ಸೌಜನ್ಯ ಪ್ರಕರಣದ ಆರೋಪಿಗಳ ಪತ್ತೆಗೆ ಕೊರಗಜ್ಜನಿಗೆ ಉರುಳು ಸೇವೆ
ಉಡುಪಿ: ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಬೇಕು ಮತ್ತು ಆಕೆಯ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಬಳಿಯ ನೆಲ್ಲಿಕಟ್ಟೆ ಕೊರಗಜ್ಜ ದೈವಸ್ಥಾನದಲ್ಲಿ ದೈವ ಕೊರಗಜ್ಜನಿಗೆ ಉರುಳು ಸೇವೆಯ ಮೂಲಕ ರವಿವಾರ ಪೂಜೆ ಸಲ್ಲಿಸಲಾಯಿತು.
ಮೊದಲು ಪ್ರಾರ್ಥನೆ ಸಲ್ಲಿಸಿದ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು, ಬಳಿಕ ಸೌಜನ್ಯಾಳ ಭಾವಚಿತ್ರ ಹಿಡಿದು ಉರುಳು ಸೇವೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸೌಜನ್ಯಾಗೆ ನ್ಯಾಯ ಸಿಗಬೇಕು ಎಂಬ ನಿಟ್ಟಿನಲ್ಲಿ ಅನೇಕ ಪ್ರತಿಭಟನೆಗಳು ನಡೆಯುತ್ತಿವೆ. ಆದರೂ ಸರಕಾರ ಈ ಬಗ್ಗೆ ಮೌನ ವಹಿಸಿದೆ. ಆದುದರಿಂದ ಸೌಜನ್ಯ ಅತ್ಯಾಚಾರ ಮಾಡಿದ ಆರೋಪಿಗೆ ಕೊರಗಜ್ಜನೇ ಶಿಕ್ಷೆ ಕೊಡಬೇಕು. ಆರೋಪಿ ಯಾರೆಂಬುದು ಪತ್ತೆ ಆಗಬೇಕು. ಆರೋಪಿಯೇ ಮುಂದೆ ಬಂದು ತಪ್ಪೊಪ್ಪಿಕೊಳ್ಳಬೇಕು ಎಂದರು.
ನಿತ್ಯಾನಂದ ಒಳಕಾಡು ಅವರ ಉರುಳು ಸೇವೆಗೆ ದೈವಸ್ಥಾನದ ಅಧ್ಯಕ್ಷರು, ಉಪಾಧ್ಯಕ್ಷರು, ಸ್ಥಳೀಯ ರಿಕ್ಷಾ ಚಾಲಕರು, ಸ್ಥಳೀಯ ನಾಗರಿಕರು ಸಹಕಾರ ನೀಡಿದರು.