ಅಸಂಘಟಿತ ಕಾರ್ಮಿಕರ ಭದ್ರತೆಗೆ ಯುನಿವರ್ಸಲ್ ಕಾರ್ಡ್ ತರುವ ಚಿಂತನೆ: ಕಾರ್ಮಿಕ ಸಚಿವ ಸಂತೋಷ್ ಲಾಡ್
ಉಡುಪಿ, ನ.20: ಸೆಸ್‌ನಲ್ಲಿ ಸಂಗ್ರಹವಾದ ಹಣ ಕಟ್ಟಡ ಕಾರ್ಮಿಕರಿಗೆ, ಸಾರಿಗೆ ಕ್ಷೇತ್ರದಲ್ಲಿ ದುಡಿಯುವರಿ ಮಾತ್ರ ದೊರೆಯುತ್ತಿದೆ. ಆದರೆ ಟೈಲರ್, ಕೂಲಿಕಾರ್ಮಿಕರು, ನೇಕಾರರು, ಹೊಟೇಲ್ ಕಾರ್ಮಿಕರು ಸೇರಿದಂತೆ ಅಸಂಘಟಿತ ವಲಯದಲ್ಲಿರುವ ಕಾರ್ಮಿಕರಿಗೆ ಯಾವುದೇ ಪ್ರಯೋಜ ಸಿಗುತ್ತಿಲ್ಲ. ಅದಕ್ಕಾಗಿ ಎಲ್ಲಾ ಅಸಂಘಟಿತ ಕಾರ್ಮಿಕರಿಗೆ ಭದ್ರತೆ ನೀಡಲು ಯುನಿವರ್ಸಲ್ ಕಾರ್ಡ್ ತರುವ ಚಿಂತನೆ ಸರಕಾರದ ಮುಂದೆ ಇದೆ ಎಂದು ಕಾರ್ಮಿಕ ಇಲಾಖೆ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾರ್ಮಿಕರ ಮಕ್ಕಳ ವಿದ್ಯಾರ್ಥಿ ವೇತನವನ್ನು ಸರಕಾರ ಕಡಿತ ಮಾಡಿಲ್ಲ. 2021ರಲ್ಲಿ 2,000ರೂ. ನೀಡಲಾಗುತ್ತಿದ್ದ ವಿದ್ಯಾರ್ಥಿ ವೇತನವನ್ನು ಹಿಂದಿನ ಸರಕಾರ ಏಕಾಏಕಿ 8000ರೂ.ಗೆ ಏರಿಸಿತು. 10000ರೂ. ನೀಡುವವರಿಗೆ 30,000ರೂ.. 30ಸಾವಿರ ರೂ. ಕೊಡುವವರಿಗೆ ಒಂದು ಲಕ್ಷ ರೂ. ನೀಡಿತು. ಈ ಏರಿಕೆಯು ಅವೈಜ್ಞಾನಿಕವಾಗಿದ್ದು, ಇದಕ್ಕೆ ಯಾವುದೇ ವೈಜ್ಞಾನಿಕ ಕಾರಣಗಳು ಇರಲಿಲ್ಲ ಎಂದು ಸ್ಪಷ್ಟನೆ ನೀಡಿದರು.
ಕಳೆದ ಮೂರು ವರ್ಷಗಳಲ್ಲಿ ಏಕಾಏಕಿ 39 ಲಕ್ಷ ಕಾರ್ಡ್‌ಗಳಿಗೆ ಬಂದಿದ್ದು, ಈಗ ಅದರ ಸಂಖ್ಯೆ 46 ಲಕ್ಷಕ್ಕೆ ಏರಿಕೆಯಾಗಿದೆ. ಹಾವೇರಿಯಂತಹ ಒಂದೇ ಜಿಲ್ಲೆಯಲ್ಲಿ ಮೂರು ಲಕ್ಷ ಕಾರ್ಡುಗಳಿವೆ. ಇದರಲ್ಲಿ ಅನೇಕ ನಕಲಿ ಕಾರ್ಡು ಗಳಿವೆ. ಈ ಬಾರಿ ವಿದ್ಯಾರ್ಥಿ ವೇತನಕ್ಕೆ 13 ಲಕ್ಷ ಅರ್ಜಿಗಳು ಬಂದಿವೆ. ಎಲ್ಲ ಅರ್ಜಿಗಳನ್ನು ಪರಿಶೀಲಿಸಿ 9 ಲಕ್ಷ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಿದ್ದೇವೆ. ಅವರಿಗೆಲ್ಲ ಸಮಾಜ ಕಲ್ಯಾಣ ಇಲಾಖೆಯ ಮಾದರಿಯಲ್ಲೇ ವೈಜ್ಞಾನಿಕವಾಗಿ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ ಎಂದರು.
