ನುಡಿಯೊಲವು, ನಾಡೊಲವು ತಲೆಗೇರಿದ ಅಫೀಮಲ್ಲ: ಡಾ.ಮಹಾಬಲೇಶ್ವರ ರಾವ್
ಉಡುಪಿ: ನುಡಿಯೊಲವು, ನಾಡೊಲವು ತಲೆಗೇರಿದ ಅಫೀಮಲ್ಲ. ಹಾಗಾಗಕೂಡದು. ಹಿಡಿದ ಬಾವುಟ, ಕೊರಳಿಗೇರಿದ ಶಾಲು ಮತ್ತು ಜಯಕಾರದಿಂದ ಕನ್ನಡದ ಅಭಿವೃದ್ಧಿಯಾಗದು ಎಂದು ಖ್ಯಾತ ಶಿಕ್ಷಣ ತಜ್ಞ ಡಾ.ಮಹಾಬಲೇಶ್ವರ ರಾವ್ ಹೇಳಿದ್ದಾರೆ.
ಉಡುಪಿಯ ಡಾ ಟಿಎಂಎ ಪೈ ಶಿಕ್ಷಣ ಕಾಲೇಜಿನಲ್ಲಿ ಎರಡನೆಯ ಸೆಮಿಸ್ಟರ್‌ನ ಕನ್ನಡ ಬೋಧನ ವಿಧಾನ ಶಾಸ್ತ್ರದ ವಿದ್ಯಾರ್ಥಿ- ಶಿಕ್ಷಕರು ಈಚೆಗೆ ಕನ್ನಡ ನಾಡುನುಡಿ ಕುರಿತಾದ ನೀಡಿದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಡಾ.ಮಹಾ ಬಲೇಶ್ವರ ರಾವ್ ಮಾತನಾಡುತಿದ್ದರು.
‘ಅದು ಹುಸಿ ಭಾಷಾ ಪ್ರೇಮ. ಕನ್ನಡದ ಅಭಿಮಾನವೆಂದರೆ ಕನ್ನಡ ನೆಲ, ಜಲ, ಜನ, ನಾಡು, ನುಡಿಯ ಚಿಂತನೆ. ಎಲ್ಲ ನಿತ್ಯ ವ್ಯವಹಾರಗಳಲ್ಲಿ ಕನ್ನಡತನ ಮೈಗೂಡಿಸಿಕೊಂಡ ಸಹಿಷ್ಣುತೆಯ ನಡವಳಿಕೆ. ಕನ್ನಡವನ್ನು ಹೆಚ್ಚುಹೆಚ್ಚು ಬಳಸುತ್ತ ಅದನ್ನು ಬೆಳೆಸಬೇಕು ಎಂದು ಅವರು ಹೇಳಿದರು.
ವಿದ್ಯಾರ್ಥಿ- ಶಿಕ್ಷಕರು ಕನ್ನಡಗೀತೆಗಳನ್ನು ಹಾಡಿ ಕುಣಿದರು. ವ್ಯಾಕರಣದ ಬಗ್ಗೆ ಮತ್ತು ಕಾರಂತರ ‘ಮೂಕಜ್ಜಿಯ ಕನಸು ಗಳು’ ಕಾದಂಬರಿ ಬಗ್ಗೆ ಕಿರು ರೂಪಕಗಳನ್ನು ಪ್ರಸ್ತುತ ಪಡಿಸಿದರು. ಸ್ವರಚಿತ ಕವನ ವಾಚನ, ಗಮಕ ವಾಚನ ಮತ್ತು ಕನ್ನಡ ಸಾಹಿತ್ಯ ನಡೆದು ಬಂದ ದಾರಿಯ ಬಗ್ಗೆ ಪ್ರಬಂಧ ಮಂಡನೆ ನಡೆಯಿತು.
ಶಿಕ್ಷಕ ವಿದ್ಯಾರ್ಥಿನಿ ಶ್ವೇತಾ ಸ್ವಾಗತ ಕೋರಿದರೆ, ಲಾವಣ್ಯ ವಂದಿಸಿದರು. ಸುಮಂತ್ ಪೂಜಾರಿ ಕಾರ್ಯಕ್ರಮ ನಿರೂಪಣೆ ಮಾಡಿದರು.