×
Ad

ಉಡುಪಿ: ಚೂರಿಯಿಂದ ಇರಿದು ವಿದ್ಯಾರ್ಥಿಯ ಕೊಲೆಯತ್ನ; ಪ್ರಕರಣ ದಾಖಲು

Update: 2024-01-30 22:07 IST

ಉಡುಪಿ: ಬೈಕ್ ವಿಚಾರದಲ್ಲಿ ವಿದ್ಯಾರ್ಥಿಗೆ ತಂಡವೊಂದು ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿರುವ ಘಟನೆ ಜ.29ರಂದು ಉಡುಪಿ ಎಂಜಿಎಂ ಕಾಲೇಜಿನ ಮೈದಾನದಲ್ಲಿ ನಡೆದಿದೆ.

ಇರಿತಕ್ಕೆ ಒಳಗಾದ ವಿದ್ಯಾರ್ಥಿಯನ್ನು 52ನೇ ಹೇರೂರು ಗ್ರಾಮದ ಪ್ರತೀಕ್ (17) ಎಂದು ಗುರುತಿಸಲಾಗಿದೆ. ಇವರು ವಿದ್ಯಾ ಕೋಚಿಂಗ್ ಸೆಂಟರ್‌ನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗವನ್ನು ಮಾಡಿಕೊಂಡಿದ್ದು, ಅದೇ ಕೋಚಿಂಗ್ ಸೆಂಟರ್‌ನಲ್ಲಿ ಸುಹಾಸ್ ಎಂಬಾತನ ಪರಿಚಯವಾಗಿತ್ತು. ಪ್ರತೀಕ್ ಒಂದೂವರೆ ತಿಂಗಳ ಹಿಂದೆ ಸೆಕೆಂಡ್ ಹ್ಯಾಂಡ್ ಬೈಕನ್ನು ಖರೀದಿಸಿದ್ದರು.

ಈ ಬಗ್ಗೆ ಸುಹಾಸ್, ಕದ್ದ ಬೈಕ್ ತಂದಿರುವುದಾಗಿ ಪ್ರತೀಕ್ ಮೇಲೆ ಆರೋಪ ಹೊರಿಸಿದ್ದನು. ಜ.28ರಂದು ಸಂಜೆ ಪ್ರತೀಕ್ ಮನೆಯಲ್ಲಿದ್ದಾಗ ಸುಹಾಸ್ ಕರೆ ಮಾಡಿದ್ದು, ಈ ವೇಳೆ ತರುಣ್ ಎಂಬಾತ ಬೈದಿದ್ದನು. ಜ.29ರಂದು ಪ್ರತೀಕ್‌ಗೆ ಎಂಜಿಎಂ ಕಾಲೇಜು ಮೈದಾನಕ್ಕೆ ಬರಲು ಸುಹಾಸ್ ಹೇಳಿದ್ದು, ಅದರಂತೆ ಪ್ರತೀಕ್ ಹೋದಾಗ ಆರೋಪಿಗಳಾದ ಸುಹಾಸ್, ಮೋನೀಶ್ , ತರುಣ್ ಹಾಗೂ ಇತರ ಇಬ್ಬರು ಅಪರಿಚಿತ ವ್ಯಕ್ತಿಗಳು ಸೇರಿ ಅವಾಚ್ಯ ಶಬ್ಧಗಳಿಂದ ಬೈದು ಹಲ್ಲೆ ನಡೆಸಿ, ಚಾಕುವಿನಿಂದ ಹೊಟ್ಟೆಗೆ ಇರಿದು ಕೊಲೆಗೆ ಯತ್ನಿಸಿರುವುದಾಗಿ ದೂರಲಾಗಿದೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News