್ರತಿಕ್ರಿಯೆ ನೀಡಿದ ಮಾಹೆಯ ಪ್ರೊ ವೈಸ್ ಚಾನ್ಸಲರ್ (ಹೆಲ್ತ್ ಸಾಯನ್ಸ್) ಡಾ.ಶರತ್ ರಾವ್, ಪಬ್ಲಿಕ್ ಹೆಲ್ತ್‌ಗೆ ಸಂಬಂಧಿಸಿದಂತೆ ಡಾಟಾ ಆಧಾರಿತ ಸಂಧೋದನೆ, ಉನ್ನತ ಗುಣಮಟ್ಟದ ಅಧ್ಯಯನದ ಕುರಿತಂತೆ ಮಾಹೆಯ ಬದ್ಧತೆಗೆ ಇಂದು ಸಾಕ್ಷಿಯಾಗಿದೆ. ಈ ವಿಷಯದಲ್ಲಿ ಮುನ್‌ಸ್ಟರ್ ವಿವಿಯೊಂದಿ ಗಿನ ಸಹಯೋಗ ಫಲವತ್ತತೆಯ ನಿರ್ವಹಣೆಯಲ್ಲಿ ಜಾಗತಿಕ ಮಟ್ಟದಲ್ಲಿ ನಮಗೊಂದು ಸ್ಥಾನ ದೊರಕಿಸಿ ಕೊಟ್ಟಿದೆ ಎಂದರು.
ಕೆಎಂಸಿಯ ಈ ಅಧ್ಯಯನ ವರದಿಯ ಸಹಲೇಖಕ ಹಾಗೂ ಜರ್ಮನಿಯ ಮುನ್‌ಸ್ಟರ್ ವಿವಿಯ ಸೆಂಟರ್ ಫಾರ್ ರಿಪ್ರೊಡಕ್ಟವ್ ಮೆಡಿಸಿನ್ ಆ್ಯಂಡ್ ಆಂಡ್ರಾಲಜಿಯ ನಿರ್ದೇಶಕ ಪ್ರೊ.ಸ್ಟಿಫನ್ ಸ್ಕಾಲೆಟ್ ಅವರು ಪ್ರತಿಕ್ರಿಯಿಸಿ ‘ಭಾರತದ ಈ ದೀರ್ಘಕಾಲದ ಡಾಟಾಸೆಟ್ ವೈಜ್ಞಾನಿಕವಾಗಿ ಅತ್ಯಂತ ಮಹತ್ವವನ್ನು ಹೊಂದಿದೆ. ಇದು ‘ವೀರ್ಯ ಬಿಕ್ಕಟ್ಟಿನ’ ಕುರಿತಂತೆ ಜಾಗತಿಕ ಮಟ್ಟದ ಇಂದಿನ ಸಾಮಾನ್ಯ ನಂಬಿಕೆಯನ್ನು ಹುಸಿಗೊಳಿಸಿದೆ ಹಾಗೂ ಪುರುಷರ ವಂಶಾಭಿವೃದ್ಧಿ ಆರೋಗ್ಯದ ಕುರಿತು ತಿಳಿದುಕೊಳ್ಳಲು ಪ್ರಾದೇಶಿಕ ಮಟ್ಟದ ಡಾಟಾದ ಮಹತ್ವವನ್ನು ಸೂಚಿಸುತ್ತದೆ ಎಂದಿದ್ದಾರೆ.
ಸಂಶೋಧನಾ ತಂಡದಲ್ಲಿ ಕೆಎಂಸಿಯ ಡಾ.ಮಿಟೈ, ಡಾ.ಧಾಕ್ಷನ್ಯ, ಡಾ.ಶುಭಶ್ರೀ ಹಾಗೂ ಜರ್ಮನಿ ವಿವಿಯ ತಜ್ಞರು ಇದ್ದರು.
ಆತಂಕಕ್ಕೆ ಕಾರಣವಿಲ್ಲ: ಪ್ರೊ.ಸತೀಶ್ ಅಡಿಗ
ಈ ಮಹತ್ವದ ಅಧ್ಯಯನ ತಂಡದ ನೇತೃತ್ವ ವಹಿಸಿದವರು ಕೆಎಂಸಿ ಮಣಿಪಾಲದ ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಕ್ಲಿನಿಕಲ್ ಎಂಬ್ರಾಯಲಜಿ ಮುಖ್ಯಸ್ಥ ಪ್ರೊ.ಸತೀಶ್ ಅಡಿಗ. ‘ನಮ್ಮ ಅಧ್ಯಯನದಿಂದ ಅತ್ಯಂತ ಸ್ಪಷ್ಟವಾಗಿ ಗೊತ್ತಾಗಿ ರುವ ಅಂಶವೆಂದರೆ ದೇಶದ ದಕ್ಷಿಣ ಭಾರತ ರಾಜ್ಯಗಳ ಪುರುಷರ ವೀರ್ಯದ ಗುಣಮಟ್ಟದಲ್ಲಿ ಅಪಾಯಕಾರಿ ಮಟ್ಟದ ಕುಸಿತವಾಗಿಲ್ಲ. ಇದರಲ್ಲಿ ಆತಂಕಕ್ಕೂ ಕಾರಣವಿಲ್ಲ ಎಂದು ಪ್ರೊ.ಅಡಿಗ ತಿಳಿಸಿದರು.
ಹೆಚ್ಚುತ್ತಿರುವ ಪುರುಷರ ಬಂಜೆತನ ಅತ್ಯಂತ ಆತಂಕಕಾರಿ ಬೆಳವಣಿಗೆ ಯಾಗಿದ್ದರೆ, ನಮ್ಮ ಸಂಶೋಧನೆ ಇದಕ್ಕೆ ವ್ಯತಿರಿಕ್ತ ಸೂಚನೆ ನೀಡಿದೆ. ಪುರುಷರ ಬಂಜೆತನ ಹೆಚ್ಚಲು, ವೀರ್ಯದ ಗುಣಮಟ್ಟ ಕುಸಿಯಲು ಇತರ ಕಾರಣಗಳೂ ಇರಬಹುದು ಎಂಬುದನ್ನು ನಮ್ಮ ಅಧ್ಯಯನ ಸೂಚಿಸುತ್ತದೆ ಎಂದರು.