ಈ ಬಾರಿ ಮೋದಿ ಸರಕಾರ ಕೇಂದ್ರದಲ್ಲಿ ಬರುವುದಿಲ್ಲ. ಮೋದಿ ಸರಕಾರ ಬರದೆ ಇರಲು ಅನೇಕ ಕಾರಣಗಳಿವೆ. ಬಿಜೆಪಿ ನಾಯಕರ ಜೊತೆ ಈ ಬಗ್ಗೆ ಬಹಿರಂಗ ಚರ್ಚೆಗೆ ನಾನು ಸಿದ್ಧನಿದ್ದೇನೆ. ವಿವಾದಗಳನ್ನು ಬಿಟ್ಟು ಅಭಿವೃದ್ಧಿ ವಿಚಾರ ಇಟ್ಟುಕೊಂಡು ಚರ್ಚೆ ಮಾಡಬೇಕಾಗಿದೆ ಎಂದು ಸಚಿವ ಸಂತೋಷ್ ಲಾಡ್ ಸವಾಲು ಹಾಕಿದರು.
ನೋಟ್ ಅಮಾನ್ಯ, ಜಿಡಿಪಿ, ಡಾಲರ್, ಸ್ಮಾಟ್ ಸಿಟಿ, ಬುಲೆಟ್ ಟ್ರೈನ್ ಸೇರಿದಂತೆ ವಿವಿಧ ಅಭಿವೃದ್ಧಿ ವಿಚಾರದಲ್ಲಿ ಚರ್ಚೆಗೆ ಬರುವುದಾದರೆ ನಾನು ತಯಾರಿದ್ದೇನೆ. 2004 ರಿಂದ 2014ರವರೆಗೆ ನಮ್ಮ ಜಿಡಿಪಿ ಶೇ.183 ಇದ್ದರೆ, ಕಳೆದ 9 ವರ್ಷಗಳಲ್ಲಿ ಕೇವಲ ಶೇ.83 ಇದೆ. ತಾಂತ್ರಿಕ ಮತ್ತು ಅಂಕಿಅಂಶ ವಿಚಾರ ಇಟ್ಟುಕೊಂಡು ಚರ್ಚೆಗಳು ನಡೆಯಬೇಕಾಗಿವೆ, ನೋಟು ಅಮಾನ್ಯದ ಬಳಿಕ ಭಯೋತ್ಪದಾನೆ ನಡೆದಿಲ್ಲವೇ. ಪುಲ್ವಾಮಾ ದಾಳಿ ಆಗಲಿಲ್ಲವೇ. 300ಕೆಜಿ ಆರ್‌ಡಿಎಕ್ಸ್ ಎಲ್ಲಿಂದ ಬಂತು. ಈ ಕುರಿತು ಚರ್ಚೆಗಳು ನಡೆಯಬೇಕು ಎಂದರು.
‘ಧಾರವಾಡ ಜಿಲ್ಲೆಯಿಂದ ಅನೇಕ ಮಂದಿ ಕಾಂಗ್ರೆಸ್ ಸೇರ್ಪಡೆಗೆ ಸಿದ್ಧರಾಗಿ ದ್ದಾರೆ. ಈಗಲೇ ನಾನು ಹೆಸರು ಬಹಿರಂಗಪಡಿಸಲ್ಲ. ನಾಲ್ಕೈದು ಮುಖಂಡರು ಕಾಂಗ್ರೆಸ್ ಸೇರ್ಪಡೆಗೆ ಉತ್ಸುಕರಾಗಿದ್ದಾರೆ. ಅವರಲ್ಲಿ ಮಾಜಿ ಮಂತ್ರಿಗಳು ಕೂಡ ಇದ್ದಾರೆ’
-ಸಂತೋಷ್ ಲಾಡ್, ಸಚಿವರು